ADVERTISEMENT

ಧ್ರುವನಾರಾಯಣ ನಿಧನ | ಅಲ್ಸರ್‌ ರಕ್ತಸ್ರಾವದಿಂದ ಹೃದಯ ಸ್ತಂಭನ: ವೈದ್ಯರು

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2023, 7:49 IST
Last Updated 11 ಮಾರ್ಚ್ 2023, 7:49 IST
   

ಮೈಸೂರು: ‘ಹೊಟ್ಟೆಹುಣ್ಣು ಒಡೆದು ಆಂತರಿಕ ತೀವ್ರರಕ್ತಸ್ರಾವದಿಂದಾದ ಹೃದಯ ಮತ್ತು ಶ್ವಾಸಕೋಶ ಸ್ತಂಭನದಿಂದ ಕೆಪಿಪಿಸಿ ಕಾರ್ಯಾಧ್ಯಕ್ಷ ಆರ್‌. ಧ್ರುವನಾರಾಯಣ (61) ಮೃತಪಟ್ಟರು’ ಎಂದು ಅವರಿಗೆ ಪ್ರಥಮ ಹಂತದ ಚಿಕಿತ್ಸೆ ನೀಡಿದ ವೈದ್ಯರು ತಿಳಿಸಿದ್ದಾರೆ.

ಶನಿವಾರ ಬೆಳಿಗ್ಗೆ ವಾಯುವಿಹಾರಕ್ಕೆ ತೆರಳಿ ವಾಪಸಾಗಿದ್ದ ಧ್ರುವನಾರಾಯಣ್‌ ಮನೆಯ ಮೇಲಿನ ಮಹಡಿಯಿಂದ ಕಾರು ಚಾಲಕನನ್ನು ಕರೆದಿದ್ದರು. ಚಾಲಕ ತೆರಳಿ ನೋಡುವಷ್ಟರಲ್ಲಿ ವಾಂತಿ, ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಿದರೂ ಫಲಕಾರಿಯಾಗಲಿಲ್ಲ. ಮೃತರಿಗೆ ಪತ್ನಿ ವೀಣಾ, ಮಕ್ಕಳಾದ ವಕೀಲ ದರ್ಶನ್‌ ಹಾಗೂ ಧೀರೇನ್‌ ಇದ್ದಾರೆ.

‘ತುರ್ತು ಸಮಸ್ಯೆ ಇದೆ ಎಂದು ನನ್ನನು ಕರೆದರು. ಮನೆಯ ಮಹಡಿಗೆ ಹೋಗಿ ನೋಡಿದಾಗ ಧ್ರುವನಾರಾಯಣ ಅವರು ಮಂಚದಿಂದ ಕೆಳಗೆ ನೆಲದಲ್ಲಿ ರಕ್ತದಲ್ಲಿ ‌ಮಲಗಿದಂತೆ ಬಿದ್ದಿದ್ದರು. ಮಾತನಾಡಿಸಲು ನೋಡಿದರೆ ಪ್ರಜ್ಞೆ ಇರಲಿಲ್ಲ. ಶ್ವಾಸ ಹಾಗೂ ಹೃದಯ ಬಡಿತವೂ ಸರಿಯಾಗಿರಲಿಲ್ಲ. ತಕ್ಷಣ ನಮ್ಮ ಡಿಎಂಆರ್‌ ಆಸ್ಪತ್ರೆಗೆ ಕರೆದೊಯ್ದರು ಎಂದು ಧ್ರುವನಾರಾಯಣ ಕಾರು ಚಾಲಕ ತಿಳಿಸಿದರು’ ಎಂದು ಪಕ್ಕದ ಮನೆಯ ನಿವಾಸಿ ವೈದ್ಯ, ಡಿಎಂಆರ್‌ ಆಸ್ಪತ್ರೆಯ ಮಾಲೀಕ ಡಾ.ಮಂಜುನಾಥ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಡಿಎಂಆರ್‌ ಆಸ್ಪತ್ರೆ ತುರ್ತು ನಿಗಾ ಘಟಕದಲ್ಲಿ 21 ಸುತ್ತು ಹೃದಯ ಪುನಶ್ಚೇತನ ಚಿಕಿತ್ಸೆ ನೀಡಲಾಯಿತು. ಆದರೂ ಶ್ವಾಸ ಹಾಗೂ ಹೃದಯ ಬಡಿತ ಚೇತರಿಸಲಿಲ್ಲ. ಆಲ್ಸರ್‌ ಒಡೆದು ತೀವ್ರ ರಕ್ತ ಸ್ರಾವದಿಂದ (ಗ್ಯಾಸ್ಟರೊ ಇನ್‌ಸ್ಟಸ್ಗಟೈನ್‌ ಬ್ಲೀಡಿಂಗ್‌), ದೇಹದಲ್ಲಿ ರಕ್ತಹೀನತೆ ಸಂಭವಿಸಿ ಹೃದಯಾಘಾತ, ಶ್ವಾಸಕೋಶದ ಪ್ರಕ್ರಿಯೆ ಸ್ಥಗಿತ ಸಂಭವಿಸಿತ್ತು. ಕೊನೆಗೆ ‘ಹೃದಯಾಘಾತದಿಂದ (ಕಾರ್ಡಿಯೊ ಪಲ್ಮನರಿ ಅರೆಸ್ಟ್‌) ಮೃತಪಟ್ಟಿದ್ದಾರೆ’ ಎಂದು ಬೆಳಿಗ್ಗೆ 8.26ಕ್ಕೆ ಘೋಷಿಸಲಾಯಿತು. ವೈದ್ಯರ ತಂಡದಲ್ಲಿ ಜಯದೇವ ಆಸ್ಪತ್ರೆಯ ಮೆಡಿಕಲ್ ಸೂಪರಿಂಟೆಂಡೆಂಟ್‌ ವೈದ್ಯ ಡಾ.ಸದಾನಂದ ಇದ್ದರು. ಇವರೇ ಧ್ರುವನಾರಯಣ್ ಅವರ ದೈನಂದಿನ ಆರೋಗ್ಯ, ನಿಯಮಿತ ತಪಾಸಣೆ ಮಾಡುತ್ತಿದ್ದವರು’ ಎಂದು ಡಾ.ಮಂಜುನಾಥ್‌ ಹೇಳಿದರು.

ಧ್ರುವನಾರಾಯಣ್ ಅವರಿಗೆ ಹೃದಯ ಸಂಬಂಧಿ ಅಥವಾ ಇನ್ಯಾವುದೇ ರೋಗ ಇರುವ ದಾಖಲೆಗಳಿಲ್ಲ. ಆದರೆ, ಮಧುಮೇಹ ಇತ್ತು ಎಂದು ಅವರ ತಪಾಸಣೆ ನನಡೆಸುತ್ತಿದ್ದ ವೈದ್ಯ ಡಾ.ಸದಾನಂದ ತಿಳಿಸಿದ್ದಾರೆ ಎಂದು ಮಂಜುನಾಥ್‌ ಹೇಳಿದರು. ಧ್ರುವನಾರಾಯಣ ಅವರಿಗೆ ಹೊಟ್ಟೆ ಹಾಗೂ ಕರುಳಿನ ಹುಣ್ಣು – ಆಲ್ಸರ್‌ ಸಮಸ್ಯೆ ಇತ್ತು ಎಂಬುದು ರೋಗ ಪರಿಶೋಧನೆಯಿಂದ ಪತ್ತೆಯಾಗಿರಲಿಲ್ಲ. ಈ ಬಗ್ಗೆ ಅವರಿಗೂ ಮಾಹಿತಿ ಇರಲಿಲ್ಲ ಎಂದರು.

ಬೆಳಿಗ್ಗೆ 9.30ಕ್ಕೆ ಎಲ್ಲ ಪ್ರಕ್ರಿಯೆಗಳನ್ನೂ ಮುಗಿಸಿ ಮನೆಮಂದಿಗೆ ಮೃತದೇಹವನ್ನು ಹಸ್ತಾಂತರಿಸಲಾಯಿತು. ನಗರದ ವಿಜಯನಗರ 3ನೇ ಹಂತದಲ್ಲಿರುವ ಧ್ರುವನಾರಾಯಣ ಅವರ ಮನೆಯಲ್ಲಿ ಮೃತದೇಹವನ್ನು ಸಾರ್ವಜನಿಕ ದರ್ಶನಕ್ಕೆ ಇರಿಸಲಾಗಿತ್ತು. ಮನೆಯಲ್ಲಿ ವರುಣ ಕ್ಷೇತ್ರದ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಸೇರಿದಂತೆ ಪ್ರಮುಖರು ಮುಂದಿನ ಪ್ರಕ್ರಿಯೆಗಳಿಗೆ ಮನೆ ಮಂದಿಯೊಂದಿಗೆ ಮೇಲ್ವಿಚಾರಣೆ ವಹಿಸಿದ್ದರು.

ನಾಳೆ ಬರುವೆ ಅಂದಿದ್ದರು: ‘ಶುಕ್ರವಾರ ರಾತ್ರಿ 10ಕ್ಕೆ ಡಾ.ಸದಾನಂದ ಅವರಿಗೆ ಫೋನ್‌ ಮಾಡಿದ್ದ ಧ್ರುವನಾರಾಯಣ ಸ್ವಲ್ಪ ದೈಹಿಕ ಸ್ವಾಸ್ಥ್ಯ ಇದೆ ಎಂದು ಹೇಳಿಕೊಂಡಿದ್ದರು. ಈಗಲೇ ತಪಾಸಣೆಗೆ ಬನ್ನಿ ಎಂದು ವೈದ್ಯರು ಕರೆದಿದ್ದರು. ನಾಳೆ ಬೆಳಿಗ್ಗೆ ಬರುತ್ತೇನೆ’ ಎಂದು ಧ್ರುವ ಉತ್ತರಿಸಿದ್ದರು ಎಂದು ಸದಾನಂದ್‌ ಅವರ ಮಾತುಗಳನ್ನು ಡಾ.ಮಂಜುನಾಥ್‌ ನೆನಪಿಸಿಕೊಂಡರು. ಶುಕ್ರವಾರ ಇಡೀ ದಿನ ವಿವಿಧ ಪ್ರವಾಸ ಮಾಡಿದ್ದರು’ ಎಂದು ತಿಳಿಸಿದರು.

ಆಸ್ಪತ್ರೆಗೆ ಬಿಜೆಪಿ ಶಾಸಕ ಎಲ್‌.ನಾಗೇಂದ್ರ ಸೇರಿದಂತೆ ವಿವಿಧ ಪಕ್ಷಗಳ ಪ್ರಮುಖರು ಭೇಟಿ ನೀಡಿದರು.

‘ರಾಜಕೀಯೇತರವಾಗಿ ಉತ್ತಮ ಮನುಷ್ಯ. ಮಾನವೀಯ ಸ್ಪಂದನೆಯ ಸ್ನೇಹ ಜೀವಿ. ಕೆಲಸದ ಒತ್ತಡ, ಆಹಾರ ಸೇವಿಸದ ಕಾರಣ ಹೀಗೆಲ್ಲ ಆಗಿದೆ’ ಎಂದು ನಾಗೇಂದ್ರ ಪ್ರತಿಕ್ರಿಯಿಸಿದರು.

ಇವನ್ನೂ ಓದಿ:

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.