ಗೋವಾ ಸಿಎಂ ಪ್ರಮೋದ್ ಸಾವಂತ್ ಹಾಗೂ ಡಿ.ಕೆ ಶಿವಕುಮಾರ್
ಪಣಜಿ: ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ ಎಂದು ತಮ್ಮ ಬಗ್ಗೆ ಕರ್ನಾಟಕ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಆಡಿರುವ ಮಾತುಗಳು ಕಾಂಗ್ರೆಸ್ ಸಂಸ್ಕೃತಿಯ ಪ್ರತೀಕ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದ್ದಾರೆ.
‘ಮಹದಾಯಿ ಯೋಜನೆ ಆರಂಭಿಸಲು ಕೇಂದ್ರ ಸರ್ಕಾರ ಯಾವುದೇ ಕಾರಣಕ್ಕೂ ಅನುಮತಿ ನೀಡುವುದಿಲ್ಲ’ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದ್ದರು. ಇದಕ್ಕೆ, ಗುರುವಾರ ಪ್ರತಿಕ್ರಿಯಿಸಿದ ಶಿವಕುಮಾರ್, ‘ಕರ್ನಾಟಕಕ್ಕೆ ನೋಟಿಸ್ ನೀಡಲು ಗೋವಾದವರಿಗೆ ಹಕ್ಕಿಲ್ಲ. ಏನೇ ನೋಟಿಸ್ ನೀಡಿದರೂ ನಾವು ಯೋಜನೆ ಕಾಮಗಾರಿ ಆರಂಭಿಸುತ್ತೇವೆ. ಅವರು (ಸಾವಂತ್) ಮಾನಸಿಕ ಸ್ಥಿಮಿತ ಕಳೆದುಕೊಂಡು ಈ ರೀತಿ ಮಾತನಾಡಿದ್ದಾರೆ’ ಎಂದಿದ್ದರು.
ಯೋಜನೆ ಸಂಬಂಧ ಕೆಲಸ ಮುಂದುವರಿಸಿದರೆ ಸುಪ್ರೀಂ ಕೋರ್ಟ್‌ಗೆ ಹೋಗುತ್ತೇವೆ ಎಂದು ಸಾವಂತ್ ಅವರು ವಿಧಾನಸಭೆಯಲ್ಲಿ ಹೇಳಿದ್ದರು.
ಶುಕ್ರವಾರ ಪಣಜಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಾವಂತ್, ‘ಮಹದಾಯಿಯನ್ನು ತಿರುಗಿಸುವುದರ ವಿರುದ್ಧ ನಮ್ಮ ಹಕ್ಕನ್ನು ನಾವು ಸುಪ್ರೀಂ ಕೋರ್ಟ್ ಹಾಗೂ ಕೇಂದ್ರ ಸರ್ಕಾರದಿಂದ ಪಡೆಯುತ್ತಿದ್ದೇವೆ. ನಾವು ಈ ವಿಷಯದ ಬಗ್ಗೆ ಗಂಭೀರವಾಗಿದ್ದೇವೆ. ಕೇಂದ್ರದೊಂದಿಗೆ ನಮ್ಮ ಸಂವಹನ ಮುಂದುವರಿಯಲಿದೆ. ಶಿವಕುಮಾರ್ ಅವರ ಹೇಳಿಕೆ ಕಾಂಗ್ರೆಸ್ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ’ ಎಂದು ಹೇಳಿದ್ದಾರೆ.
ನಿರಾಸೆಗೊಂಡವರು ಮಾತ್ರ ಇಂತಹ ಮಾತುಗಳನ್ನಾಡಲು ಸಾಧ್ಯ. ಎಷ್ಟು ಕೆಳಮಟ್ಟಕ್ಕೆ ಇಳಿಯಬಹುದು ಎಂಬುದರ ಕುರಿತು ಕರ್ನಾಟಕದ ಕಾಂಗ್ರೆಸ್ ನಾಯಕರು ತಮ್ಮತಮ್ಮಲ್ಲೇ ಪೈಪೋಟಿ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಮಹದಾಯಿ ನದಿ ಜಲಾನಯನ ಪ್ರದೇಶದಲ್ಲಿ ಕರ್ನಾಟಕದ ಕಳಸಾ-ಬಂಡೂರಿ ಯೋಜನೆಯನ್ನು ಗೋವಾ ವಿರೋಧಿಸುತ್ತಿದೆ.
ಧಾರವಾಡ, ಬೆಳಗಾವಿ, ಬಾಗಲಕೋಟೆ ಮತ್ತು ಗದಗ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಕುಡಿಯುವ ನೀರಿನ ಪೂರೈಕೆಯನ್ನು ಹೆಚ್ಚಿಸಲು ಕರ್ನಾಟಕ ಸರ್ಕಾರದ ಕಳಸಾ-ಬಂಡೂರಿ ಯೋಜನೆಯು ಮಹದಾಯಿ ನದಿ ನೀರನ್ನು ಮಲಪ್ರಭಾ ನದಿಗೆ ತಿರುಗಿಸಲು ಪ್ರಸ್ತಾಪಿಸಿದೆ.
ಮಹದಾಯಿ ಅರಬ್ಬಿ ಸಮುದ್ರವನ್ನು ಸೇರುವ ಮೊದಲು ಕರ್ನಾಟಕ ಮತ್ತು ಗೋವಾದ ಮೂಲಕ ಹರಿಯುತ್ತದೆ. ಗೋವಾದಲ್ಲಿ ಮಾಂಡೋವಿ ಎಂದು ಕರೆಯಲ್ಪಡುವ ಇದು ರಾಜ್ಯದ ಎರಡು ಪ್ರಮುಖ ನದಿಗಳಲ್ಲಿ ಒಂದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.