ADVERTISEMENT

ಸಾರಿಗೆ ಇಲಾಖೆ ತೆರಿಗೆ ಸಂಗ್ರಹ ಕುಂಠಿತ: ಡಿಸೆಂಬರ್ ಅಂತ್ಯಕ್ಕೆ ₹469 ಕೋಟಿ ಕೊರತೆ

ಮುಖ್ಯಮಂತ್ರಿ ಯಡಿಯೂರಪ್ಪ ಸೋಮವಾರ ನಡೆಸಿದ ಇಲಾಖಾವಾರು ಪ್ರಗತಿ ಪರಿಶೀಲನೆಯಲ್ಲಿ ಬಹಿರಂಗ

​ಪ್ರಜಾವಾಣಿ ವಾರ್ತೆ
Published 6 ಜನವರಿ 2020, 14:02 IST
Last Updated 6 ಜನವರಿ 2020, 14:02 IST
   

ಬೆಂಗಳೂರು: ಸಾರಿಗೆ ಇಲಾಖೆಯ ತೆರಿಗೆ ಸಂಗ್ರಹದಲ್ಲಿ ಕುಂಠಿತವಾಗಿದ್ದು, ಡಿಸೆಂಬರ್ ಅಂತ್ಯಕ್ಕೆ ₹469 ಕೋಟಿ ಕೊರತೆಯಾಗಿದೆ. ಇಲಾಖೆಯಲ್ಲಿ ಈ ವರ್ಷ 7,100 ಕೋಟಿ ಸಂಗ್ರಹಿಸುವ ಗುರಿ ಹೊಂದಿದ್ದು, ಈವರೆಗೆ ₹4,864 ಕೋಟಿಯಷ್ಟೇ ಸಂಗ್ರಹವಾಗಿದೆ.

ತೆರಿಗೆ ಸಂಗ್ರಹದಲ್ಲಿ ಹಿನ್ನಡೆಯಾಗುತ್ತಿರುವ ಹಿನ್ನೆಲೆಯಲ್ಲಿ ತೆರಿಗೆ ಸಂಗ್ರಹಿಸುವ ಪ್ರಮುಖ ಇಲಾಖೆಗಳಾದ ವಾಣಿಜ್ಯ, ಅಬಕಾರಿ, ನೋಂದಣಿ ಹಾಗೂ ಮುದ್ರಾಂಕ, ಸಾರಿಗೆ, ಗಣಿ ಹಾಗೂ ಭೂ ವಿಜ್ಞಾನ ಇಲಾಖೆ ಹಿರಿಯ ಅಧಿಕಾರಿಗಳ ಜತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೋಮವಾರ ಸಭೆ ನಡೆಸಿದರು.

ಸಭೆ ನಂತರ ಸುದ್ದಿಗಾರರೊಂದಿಗೆ ಮುಖ್ಯಮಂತ್ರಿ ಮಾತನಾಡಿ, ಒಟ್ಟಾರೆಯಾಗಿ ₹1.17 ಲಕ್ಷ ಕೋಟಿ ತೆರಿಗೆ ಸಂಗ್ರಹಿಸಬೇಕಿದ್ದು, ಮಾರ್ಚ್ ಅಂತ್ಯದ ವೇಳೆಗೆ ಈ ಗುರಿ ತಲುಪಲಾಗುವುದು. ರಾಜ್ಯದಲ್ಲಿ ವಿತ್ತೀಯ ಕೊರತೆಯಾಗದಂತೆ ಎಚ್ಚರವಹಿಸಲಾಗಿದೆ ಎಂದರು.

ADVERTISEMENT

‘ಸಾರಿಗೆ ಇಲಾಖೆಯನ್ನು ಹೊರತುಪಡಿಸಿದರೆ ಉಳಿದ ಇಲಾಖೆಗಳಲ್ಲಿ ತೆರಿಗೆ ಸಂಗ್ರಹದಲ್ಲಿ ನಿರೀಕ್ಷಿತ ಸಾಧನೆ ಆಗಿದೆ. ವಾಹನ ಮಾರಾಟ ಕುಸಿತದ ಹಿನ್ನೆಲೆಯಲ್ಲಿ ತೆರಿಗೆ ಸಂಗ್ರಹ ₹469 ಕೋಟಿ ಕಡಿಮೆಯಾಗಿದೆ. ಈಗ ಆಟೊಮೊಬೈಲ್ ಕ್ಷೇತ್ರದಲ್ಲಿ ಚೇತರಿಕೆ ಕಂಡುಬರುತ್ತಿದ್ದು, ತೆರಿಗೆ ಸಂಗ್ರಹದ ಪ್ರಮಾಣ ಸುಧಾರಿಸಿದರೂ ಮಾರ್ಚ್ ವೇಳೆಗೆ ₹300 ಕೋಟಿ ಕೊರತೆ ಬೀಳುವ ಸಾಧ್ಯತೆ ಇದೆ’ ಎಂದು ಹೇಳಿದರು.

ಸಾರಿಗೆ ಇಲಾಖೆಯಲ್ಲಿ ಉಂಟಾಗುವ ಕೊರತೆಯನ್ನು ಇತರ ಇಲಾಖೆಗಳಲ್ಲಿ ಹೆಚ್ಚು ತೆರಿಗೆ ಸಂಗ್ರಹಿಸುವ ಮೂಲಕ ಸರಿದೂಗಿಸಲಾಗುವುದು. ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ಕಳೆದ ವರ್ಷಕ್ಕಿಂತ ₹410.75 ಕೋಟಿ ಹೆಚ್ಚುವರಿ ತೆರಿಗೆ ಸಂಗ್ರಹವಾಗಿದೆ ಎಂದು ವಿವರಿಸಿದರು.

‘ಬಸ್‌ಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಸರಕು ಸಾಗಣೆ ಮಾಡುತ್ತಿದ್ದು, ತೆರಿಗೆ ವಂಚಿಸಲಾಗುತ್ತಿದೆ. ಹೋಟೆಲ್, ರೆಸ್ಟೋರೆಂಟ್ ಸೇರಿದಂತೆ ವಾಣಿಜ್ಯ ಚಟುವಟಿಕೆ ನಡೆಸುವ ಕೇಂದ್ರಗಳಲ್ಲಿ ತೆರಿಗೆ ವಂಚನೆ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಅಂತಹ ಸಂಸ್ಥೆಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮಕೈಗೊಂಡು, ತೆರಿಗೆ ವಸೂಲಿ ಮಾಡುವಂತೆ ಸೂಚನೆ ನೀಡಿದ್ದೇನೆ’ ಎಂದರು.

ಜಿಎಸ್‌ಟಿ ಸಂಗ್ರಹ:

ಸರಕು ಹಾಗೂ ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹದಲ್ಲಿ ರಾಜ್ಯ ಎರಡನೇ ಸ್ಥಾನದಲ್ಲಿದ್ದು, ಈವರೆಗೆ ₹61,245 ಕೋಟಿ ಸಂಗ್ರಹವಾಗಿದೆ. ಶೇ 14.2ರಷ್ಟು ಪ್ರಗತಿ ಸಾಧಿಸಿದ್ದೇವೆ ಎಂದರು.

ಮಾರ್ಚ್ ವೇಳೆಗೆ ತೆರಿಗೆ ಸಂಗ್ರಹದಲ್ಲಿ ನಿರೀಕ್ಷಿತ ಗುರಿಮುಟ್ಟುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ನಿಗದಿತ ಗುರಿಯಲ್ಲಿ ಒಂದು ರೂಪಾಯಿಯೂ ಕಡಿಮೆ ಆಗದಂತೆ ನೋಡಿಕೊಳ್ಳಬೇಕು. ತೆರಿಗೆ ವಂಚನೆ ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳಬೇಕು. ಮುಂದಿನ ಮೂರು ತಿಂಗಳು ಹೆಚ್ಚಿನ ಶ್ರಮವಹಿಸಿ ಕೆಲಸ ಮಾಡುವಂತೆ ಸಭೆಯಲ್ಲಿ ಸೂಚನೆ ನೀಡಿದರು ಎಂದು ಮೂಲಗಳು ತಿಳಿಸಿವೆ.

ತೆರಿಗೆ ಸಂಗ್ರಹ ಡಿಸೆಂಬರ್ ಅಂತ್ಯಕ್ಕೆ (₹ ಕೋಟಿಗಳಲ್ಲಿ)

ಇಲಾಖೆ: ಗುರಿ: ಸಾಧನೆ: ಶೇ
ವಾಣಿಜ್ಯ ತೆರಿಗೆ: 76,046 55,984 73.06
ಅಬಕಾರಿ: 20,750 16,187 77.23
ನೋಂದಣಿ–ಮುದ್ರಾಂಕ: 11,828 8,297 70.15
ಸಾರಿಗೆ: 7,100 4,864 68.51
ಗಣಿ–ಭೂವಿಜ್ಞಾನ: 3,550 2,527 71.00

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.