ಮೈಸೂರಿನ ಮಹಾರಾಜ ಮೈದಾನದ ಆವರಣದಲ್ಲಿ ಶನಿವಾರ ನಡೆಯಲಿರುವ ‘ಸಾಧನಾ ಸಮಾವೇಶ’ದ ವೇದಿಕೆ ಸಜ್ಜುಗೊಳಿಸುವ ಕಾರ್ಯ ಶುಕ್ರವಾರ ನಡೆಯಿತು
– ಪ್ರಜಾವಾಣಿ ಚಿತ್ರ/ಅನೂಪ್ ರಾಘ. ಟಿ.
ಒಂದು ಲಕ್ಷ ಮಂದಿ ಸೇರಿಸುವ ಗುರಿ | ₹2,578 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಚಾಲನೆ, ಉದ್ಘಾಟನೆ
ಮೈಸೂರು: ಇಲ್ಲಿನ ಮಹಾರಾಜ ಕಾಲೇಜು ಮೈದಾನದಲ್ಲಿ ಶನಿವಾರ (ಜುಲೈ 19) ರಾಜ್ಯ ಸರ್ಕಾರದ ಎರಡು ವರ್ಷಗಳ ಸಾಧನಾ ಸಮಾವೇಶಕ್ಕೆ ವೇದಿಕೆ ಸಜ್ಜಾಗಿದೆ. ‘ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಶಕ್ತಿ ಪ್ರದರ್ಶನದ ವೇದಿಕೆ’ ಎಂದೇ ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.
‘ನಾನೇ ಐದೂ ವರ್ಷ ಮುಖ್ಯಮಂತ್ರಿ ಆಗಿರುತ್ತೇನೆ, ನಾಯಕತ್ವ ಬದಲಾವಣೆ ಇಲ್ಲ, ಡಿ.ಕೆ.ಶಿವಕುಮಾರ್ ಅವರಿಗೆ ಹೆಚ್ಚಿನ ಶಾಸಕ ಬೆಂಬಲವಿಲ್ಲ’ ಎಂದು ಸಿದ್ದರಾಮಯ್ಯ ಅವರು ಹೇಳಿಕೆ ನೀಡಿದ ನಂತರ ನಡೆಯುತ್ತಿರುವ ಪಕ್ಷದ ಬೃಹತ್ ಸಮಾವೇಶ ಇದಾಗಿದೆ.
‘ತವರು ಜಿಲ್ಲೆ ಮೈಸೂರಿನಲ್ಲಿ ನಿಂತು ಬೆಂಬಲಿಗರು, ಅಭಿಮಾನಿಗಳು ಹಾಗೂ ಕಾರ್ಯಕರ್ತರೊಂದಿಗೆ ‘ಶಕ್ತಿ ಪ್ರದರ್ಶನ’ ಮಾಡುವ ಮೂಲಕ ವಿರೋಧಿಗಳು ಹಾಗೂ ಹೈಕಮಾಂಡ್‌ಗೆ ಸಂದೇಶ ರವಾನಿಸಲು ಸಿದ್ದರಾಮಯ್ಯ ಯೋಜಿಸಿರುವ ಭಾಗವೇ ಈ ಸಮಾವೇಶ’ ಎಂದೇ ಇದನ್ನು ವಿಶ್ಲೇಷಿಸಲಾಗುತ್ತಿದೆ. ಈ ಕಾರಣದಿಂದಲೇ ಸಮಾವೇಶವು ರಾಜಕೀಯವಾಗಿ ಮಹತ್ವ ಪಡೆದುಕೊಂಡಿದೆ. ರಾಜಕೀಯ ಲಾಭ–ನಷ್ಟದ ಲೆಕ್ಕಾಚಾರದ ಕುರಿತಾಗಿಯೇ ಚರ್ಚೆ ನಡೆಯುತ್ತಿದೆ.
‘ಮುಡಾ ನಿವೇಶನಗಳ ಹಂಚಿಕೆಯಲ್ಲಿ ಅಕ್ರಮ ನಡೆದಿದೆ’ ಎಂದು ವಿರೋಧ ಪಕ್ಷಗಳಾದ ಬಿಜೆಪಿ–ಜೆಡಿಎಸ್‌ನವರು ಆರೋಪಿಸಿದಾಗಲೂ ಸಿದ್ದರಾಮಯ್ಯ ಇಲ್ಲಿ ಸಮಾವೇಶ ನಡೆಸಿ ಶಕ್ತಿ ಪ್ರದರ್ಶಿಸಿದ್ದರು.
ಸರ್ಕಾರದ ಸಾಧನೆಗಳನ್ನು ಬಿಂಬಿಸುವ ಸಮಾವೇಶಕ್ಕೆ ಲಕ್ಷಕ್ಕೂ ಹೆಚ್ಚಿನ ಜನರನ್ನು ಸೇರಿಸಬೇಕು ಎಂಬ ಗುರಿಯನ್ನು ಈ ಭಾಗದ ಸಚಿವರು, ಶಾಸಕರಿಗೆ ನೀಡಿದ್ದಾರೆ ಎನ್ನಲಾಗಿದೆ. ಬರೋಬ್ಬರಿ ₹2,569 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನಡೆಯಲಿದೆ.
ಮುಖ್ಯಮಂತ್ರಿ ಜೊತೆಗೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ ಸಚಿವರು ಪಾಲ್ಗೊಳ್ಳುವರು.
ಬೃಹತ್ ವೇದಿಕೆ ಸಜ್ಜಾಗಿದ್ದು, ಸಿದ್ದರಾಮಯ್ಯ ಆಪ್ತರೂ ಆದ ಸಚಿವ ಡಾ.ಎಚ್.ಸಿ. ಮಹದೇವಪ್ಪ ಆಯೋಜನೆಯ ನೇತೃತ್ವ ವಹಿಸಿದ್ದಾರೆ. ಇಂತಿಷ್ಟು ಜನರನ್ನು ಕರೆತರಲು ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ‘ಗ್ಯಾರಂಟಿ’ ಯೋಜನೆಗಳ ಫಲಾನುಭವಿಗಳನ್ನು ಕರೆತರುವಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ.
ಅತ್ಯಧಿಕ ಸಂಖ್ಯೆಯಲ್ಲಿ ಜನರು ಪಾಲ್ಗೊಳ್ಳುವಂತೆ ಮಾಡಿ ಸಿದ್ದರಾಮಯ್ಯ ಅವರಿಗೆ ‘ಬಲ’ ತುಂಬಬೇಕು ಎನ್ನುವುದು ಅವರ ಬಣದವರು ಹಾಗೂ ಬೆಂಬಲಿಗರ ಗುರಿಯಾಗಿದೆ ಎಂದು ಹೇಳಲಾಗುತ್ತಿದೆ.
ಸಮಾವೇಶ ಮೊದಲೇ ನಿಗದಿಯಾಗಿತ್ತು. ಶಕ್ತಿ ಪ್ರದರ್ಶನವೇನಿಲ್ಲ. ನಾಯಕತ್ವ ಬದಲಾವಣೆ ಅದಲು-ಬದಲು ಮೊದಲಾದ ವಿಚಾರಗಳು ಈಗ ಅನಗತ್ಯ. ಅಭಿವೃದ್ಧಿಯಷ್ಟೇ ಮುಖ್ಯಡಾ.ಎಚ್.ಸಿ. ಮಹದೇವಪ್ಪ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ
ಸಿದ್ದರಾಮಯ್ಯ ತಮ್ಮ ಕುರ್ಚಿಗೆ ಸಂಕಷ್ಟ ಬಂದಾಗಲೆಲ್ಲಾ ಸಮಾವೇಶ ನಡೆಸುತ್ತಾರೆ. ಜನ ಸೇರಿಸಲು ಜಿಲ್ಲೆಯ ಕಾಂಗ್ರೆಸ್ ಶಾಸಕರಿಗೆ ತಲಾ ₹10 ಲಕ್ಷ ಕೊಟ್ಟಿದ್ದಾರೆಎ.ಎಚ್. ವಿಶ್ವನಾಥ್ ಬಿಜೆಪಿ ವಿಧಾನಪರಿಷತ್ ಸದಸ್ಯ
‘ಸರ್ಕಾರದ ಸಾಧನೆ ಜನರ ಮುಂದಿಡುವ ಪ್ರಯತ್ನ’
‘ಮೈಸೂರಿನಲ್ಲಿ ನಡೆಯುವ ಸಮಾವೇಶ ಯಾರ ಶಕ್ತಿ ಪ್ರದರ್ಶನವೂ ಅಲ್ಲ. ಪಕ್ಷ ಹಾಗೂ ಸರ್ಕಾರದ ಕೆಲಸಗಳನ್ನು ಜನರ ಮುಂದಿಡುವ ಪ್ರಯತ್ನವಿದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದರು. ‘ಈ ಸರ್ಕಾರ ಏನೂ ಮಾಡುತ್ತಿಲ್ಲ ಗ್ಯಾರಂಟಿ ಯೋಜನೆಗಳಿಂದಾಗಿ ದುಡ್ಡಿಲ್ಲ ಎಂದೆಲ್ಲಾ ಬಿಜೆಪಿಯವರು ಅಪಪ್ರಚಾರ ಮಾಡುತ್ತಿದ್ದಾರೆ. ಜನರಿಗೆ ವಾಸ್ತವ ಸ್ಥಿತಿ ತಿಳಿಸಲು ಸಮಾವೇಶ ನಡೆಸುತ್ತಿದ್ದೇವೆ. ದುಡ್ಡಿಲ್ಲದೇ ಹೋಗಿದ್ದರೆ ಮೈಸೂರೊಂದರಲ್ಲೇ ₹2578 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಮಾಡಲಾಗುತ್ತಿತ್ತಾ’ ಎಂದು ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.