ಆನೆಗಳು
ಬೆಂಗಳೂರು: ಆನೆಗಳ ಉಪಟಳ ತಡೆಗೆ ಗೋವಾ ಸರ್ಕಾರ ಕರ್ನಾಟಕದ ನೆರವು ಕೋರಿದ್ದು, ಈ ಕುರಿತು ಗೋವಾ ಅರಣ್ಯ ಸಚಿವ ವಿಶ್ವಜಿತ್ ರಾಣೆ ಅವರು ರಾಜ್ಯದ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರನ್ನು ಶನಿವಾರ ಭೇಟಿ ಮಾಡಿ ಚರ್ಚೆ ನಡೆಸಿದರು.
‘ಗೋವಾದಲ್ಲಿ ಶೇ 60ರಷ್ಟು ಅರಣ್ಯ ಪ್ರದೇಶವಿದ್ದರೂ ಇದುವರೆಗೆ ಆನೆಗಳ ಸಮಸ್ಯೆ ಇರಲಿಲ್ಲ. ಈಗ ಓಂಕಾರ ಎಂಬ ಪುಂಡಾನೆಯೊಂದು ಉಪಟಳ ನೀಡುತ್ತಿದ್ದು, ಬೆಳೆ ಹಾನಿ ಮಾಡುತ್ತಿದೆ. ಅದರ ಸೆರೆಗೆ ತರಬೇತಿ ಪಡೆದ ಕುಮ್ಕಿ ಆನೆಗಳು ಹಾಗೂ ತಜ್ಞರನ್ನು ಕಳುಹಿಸಿಕೊಡಬೇಕು. ಸಹಕಾರ ನೀಡಬೇಕು’ ಎಂದು ರಾಣೆ ಮನವಿ ಮಾಡಿದರು.
ಈ ಕುರಿತು ಸುದ್ದಿಗಾರರ ಜತೆ ಮಾತನಾಡಿದ ಈಶ್ವರ ಖಂಡ್ರೆ, ‘ನಮ್ಮ ಅರಣ್ಯ ಇಲಾಖೆ ಸಿಬ್ಬಂದಿ ಆನೆ ಸೆರೆ ಕಾರ್ಯಾಚರಣೆಯಲ್ಲಿ ಪರಿಣತಿ ಪಡೆದಿದ್ದಾರೆ. ಪಳಗಿಸಿದ ಕುಮ್ಕಿ ಆನೆಗಳೂ ಇವೆ. ಗೋವಾ ಮನವಿ ಕುರಿತಂತೆ ಮುಖ್ಯಮಂತ್ರಿ ಜತೆ ಚರ್ಚಿಸಲಾಗುವುದು. ಆನೆ ಸೆರೆಗೆ ಸಹಕರಿಸುವ ಕುರಿತು ಮಹಾರಾಷ್ಟ್ರ ಮುಖ್ಯಮಂತ್ರಿ ಜತೆಗೂ ಚರ್ಚಿಸಲಾಗುವುದು. ಪ್ರಸ್ತುತ ದಸರಾ ಮಹೋತ್ಸವ ನಡೆಯುತ್ತಿದ್ದು, ವಿಜಯದಶಮಿಯ ಬಳಿಕ, ಪುಂಡಾನೆ ಹಿಡಿಯಲು ಗೋವಾಕ್ಕೆ ಸಹಕಾರ ನೀಡಲಾಗುವುದು. ಆದರೆ, ಕುಮ್ಕಿ ಆನೆಗಳನ್ನು ನೀಡುವುದಿಲ್ಲ’ ಎಂದರು.
‘ಉತ್ತರ ಕರ್ನಾಟಕದ ಜನರ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ದೀರ್ಘಕಾಲದಿಂದ ನನೆಗುದಿಗೆ ಬಿದ್ದಿರುವ ಕಳಸಾ–ಬಂಡೂರಿ ಯೋಜನೆಗೆ ಸಹಕರಿಸುವಂತೆ ಮನವಿ ಮಾಡಿದೆವು. ಅಭಿವೃದ್ಧಿ ಮತ್ತು ಮೂಲಸೌಕರ್ಯ ವಿಚಾರದಲ್ಲಿ ನೆರೆ ರಾಜ್ಯಗಳು ಪರಸ್ಪರ ಔದಾರ್ಯದಿಂದ ಇರಬೇಕು ಎನ್ನುವುದು ನಮ್ಮ ನಿಲುವು’ ಎಂದು ಹೇಳಿದರು.
ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಅರಣ್ಯ ಪಡೆ ಮುಖ್ಯಸ್ಥೆ ಮೀನಾಕ್ಷಿ ನೇಗಿ, ಮುಖ್ಯ ವನ್ಯಜೀವಿ ಪರಿಪಾಲಕ ಪಿ.ಸಿ. ರೇ, ಆನೆ ಯೋಜನೆಯ ಅಧಿಕಾರಿ ಮನೋಜ್ ರಾಜನ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.