ADVERTISEMENT

ಹುಬ್ಬಳ್ಳಿಯಲ್ಲಿ ಐದು ವರ್ಷದ ಬಾಲಕಿಯ ಅತ್ಯಾಚಾರ, ಕೊಲೆ ಆರೋಪಿಯ ಎನ್‌ಕೌಂಟರ್!

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2025, 1:57 IST
Last Updated 14 ಏಪ್ರಿಲ್ 2025, 1:57 IST
<div class="paragraphs"><p>ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ ಬಾಲಕಿ ಮೇಲೆ ದೌರ್ಜನ್ಯ, ಹತ್ಯೆ ಐದು ವರ್ಷದ ಬಾಲಕಿಯನ್ನು ಅಪಹರಿಸಿ ಕೊಲೆ ಮಾಡಿರುವುದನ್ನು ಖಂಡಿಸಿ ಭಾನುವಾರ ಹುಬ್ಬಳ್ಳಿಯ ಅಶೋಕನಗರ ಪೊಲೀಸ್ ಠಾಣೆ ಎದುರು ಸಾರ್ವಜನಿಕರು ಪ್ರತಿಭಟನೆ ನಡೆಸಿದರು&nbsp;&nbsp;&nbsp; -ಪ್ರಜಾವಾಣಿ ಚಿತ್ರ</p></div>

ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ ಬಾಲಕಿ ಮೇಲೆ ದೌರ್ಜನ್ಯ, ಹತ್ಯೆ ಐದು ವರ್ಷದ ಬಾಲಕಿಯನ್ನು ಅಪಹರಿಸಿ ಕೊಲೆ ಮಾಡಿರುವುದನ್ನು ಖಂಡಿಸಿ ಭಾನುವಾರ ಹುಬ್ಬಳ್ಳಿಯ ಅಶೋಕನಗರ ಪೊಲೀಸ್ ಠಾಣೆ ಎದುರು ಸಾರ್ವಜನಿಕರು ಪ್ರತಿಭಟನೆ ನಡೆಸಿದರು    -ಪ್ರಜಾವಾಣಿ ಚಿತ್ರ

   

ಹುಬ್ಬಳ್ಳಿ: ಮನೆಯಂಗಳದಲ್ಲಿ ಆಟವಾಡುತ್ತಿದ್ದ ಐದು ವರ್ಷದ ಬಾಲಕಿಯನ್ನು ಅಪಹರಿಸಿ ಕೊಲೆ ಮಾಡಲಾಗಿದೆ. ಕೃತ್ಯ ಎಸಗಿದ ಆರೋಪಿ ಬಿಹಾರ ಮೂಲದ ರಿತೇಶ ಕುಮಾರ್ (35) ಎಂಬಾತ ಭಾನುವಾರ ಸಂಜೆ ನಗರದ ತಾರಿಹಾಳ ಸೇತುವೆ ಬಳಿ ಪೊಲೀಸರ ಗುಂಡೇಟಿಗೆ ಮೃತಪಟ್ಟಿದ್ದಾನೆ. 

‘ತಾರಿಹಾಳ ಬಳಿ ಸ್ಥಳ ಪರಿಶೀಲನೆಗೆ ಕರೆದೊಯ್ದಾಗ ಪೊಲೀಸ್ ವಾಹನದ ಮೇಲೆ ಕಲ್ಲು ತೂರಿ, ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದ. ಅಶೋಕನಗರದ ಪಿಎಸ್‌ಐ ಅನ್ನಪೂರ್ಣ ಅವರು ಗಾಳಿಯಲ್ಲಿ ಗುಂಡು ಹಾರಿಸಿದರೂ ಆರೋಪಿ ತಪ್ಪಿಸಿಕೊಂಡು ಓಡಲು ಯತ್ನಿಸಿದ. ಈ ಸಂದರ್ಭದಲ್ಲಿ ಪೊಲೀಸರು ಗುಂಡು ಹಾರಿಸಿದಾಗ ಆತನ ಕಾಲಿಗೆ ಹಾಗೂ ಬೆನ್ನಿಗೆ ಗುಂಡು ತಗುಲಿದೆ’ ಎಂದು ಘಟನೆ ಕುರಿತು ಹುಬ್ಬಳ್ಳಿ–ಧಾರವಾಡ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ADVERTISEMENT

‘ಗಾಯಗೊಂಡಿದ್ದ ಅವನನ್ನು ತಕ್ಷಣ ಕೆಎಂಸಿ–ಆರ್‌ಐ ಆಸ್ಪತ್ರೆಗೆ ತರಲಾಯಿತು. ಅಷ್ಟರಲ್ಲಿ ಮೃತಪಟ್ಟಿದ್ದ. ಪೊಲೀಸ್‌ ಸಿಬ್ಬಂದಿ ಯಶವಂತ ಮೊರಬ ಮತ್ತು ವೀರೇಶ ಅವರೂ ಘಟನೆಯಲ್ಲಿ ಗಾಯಗೊಂಡಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ವಿವರಿಸಿದರು.

ಏನಿದು ಘಟನೆ?: ‘ಭಾನುವಾರ ಬೆಳಿಗ್ಗೆ 10.40ರ ಸುಮಾರಿಗೆ ವಿಜಯನಗರದಲ್ಲಿ ಐದು ವರ್ಷದ ಮಗು ನಾಪತ್ತೆಯಾದ ಕುರಿತು ಪ್ರಕರಣ ದಾಖಲಾಗಿತ್ತು. ನಂತರ, ಮಗು ನಾಪತ್ತೆಯಾದ ಸ್ಥಳದ ಎದುರಿರುವ ಶೆಡ್‌ನಲ್ಲಿ ಮೃತದೇಹ ಪತ್ತೆಯಾಗಿತ್ತು’ ಎಂದರು.

‘ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಹಾಗೂ ಸ್ಥಳೀಯರು ನೀಡಿದ ಮಾಹಿತಿ ಆಧರಿಸಿ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ವಿಚಾರಣೆ ನಡೆಸಿದಾಗ, ಕೃತ್ಯದ ಕುರಿತು ಮಾಹಿತಿ ನೀಡಿದ್ದ. ಆದರೆ, ತನ್ನ ವಿಳಾಸ ಹಾಗೂ ಗುರುತಿನ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ನೀಡಿರಲಿಲ್ಲ’ ಎಂದು ಹೇಳಿದರು.

‘ಬಿಹಾರ ಮೂಲದ ಅವನು, ವಿವಿಧ ಊರುಗಳಲ್ಲಿ ಕೆಲಸ ಮಾಡಿದ್ದ. ಹುಬ್ಬಳ್ಳಿಯಲ್ಲೂ ಕೆಲಸ ಮಾಡುತ್ತ, ತಾರಿಹಾಳ ಸೇತುವೆ ಬಳಿಯ ಹಳೇ ಶೆಡ್‌ನಲ್ಲಿ ವಾಸಿಸುತ್ತಿರುವುದಾಗಿ ತಿಳಿಸಿದ್ದ. ಅವನ ಜೊತೆ ಯಾರಿದ್ದಾರೆಂದು ತಿಳಿದುಕೊಳ್ಳಲು, ಅವನನ್ನು ಸ್ಥಳಕ್ಕೆ ಕರೆದುಕೊಂಡು ಹೋದಾಗ ಎನ್‌ಕೌಂಟರ್‌ ನಡೆದಿದೆ’ ಎಂದರು.

ಕೊಲೆ ಮಾಡಿದ್ದು ಹೇಗೆ?

‘ಬಿಹಾರ ಪಾಟ್ನಾದ ನಿವಾಸಿಯಾದ ಆರೋಪಿ ರಿತೀಶ ಕುಮಾರ್ ಭಾನುವಾರ ಬೆಳಿಗ್ಗೆ 10.40ರ ಸುಮಾರು ವಿಜಯನಗರದ ವಾಸವಾಗಿದ್ದ ಬಾಲಕಿಗೆ ತಿಂಡಿ ತಿನಿಸುಗಳನ್ನು ನೀಡುವುದಾಗಿ ಪುಸಲಾಯಿಸಿ ಕರೆದಿದ್ದಾನೆ. ನಂತರ ಅವಳನ್ನು ಎತ್ತಿಹಾಕಿಕೊಂಡು ಎದುರಿನ ಮನೆಯಲ್ಲಿರುವ ಶೆಡ್‌ಗೆ ಕರೆದೊಯ್ದು ಅಸಭ್ಯವಾಗಿ ವರ್ತಿಸಿದ್ದಾನೆ. ಆಕೆ ಕೂಗಿಕೊಂಡಾಗ ಕೊಲೆ ಮಾಡಿ ಪರಾರಿಯಾಗಿದ್ದಾನೆ. ಬಾಲಕಿಯ ಶವ ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಆತನನ್ನು ಹಿಡಿದು ಅಶೋಕ ನಗರ ಠಾಣೆಯ ಪೊಲೀಸರಿಗೆ ಒಪ್ಪಿಸಿದ್ದಾರೆ’ ಎಂದು  ಶಶಿಕುಮಾರ್ ತಿಳಿಸಿದರು.

‘ಮಗುವಿನ ಮೇಲೆ ಅತ್ಯಾಚಾರವಾಗಿರುವ ಬಗ್ಗೆ ಮಾಹಿತಿಯಿಲ್ಲ. ವೈದ್ಯಕೀಯ ವರದಿ ಬಂದ ನಂತರ ತಿಳಿಯಲಿದೆ. ಪೋಕ್ಸೊ ಅಡಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ’ ಎಂದರು. 

ಆರೋಪಿ ಎನ್‌ಕೌಂಟರ್‌ನಿಂದ ಮೃತಪಟ್ಟ ವಿಷಯ ತಿಳಿದು ಸಾರ್ವಜನಿಕರು ಪ್ರತಿಭಟನೆ ಕೈಬಿಟ್ಟು ಕೆಎಂಸಿ ಆಸ್ಪತ್ರೆ ಎದುರು ಸಂಭ್ರಮಿಸಿದರು. ಪೊಲೀಸ್ ಕಮಿಷನರ್ ಶಶಿಕುಮಾರ್‌ ಅವರಿಗೆ ಜೈಕಾರ ಹಾಕಿದರು.

ಬಾಲಕಿಯನ್ನು ಅಪಹರಿಸಿ ಕೊಲೆಗೈದ ಘಟನೆ ವಿರುದ್ಧ ಭಾನುವಾರ ಸಂಜೆ ವಿವಿಧ ಸಂಘಟನೆಗಳಿಂದ ಹುಬ್ಬಳ್ಳಿ ಕೆಎಂಸಿ ಎದುರು ಪ್ರತಿಭಟನೆ ನಡೆಯಿತು

ಡ್ರಗ್ಸ್ ಮತ್ತು ಮಾದಕ ವಸ್ತುಗಳ ಬಳಕೆ ಹೆಚ್ಚುತ್ತಿದೆ. ಇದರಿಂದಾಗಿ ಇಂಥ ಪ್ರಕರಣ ಹೆಚ್ಚುತ್ತಿವೆ. ರಾಜ್ಯ ಸರ್ಕಾರ ಇದಕ್ಕೆ ಕಡಿವಾಣ ಹಾಕಬೇಕು

-ಪ್ರಲ್ಹಾದ ಜೋಶಿ ಕೇಂದ್ರ ಸಚಿವ

ಘಟನಾವಳಿ

l ಬೆಳಿಗ್ಗೆ 10.45ಕ್ಕೆ ಬಾಲಕಿ ಅಪಹರಣ

l  ಬೆಳಿಗ್ಗೆ 11.40ಕ್ಕೆ ಬಾಲಕಿಯ
ಶವ ಪತ್ತೆ

l ಮಧ್ಯಾಹ್ನ 12ಕ್ಕೆ ಆರೋಪಿ ಪೊಲೀಸ್‌ ವಶಕ್ಕೆ

l ಮಧ್ಯಾಹ್ನ 2ಕ್ಕೆ ಅಶೋಕನಗರ ಪೊಲೀಸ್‌ ಠಾಣೆ ಎದುರು ಪ್ರತಿಭಟನೆ

l ಸಂಜೆ 5.30 ಕೆಎಂಸಿ–ಆರ್‌ಐ ಆಸ್ಪತ್ರೆಯಲ್ಲಿ ಬಾಲಕಿಯ
ಶವ ಪರೀಕ್ಷೆ

l ಸಂಜೆ 6.30ಕ್ಕೆ ಕೆಎಂಸಿ–ಆರ್‌ಐ ಆಸ್ಪತ್ರೆ ಎದುರು, ಕಿತ್ತೂರು ರಾಣಿ ಚನ್ನಮ್ಮ ವೃತ್ತದ ಬಳಿ ಪ್ರತಿಭಟನೆ

l ಸಂಜೆ 6.30ಕ್ಕೆ ಹುಬ್ಬಳ್ಳಿ ಹೊರವಲಯದ ತಾರಿಹಾಳ ಸೇತುವೆ ಬಳಿ ಆರೋಪಿ ರಿತೀಶ್‌ ಕುಮಾರ್‌ ಎನ್‌ಕೌಂಟರ್‌

l ರಾತ್ರಿ 8ಕ್ಕೆ ಪೊಲೀಸ್‌ ಕಮಿಷನರ್‌ ಸುದ್ದಿಗೋಷ್ಠಿಯಲ್ಲಿ ಎನ್‌ಕೌಂಟರ್‌ ಘೋಷಣೆ

l ಬಾಲಕಿ ಕುಟುಂಬಕ್ಕೆ ಮುಖ್ಯಮಂತ್ರಿ ನಿರ್ದೇಶನದ ಮೇರೆಗೆ ₹10 ಲಕ್ಷ ಪರಿಹಾರ

ಸಾರ್ವಜನಿಕರ ಸಂಭ್ರಮ

ಹುಬ್ಬಳ್ಳಿ ಧಾರವಾಡ ಮಹಾನಗರ ಪೊಲೀಸ್‌ ಘಟಕದಲ್ಲಿ ಇದು ಮೊದಲನೇ ಎನ್‌ಕೌಂಟರ್‌ ಆಗಿದ್ದು, ಇಂಥ ಕೃತ್ಯ ಎಸಗುವವರಿಗೆ ತಕ್ಕ ಸಂದೇಶ ರವಾನೆಯಾಗಿದೆ ಎಂದು ಸಾರ್ವಜನಿಕರು ಸಂಭ್ರಮಿಸಿದರು. ಈ ಹಿಂದೆ ನೇಹಾ ಹಿರೇಮಠ ಮತ್ತು ಅಂಜಲಿ ಅಂಬಿಗೇರ ಅವರನ್ನು ಕೊಲೆ ಮಾಡಿದಾಗಲೂ, ಆರೋಪಿಗಳ ಎನ್‌ಕೌಂಟರ್‌ ಮಾಡಬೇಕು ಎಂದು ಪ್ರತಿಭಟಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.