ADVERTISEMENT

ಸಿಎಂ ಸಿದ್ದರಾಮಯ್ಯ ಸಾವಿರ ದಿನ: ರಾಜಕೀಯ ಪಯಣದ ಹಾದಿ ಚಿತ್ರಗಳಲ್ಲಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಜನವರಿ 2026, 8:03 IST
Last Updated 6 ಜನವರಿ 2026, 8:03 IST
<div class="paragraphs"><p>ಸಿದ್ದರಾಮಯ್ಯ ರಾಜಕೀಯ ಪಯಣ</p></div>

ಸಿದ್ದರಾಮಯ್ಯ ರಾಜಕೀಯ ಪಯಣ

   

ಪಿವಿ ಆರ್ಕೈವ್ಸ್‌

ಸಿದ್ದರಾಮಯ್ಯ ಕೇವಲ ಒಂದುವರ್ಗಕ್ಕೆ ಮಾತ್ರ ಸೀಮಿತರಾದವರಲ್ಲ. ಇಡಿ ರಾಜ್ಯದ ರಾಜಕೀಯದ ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ ಅತ್ಯಂತ ವರ್ಣ ರಂಜಿತ ವ್ಯಕ್ತಿತ್ವದ ಜತೆಗೆ ಅನೇಕ ಏಳು ಬೀಳುಗಳನ್ನು ಕಂಡಿರುವ ಇವರು ಅಧಿಕಾರದ ವಿವಿಧ ಮಜಲುಗಳ ಅನುಭವಗಳನ್ನು ಪಡೆದು ಮುಖ್ಯಮಂತ್ರಿ ಸ್ಥಾನಕ್ಕೆ ತಾವು ಅರ್ಹರು ಎಂಬುದನ್ನು ಸಾಬೀತುಮಾಡಿದವರು

ADVERTISEMENT

1996ರ ಮೇ 31ರಂದು ಸಚಿವರಾಗಿ ರಾಜ್ಯಪಾಲ ಖುರ್ಷಿದ್ ಆಲಂಖಾನ್ ಅವರಿಂದ ಪ್ರಮಾಣ ವಚನ ಸ್ವೀಕರಿಸುತ್ತಿರುವ ಸಿದ್ದರಾಮಯ್ಯ. ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಇದ್ದಾರೆ.

ಮೈಸೂರು ಜಿಲ್ಲೆಯ ವರುಣಾ ಹೋಬಳಿಯ ಸಿದ್ದರಾಮನ ಹುಂಡಿ ಎಂಬ ಗ್ರಾಮದಲ್ಲಿ 1948ರ ಆಗಸ್ಟ್ 12ರಂದು ಹುಟ್ಟಿದ ಇವರು ಓದಿದ್ದು ಕಾನೂನು. ಸ್ವಲ್ಪ ಕಾಲ ಮೈಸೂರಿನಲ್ಲಿ ವಕೀಲ ವೃತ್ತಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಸಿದ್ದರಾಮಯ್ಯ 1978ರಲ್ಲಿ ತಮ್ಮನ್ನು ಸಂಪೂರ್ಣವಾಗಿ ರಾಜಕೀಯದಲ್ಲಿ ತೊಡಗಿಸಿಕೊಂಡರು.

ಹಣಕಾಸು ಸಚಿವರಾಗಿ ಸಿದ್ದರಾಮಯ್ಯ ಅವರಿಂದ ಬಜೆಟ್ ಮಂಡನೆ

ಚಾಮುಂಡೇಶ್ವರಿ ಕ್ಷೇತ್ರದಿಂದ ಭಾರತೀಯ ಲೋಕದಳ ಪಕ್ಷದ ಟಿಕೆಟ್‌ ಪಡೆದು ಮೈಸೂರು ತಾಲ್ಲೂಕು ಮಂಡಳಿಗೆ ಸದಸ್ಯರಾಗಿ ಚುನಾಯಿತರಾದ ಸಿದ್ದರಾಮಯ್ಯನವರ ರಾಜಕೀಯ ಜೀವನ ಏರುಪೇರಿನದು.

ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದ ವರನಟ ಡಾ. ರಾಜಕುಮಾರ್‌ ಅವರನ್ನು ರಾಜ್ಯ ಸರ್ಕಾರದಿಂದ ವಿಧಾನಸೌಧದಲ್ಲಿ ಅಭಿನಂದಿಸಿದ (1996ರ ಆ. 13) ಸಿದ್ದರಾಮಯ್ಯ. ಸಂಸ್ಕೃತಿ ಸಚಿವೆ ಲೀಲಾದೇವಿ ಆರ್. ಪ್ರಸಾದ್, ಪಾರ್ವತಮ್ಮ ರಾಜಕುಮಾರ್ ಹಾಗೂ ಎಂ.ಸಿ. ನಾಣಯ್ಯ ಇದ್ದಾರೆ. 

1983ರಲ್ಲಿ ಇವರು ಮೊದಲ ಬಾರಿಗೆ ವಿಧಾನಸಭೆಯನ್ನು ಪ್ರವೇಶಿಸಿ ನಂತರದಲ್ಲಿ ಜನತಾ ಪಕ್ಷವನ್ನು ಸೇರಿದರು. ಈ ಅವಧಿಯಲ್ಲಿ ಕನ್ನಡ ಕಾವಲು ಸಮಿತಿಯ ಮೊದಲ ಅಧ್ಯಕ್ಷರಾಗಿ ಆಯ್ಕೆಯಾಗಿ ಆಡಳಿತ ಭಾಷೆಯಾಗಿ ಕನ್ನಡವನ್ನು ತರಲು ಬಹುವಾಗಿ ಶ್ರಮಿಸಿದರು.

ರಾಜಕೀಯ ಗುರು ರಾಮಕೃಷ್ಣ ಹೆಗಡೆ ಅವರೊಂದಿಗೆ ಸಿದ್ದರಾಮಯ್ಯ ಆಪ್ತ ಸಮಾಲೋಚನೆ

1985ರಲ್ಲಿ ಬಂದ ಮಧ್ಯಂತರ ಚುನಾವಣೆಯಲ್ಲೂ ವಿಧಾನಸಭೆಗೆ ಆರಿಸಿ ಬಂದ ಸಿದ್ದರಾಮಯ್ಯ ರಾಮಕೃಷ್ಣ ಹೆಗಡೆ ಅವರ ಸಚಿವ ಸಂಪುಟದಲ್ಲಿ ಪಶು ಸಂಗೋಪನಾ ಖಾತೆಯ ಸಚಿವ ಸ್ಥಾನ ಪಡೆಯುವಲ್ಲಿ ಯಶಸ್ವಿಯಾದರು.

1997ರ ಫೆ. 10ರಂದು ನಡೆದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಬಿ. ರಾಚಯ್ಯ ಅವರನ್ನು ಮಲ್ಲಿಕಾರ್ಜುನ ಖರ್ಗೆ ಸನ್ಮಾನಿಸಿದರು. ಸಿದ್ದರಾಮಯ್ಯ ಇದ್ದಾರೆ.

ಈ ಅವಧಿಯಲ್ಲೇ ಅವರು ಪಶುಸಂಗೋಪನೆ ಖಾತೆಯ ಜತೆಗೆ ರೇಷ್ಮೆ ಖಾತೆ, ಸಾರಿಗೆ ಖಾತೆಗಳನ್ನು ನಿಭಾಯಿಸಿ ತಮ್ಮ ರಾಜಕೀಯ ಅನುಭವಗಳನ್ನು ಪಡೆದರು.

1999ರ ಡಿ. 31ರಂದು ನಡೆದ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಐಎಎಸ್ ಅಧಿಕಾರಿ ನಂಜುಂಡಯ್ಯ ಅವರನ್ನು ಸನ್ಮಾನಿಸಿದ ಕ್ಷಣ. ಬಿ.ಕೆ. ರವಿ, ಎಚ್‌.ಎಂ. ರೇವಣ್ಣ ಮತ್ತು ಮೇಯರ್ ಹುಚ್ಚಪ್ಪ ಇದ್ದಾರೆ.

ಆದರೆ 1989ರ ವಿಧಾನಸಭಾ ಚುನಾವಣೆಯಲ್ಲಿ ಮೊದಲಬಾರಿಗೆ ಇವರು ಸೋಲು ಕಾಣಬೇಕಾಯಿತು. ರಾಜಶೇಖರಮೂರ್ತಿ ಇವರನ್ನು ಮಣಿಸಿದರು.

2000 ಇಸವಿಯ ಆ. 31ರಂದು ಬೆಂಗಳೂರಿನ ಜನತಾದಳ ಕಚೇರಿಯಲ್ಲಿ ನಡೆದ ಡಿ. ದೇವರಾಜ ಅರಸು ಅವರ ಜನ್ಮದಿನ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಹಾಗೂ ಎಚ್.ಡಿ. ದೇವೇಗೌಡ ಅವರ ನಡುವಿನ ಸಮಾಲೊಚನೆ. ನಾರಾಯಣ ಸ್ವಾಮಿ, ಡಿ. ಮಂಜುನಾಥ, ಎಚ್.ಎನ್. ನಾಗೇಗೌಡ ಇದ್ದಾರೆ.

1992ರಲ್ಲಿ ಜನತಾದಳದ ಮಹಾಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸಿದರು.

ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕನಾಗಿ ಸಿದ್ದರಾಮಯ್ಯ ಅಬ್ಬರ

1994ರಲ್ಲಿ ಮತ್ತೆ ವಿಧಾನಸಭೆಯನ್ನು ಪ್ರವೇಶಿಸಿದ ಸಿದ್ದರಾಮಯ್ಯ ಅವರಿಗೆ ಒಲಿದಿದ್ದು ಮಹತ್ವದ ಹಣಕಾಸು ಖಾತೆ. ದೇವೇಗೌಡರ ಸಂಪುಟದಲ್ಲಿ ಹಣಕಾಸು ಮಂತ್ರಿಯಾಗಿದ್ದ ಇವರು ದೇವೇಗೌಡರು ಪ್ರಧಾನಿಯಾದಾಗ ರಾಜ್ಯದಲ್ಲಿ ಮುಖ್ಯಮಂತ್ರಿಯಾದ ಜೆ.ಎಚ್. ಪಟೇಲ್ ಅವರ ಸಂಪುಟದಲ್ಲಿ 1996ರಲ್ಲಿ ಉಪಮುಖ್ಯಮಂತ್ರಿ ಹುದ್ದೆಗೇರಿದರು.

ಮುಖ್ಯಮಂತ್ರಿಯಾಗಿದ್ದ ಎಚ್.ಡಿ. ದೇವೇಗೌಡ ಅವರು ತಮ್ಮ ಪತ್ನಿ ಚೆನ್ನಮ್ಮ ಅವರೊಂದಿಗೆ ನಂಜನಗೂಡಿನ ನಂಜುಂಡೇಶ್ವರ ದೇವಾಲಯಕ್ಕೆ 1996ರ ಮಾರ್ಚ್‌ 6ರಂದು ಭೇಟಿ ನೀಡಿದ ಸಂದರ್ಭದಲ್ಲಿ ಸಿದ್ದರಾಮಯ್ಯ ಹಾಗೂ ಇತರರು ಅವರ ಜತೆಗೂಡಿದ್ದರು.

ಆದರೆ ಮತ್ತೆ 1999ರ ಚುನಾವಣೆಯಲ್ಲಿ ಇವರು ಸೋಲು ಕಾಣಬೇಕಾಗಿ ಬಂದಿತು. ಆದರೆ ಕಂಗೆಡದ ಸಿದ್ದರಾಮಯ್ಯ 2004ರಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗುವ ಅವಕಾಶವನ್ನು ಕೂದಲೆಳೆ ಅಂತರದಲ್ಲಿ ತಪ್ಪಿಸಿಕೊಂಡರು. ಅವರು ಮತ್ತೆ ಉಪಮುಖ್ಯಮಂತ್ರಿ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗಿ ಬಂತು.

ವಿದೇಶ ಪ್ರವಾಸದಲ್ಲಿ ಸಿದ್ದರಾಮಯ್ಯ

2006ರಲ್ಲಿ ದೇವೇಗೌಡರೊಂದಿಗೆ ಮೂಡಿದ ವಿರಸದ ಕಾರಣ ಕಾಂಗ್ರೆಸ್ ಪಕ್ಷ ಸೇರಿ ಚಾಮುಂಡೇಶ್ವರಿ ಕ್ಷೇತ್ರದ ಉಪಚುನಾವಣೆಗೆ ಸ್ಪರ್ಧಿಸಿ ಕೇವಲ 257 ಮತಗಳ ಅಂತರದಿಂದ ಜಯ ಸಾಧಿಸಿದರು.

ದಸರಾ ಸಂದರ್ಭದಲ್ಲಿ ನಾಗನಹಳ್ಳಿಯಲ್ಲಿ ನಡೆದ ರೈತ ದಸರಾದಲ್ಲಿ ಬಂಡೂರು ಕುರಿ ಪ್ರದರ್ಶನ ವೀಕ್ಷಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ

2008ರಲ್ಲಿನ ಚುನಾವಣೆಯಲ್ಲಿ ಮತ್ತೆ ಜಯ ಸಾಧಿಸಿ ವಿಧಾನಸಭೆಯ ಪ್ರತಿಪಕ್ಷದ ನಾಯಕನಾಗಿ ಆಯ್ಕೆಯಾದರು. ಸತತವಾಗಿ ಮುಖ್ಯಮಂತ್ರಿ ಸ್ಥಾನದಿಂದ ವಂಚಿತರಾಗುತ್ತಲೇ ಬಂದ ಸಿದ್ದರಾಮಯ್ಯನವರ ಪಾಲಿಗೆ ಮುಖ್ಯಮಂತ್ರಿ ಗಾದಿ ಈ ಬಾರಿ ಕಟ್ಟಕಡೆಗೂ ಒಲಿದು ಬಂದಿತು.

ಬೆಂಗಳೂರಿನಿಂದ ಬಳ್ಳಾರಿಗೆ ಕಾಂಗ್ರೆಸ್ ಪಾದಯಾತ್ರೆಯಲ್ಲಿ ಸಿದ್ದರಾಮಯ್ಯ ಅವರೊಂದಿಗೆ ತೇಜಸ್ವಿನಿ, ಸಿ.ಎಂ. ಇಬ್ರಾಹಿಂ, ಡಿ.ಕೆ. ಶಿವಕುಮಾರ್

ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ಸಿದ್ದರಾಮಯ್ಯ. ರೋಷನ್ ಬೇಗ್, ಎಚ್. ಆಂಜನೇಯ

ಮುಖ್ಯಮಂತ್ರಿಯಾಗಿ ಸಾವಿರ ದಿನ ಪೂರೈಸಿದ ಸಿದ್ದರಾಮಯ್ಯ ಅವರು ದಿ. ದೇವರಾಜ ಅರಸು ಅವರ ಹೆಸರಿನಲ್ಲಿದ್ದ ಕರ್ನಾಟಕದ ದೀರ್ಘಾವಧಿ ಮುಖ್ಯಮಂತ್ರಿ ಎಂಬ ದಾಖಲೆಯನ್ನು ಡಿ. 6ರಂದು ಮುರಿದಿದ್ದಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.