ADVERTISEMENT

ವಿವಾದಿತ ಬಿಕಿನಿ ಚಿತ್ರ- ಅಮೆಜಾನ್ ವಿರುದ್ಧ ಕಾನೂನು ಕ್ರಮ: ಅರವಿಂದ ಲಿಂಬಾವಳಿ

​ಪ್ರಜಾವಾಣಿ ವಾರ್ತೆ
Published 5 ಜೂನ್ 2021, 15:22 IST
Last Updated 5 ಜೂನ್ 2021, 15:22 IST
ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ
ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ   

ಬೆಂಗಳೂರು: ಹೆಣ್ಣುಮಕ್ಕಳ ಒಳ ಉಡುಪಿನ ಮೇಲೆ ಕನ್ನಡದ ಬಾವುಟದ ಬಣ್ಣ ಹಾಗೂ ಕರ್ನಾಟಕ ರಾಜ್ಯ ಲಾಂಛನವನ್ನು ಬಳಸಿರುವ ಅಮೆಜಾನ್ ಕೆನಡಾ ಸಂಸ್ಥೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಭರವಸೆ ನೀಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಸಚಿವ, ಕನ್ನಡದ ಭಾಷೆ, ಸಂಸ್ಕೃತಿ ಮತ್ತು ಪರಂಪರೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಕನ್ನಡ ನೆಲದ ಶ್ರೇಷ್ಠತೆಯ ಅರಿವಿಲ್ಲದ ವಿದೇಶಿ ಸಂಸ್ಥೆಗಳು ಕನ್ನಡದ ಅಸ್ಮಿತೆಗೆ ಅವಮಾನ ಮಾಡುವಂತಹ ಯಾವುದೇ ಕೆಲಸ ಮಾಡಿದರೂ ಅದನ್ನು ನಾನು ಪ್ರಬಲವಾಗಿ ಖಂಡಿಸುತ್ತೇನೆ.

ಕನ್ನಡ ನೆಲದ ಭಾವನೆಗೆ ಧಕ್ಕೆ ಮಾಡುವಂತಹ ಯಾವುದೇ ಕ್ರಮಕ್ಕೆ ನನ್ನ ತೀವ್ರ ವಿರೋಧವಿದೆ. ಕನ್ನಡ ಮತ್ತು ಸಂಸ್ಕೃತಿ ಸಚಿವನಾಗಿ ನಾನು ಇಂತಹ ಕೃತ್ಯದ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದು ಅವಶ್ಯವೆಂದು ಭಾವಿಸಿ ಅಮೆಜಾನ್ ಕೆನಡಾ ಸಂಸ್ಥೆಯ ವಿರುದ್ಧ ಕೂಡಲೇ ಕಾನೂನು ಕ್ರಮ ಜರುಗಿಸಲು ಸೂಚಿಸುತ್ತೇನೆ ಎಂದು ಸಚಿವ ಅರವಿಂದ ಲಿಂಬಾವಳಿ ಹೇಳಿದ್ದಾರೆ.

ಅಮೆಜಾನ್ ಕೆನಡಾ ಸಂಸ್ಥೆಯ ವೆಬ್‌ಸೈಟ್‌ನಲ್ಲಿ ಕನ್ನಡದ ಬಾವುಟದ ಬಣ್ಣ ಹಾಗೂ ಕರ್ನಾಟಕದ ರಾಜ್ಯ ಲಾಂಛನವನ್ನು ಹೊಂದಿರುವ ಹೆಣ್ಣುಮಕ್ಕಳ ಒಳ ಉಡುಪನ್ನು ಮಾರಾಟಕ್ಕಿರಿಸಿತ್ತು. ಈ ಕುರಿತು ಕನ್ನಡ ಅಭಿಮಾನಿಗಳಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಇದಾದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಅಮೆಜಾನ್ ವಿವಾದಿತ ಚಿತ್ರವನ್ನು ತೆಗೆದು ಹಾಕಿದೆ.

ಇನ್ನಷ್ಟು..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.