ಮದುವೆ
(ಐಸ್ಟೋಕ್ ಚಿತ್ರ)
ಚಿತ್ರದುರ್ಗ: ಆರತಕ್ಷತೆ ಭೋಜನದ ವೇಳೆ ಸರಿಯಾಗಿ ಕುಡಿಯುವ ನೀರು ವಿತರಣೆ ಮಾಡಲಿಲ್ಲ ಎಂಬ ಕಾರಣಕ್ಕೆ ಉಂಟಾದ ಜಗಳದಿಂದ ಮಾರನೇ ದಿನ ನಡೆಯಬೇಕಿದ್ದ ವಿವಾಹ ಸಮಾರಂಭವೇ ಹಿರಿಯೂರು ನಗರದ ಬಲಿಜ ಶ್ರೇಯಾ ಭವನದಲ್ಲಿ ನಿಂತು ಹೋಯಿತು.
ದಾವಣಗೆರೆ ಜಿಲ್ಲೆ ಜಗಳೂರಿನ ವರ ಎನ್.ಮನೋಜ್‌ಕುಮಾರ್, ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ಚಿರತಹಳ್ಳಿ ವಧು ಸಿ.ಎ.ಅನಿತಾ ವಿವಾಹದ ಆರತಕ್ಷತೆ ಸಮಾರಂಭ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ಬಲಿಜ ಶ್ರೇಯಾ ಭವನದಲ್ಲಿ ಶನಿವಾರ ರಾತ್ರಿ ನಡೆಯಿತು. ತಡವಾಗಿ ಬಂದ ಕೆಲವರು ಊಟಕ್ಕೆ ಕುಳಿತಿದ್ದರು. ಕೇಟರಿಂಗ್ ಸಿಬ್ಬಂದಿ ಸರಿಯಾಗಿ ಕುಡಿಯುವ ನೀರು ವಿತರಣೆ ಮಾಡಲಿಲ್ಲ ಎಂಬ ಕಾರಣಕ್ಕೆ ಗಂಡು–ಹೆಣ್ಣು ಕಡೆಯವರ ನಡುವೆ ಜಗಳ ಆರಂಭವಾಯಿತು.
ರಾತ್ರಿ ಆರಂಭವಾದ ಜಗಳ ಭಾನುವಾರ ಬೆಳಿಗ್ಗೆಯಾದರೂ ಮುಂದುವರಿದಿತ್ತು. ಎಷ್ಟೇ ಸಂಧಾನ ನಡೆಸಿದರೂ ಸಮಸ್ಯೆ ಬಗೆಹರಿಯಲಿಲ್ಲ. ಭಾನುವಾರ ಬೆಳಿಗ್ಗೆ 10.30ಕ್ಕೆ ಮುಹೂರ್ತ ನಿಗದಿಯಾಗಿತ್ತು. ಸಂಬಂಧಿಕರು ಸಾಕಷ್ಟು ಪ್ರಯತ್ನಪಟ್ಟರೂ ಜಗಳ ಬಗೆಹರಿಸಲು ಸಾಧ್ಯವಾಗಲಿಲ್ಲ. ಎಂಜಿನಿಯರಿಂಗ್ ಪದವೀಧರರಾದ ವಧು–ವರರಿಬ್ಬರೂ ಜಗಳದಲ್ಲಿ ಭಾಗಿಯಾದ ಕಾರಣ ವಿವಾಹ ಸ್ಥಗಿತಗೊಂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.