ಜಿ. ಪರಮೇಶ್ವರ
ಬೆಂಗಳೂರು: ‘ಲೋಕಸಭಾ ಚುನಾವಣೆಯಲ್ಲಿ ಸಚಿವರು ಸ್ಪರ್ಧಿಸುವ ಕುರಿತು ಈವರೆಗೂ ಚರ್ಚೆ ಆಗಿಲ್ಲ’ ಎಂದು ಗೃಹ ಸಚಿವ ಜಿ. ಪರಮೇಶ್ವರ ತಿಳಿಸಿದರು.
ಸುದ್ದಿಗಾರರ ಜೊತೆ ಸೋಮವಾರ ಮಾತನಾಡಿದ ಅವರು, ‘ಕಳೆದ ಲೋಕಸಭಾ ಚುನಾವಣೆಯಲ್ಲಿ ಚಿತ್ರದುರ್ಗ ಕ್ಷೇತ್ರಕ್ಕೆ ನನ್ನ ಹೆಸರು ಕೇಳಿಬಂದಿತ್ತು. ಈ ಬಾರಿ ಕೋಲಾರ ಕ್ಷೇತ್ರಕ್ಕೆ ಕೇಳಿಬರುತ್ತಿದೆ. ಆದರೆ, ಈ ಬಗ್ಗೆ ಎಲ್ಲಿಯೂ ಚರ್ಚೆ ನಡೆದಿಲ್ಲ. ಹೀಗಾಗಿ, ಚುನಾವಣೆಯಲ್ಲಿ ಸ್ಪರ್ಧಿಸಲು ಹಿಂದೇಟು ಹಾಕುವ ಪ್ರಶ್ನೆ ಉದ್ಭವಿಸುವುದಿಲ್ಲ. ಸಚಿವರು ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಕುರಿತು ಕೆಪಿಸಿಸಿ ಅಧ್ಯಕ್ಷರು ಹೇಳಿದರೆ ಅಧಿಕೃತ’ ಎಂದರು.
‘ಲೋಕಸಭಾ ಚುನಾವಣೆಗೆ ಪಕ್ಷದಲ್ಲಿ ಸಿದ್ಧತೆ ನಡೆಯುತ್ತಿದ್ದು, ಹೆಚ್ಚು ಸೀಟು ಗೆಲ್ಲಬೇಕು. ಕೆಪಿಸಿಸಿ ಅಧ್ಯಕ್ಷರು, ಮುಖ್ಯಮಂತ್ರಿ, ಎಲ್ಲ ಜಿಲ್ಲೆಗಳ ಅಧ್ಯಕ್ಷರು ಮತ್ತು ಪ್ರಮುಖ ನಾಯಕರ ಜೊತೆ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಚರ್ಚೆ ನಡೆಸಲಿದ್ದಾರೆ. ಕಳೆದ ಚುನಾವಣೆಗಿಂತ ಈ ಬಾರಿ ಪಕ್ಷ ಉತ್ತಮ ಸ್ಥಿತಿಯಲ್ಲಿದೆ. ಬಡ ಜನರ ಹಾಗೂ ಮಹಿಳೆಯರ ಆರ್ಥಿಕ ಮಟ್ಟ ಹೆಚ್ಚಿಸುವ ಉದ್ದೇಶದಿಂದ ಅನುಷ್ಠಾನಗೊಳಿಸಿದ ಗ್ಯಾರಂಟಿ ಯೋಜನೆಗಳು ಹೆಚ್ಚು ಪರಿಣಾಮ ಆಗಲಿದೆ’ ಎಂದು ಅಭಿಪ್ರಾಯಪಟ್ಟರು.
‘ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿರುವುದರಿಂದ ಸರ್ಕಾರಕ್ಕೆ ಕಷ್ಟವಾಗಿಲ್ಲ. ಅನುದಾನ ಹೊಂದಿಕೆ ಮಾಡುತ್ತಿದ್ದೇವೆ. ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರಬೇಕಿರುವ ₹ 1.50 ಲಕ್ಷ ಕೋಟಿ ಈವರೆಗೂ ಬಂದಿಲ್ಲ. ಕೇಂದ್ರದಿಂದ ಅನುದಾನ ಬಂದಿದ್ದರೆ, ಮತ್ತಷ್ಟು ಅಭಿವೃದ್ಧಿ ಯೋಜನೆಗಳಿಗೆ ಅನುಕೂಲ ಆಗುತ್ತಿತ್ತು’ ಎಂದರು.
ನಾನು ದೇಣಿಗೆ ಕೊಟ್ಟಿದ್ದೇನೆ: ‘ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ನಾನು ಕೂಡಾ ದೇಣಿಗೆ ನೀಡಿದ್ದೇನೆ. ಇದು ನನ್ನ ವೈಯಕ್ತಿಕ ವಿಚಾರ. ಎಷ್ಟು ದೇಣಿಗೆ ನೀಡಿದ್ದೇನೆ ಎಂದು ಹೇಳಿಕೊಳ್ಳಬಾರದು. ಅಯೋದ್ಯೆ ಪೂಜೆಯಲ್ಲಿ ಭಾಗಿಯಾಗುವ ಬಗ್ಗೆ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳಲಿದೆ. ಪ್ರತ್ಯೇಕ ದಿನ ಹೋಗಿ ಪೂಜೆ ಸಲ್ಲಿಸುವ ಬಗ್ಗೆ ಹೈಕಮಾಂಡ್ ನಿರ್ಧರಿಸಿದರೆ ಅದಕ್ಕೂ ಸಿದ್ಧ. ನಾವು ಹಿಂದುಗಳಲ್ಲವೇ. ನಮ್ಮ ಪಕ್ಷದಲ್ಲಿಯೂ ಹಿಂದುಗಳಿಲ್ಲವೇ? ಅದರಲ್ಲೇನು ತಪ್ಪಿದೆ’ ಎಂದು ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.