ADVERTISEMENT

ಒತ್ತಡಕ್ಕೆ ಮಣಿದ ಸರ್ಕಾರ: ಗೋವಾ–ತಮ್ನಾರ್ ವಿದ್ಯುತ್‌ ಮಾರ್ಗಕ್ಕೆ ಹಸಿರು ನಿಶಾನೆ

ಕೇಂದ್ರದ ಒತ್ತಡಕ್ಕೆ ಮಣಿದ ರಾಜ್ಯ ಸರ್ಕಾರ

ಮಂಜುನಾಥ್ ಹೆಬ್ಬಾರ್‌
Published 16 ಡಿಸೆಂಬರ್ 2025, 0:30 IST
Last Updated 16 ಡಿಸೆಂಬರ್ 2025, 0:30 IST
<div class="paragraphs"><p>ವಿದ್ಯುತ್</p></div>

ವಿದ್ಯುತ್

   

ನವದೆಹಲಿ: ಕರ್ನಾಟಕದ ಪಶ್ಚಿಮ ಘಟ್ಟದ 435 ಎಕರೆ ಕಾಡಿನ ಮೂಲಕ ಹಾದು ಹೋಗುವ ಗೋವಾ–ತಮ್ನಾರ್ 400 ಕೆ.ವಿ. ವಿದ್ಯುತ್ ಮಾರ್ಗ ಯೋಜನೆಗೆ ಕರ್ನಾಟಕ ಸರ್ಕಾರ ಹಸಿರುನಿಶಾನೆ ತೋರಿದೆ.

ಮಹದಾಯಿ ಯೋಜನೆಯ ಅರಣ್ಯ ತೀರುವಳಿ ಪ್ರಸ್ತಾವಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡುವ ತನಕ ಈ ವಿದ್ಯುತ್‌ ಯೋಜನೆಗೆ ಒಪ್ಪಿಗೆ ನೀಡುವುದಿಲ್ಲ ಎಂದು ರಾಜ್ಯ ಸರ್ಕಾರ ಕಳೆದ ವರ್ಷ ಸ್ಪಷ್ಟಪಡಿಸಿತ್ತು. ಯೋಜನೆ ಪರವಾಗಿ ಅಧಿಕಾರಿಗಳು ಮಾಡಿದ್ದ ಶಿಫಾರಸಿಗೆ ತಡೆ ಒಡ್ಡಿದ್ದ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದ್ದರು. ಕೇಂದ್ರ ಸರ್ಕಾರದ ಒತ್ತಡಕ್ಕೆ ಮಣಿದಿರುವ ರಾಜ್ಯ ಸರ್ಕಾರವು ತನ್ನ ನಿಲುವು ಬದಲಿಸಿದೆ.

ADVERTISEMENT

ಹಳಿಯಾಳ, ದಾಂಡೇಲಿ, ಧಾರವಾಡ ಹಾಗೂ ಬೆಳಗಾವಿ ವೃತ್ತದ ಡಿಸಿಎಫ್‌ಗಳ ಸ್ಥಳ ಪರಿಶೀಲನಾ ವರದಿಗಳ ಆಧಾರದಲ್ಲಿ ಯೋಜನೆಗೆ 435 ಎಕರೆ ಕಾಡು ಬಳಕೆಗೆ ಅರಣ್ಯ ಪಡೆಯ ಮುಖ್ಯಸ್ಥೆ ಮೀನಾಕ್ಷಿ ನೇಗಿ ಅವರು ಡಿಸೆಂಬರ್‌ 12ರಂದು ತಾತ್ವಿಕ ಒಪ್ಪಿಗೆ ನೀಡಿದ್ದಾರೆ. ಅಂತಿಮ ಹಂತದ ಅನುಮೋದನೆಗೆ ಕೇಂದ್ರ ಅರಣ್ಯ ಸಚಿವಾಲಯಕ್ಕೆ ಪ್ರಸ್ತಾವ ಕಳುಹಿಸಿದ್ದಾರೆ. ಈ ಯೋಜನೆಗೆ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿಯು 2024ರ ಜುಲೈನಲ್ಲಿ ಷರತ್ತುಬದ್ಧ ಅನುಮೋದನೆ ಕೊಟ್ಟಿದೆ. 

ಉದ್ದೇಶಿತ ವಿದ್ಯುತ್ ಮಾರ್ಗವು ದಾಂಡೇಲಿ ಆನೆ ಕಾರಿಡಾರ್‌, ಭೀಮಗಡ ಅಭಯಾರಣ್ಯದ ಪರಿಸರ ಸೂಕ್ಷ್ಮವಲಯ, ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಪರಿಸರ ಸೂಕ್ಷ್ಮವಲಯ ಹಾಗೂ ದಾಂಡೇಲಿ ಅಭಯಾರಣ್ಯಗಳ ಮೂಲಕ ಹಾದುಹೋಗಲಿದೆ. ಕಾಡು ಬಳಕೆಗೆ ಒಪ್ಪಿಗೆ ಕೋರಿ ಗೋವಾ–ತಮ್ನಾರ್ ವಿದ್ಯುತ್‌ ಕಂಪನಿಯು ಅರಣ್ಯ ಇಲಾಖೆಗೆ ‍ಪ‍್ರಸ್ತಾವ ಸಲ್ಲಿಸಿತ್ತು. ಈ ಯೋಜನೆಯ ಅನುಷ್ಠಾನದಿಂದ 72 ಸಾವಿರ ಮರಗಳ ಹನನವಾಗಲಿದೆ ಎಂಬ ಕಾರಣ ನೀಡಿದ್ದ ಅರಣ್ಯ ಇಲಾಖೆ, ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಪರಿಷ್ಕೃತ ಮಾರ್ಗದ ‍ಪ್ರಸ್ತಾವ ಸಲ್ಲಿಸುವಂತೆ ಕಂಪನಿಗೆ ತಾಕೀತು ಮಾಡಿತ್ತು. ಈ ನಡುವೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದ ಪ್ರಧಾನಿ ನರೇಂದ್ರ ಮೋದಿ, ಯೋಜನೆಯ ಅನುಷ್ಠಾನಕ್ಕೆ ಸಹಕಾರ ನೀಡುವಂತೆ ತಿಳಿಸಿದ್ದರು. 

ಪರಿಷ್ಕೃತ ಪ್ರಸ್ತಾವ ಸಲ್ಲಿಸಿದ್ದ ಕಂಪನಿಯು ಯೋಜನೆಯ ಸ್ವರೂಪ ಬದಲಿಸಲಾಗಿದ್ದು, ಮರಗಳ ಹನನ ಸಂಖ್ಯೆಯನ್ನು 72 ಸಾವಿರದಿಂದ 13,954ಕ್ಕೆ ಇಳಿಸಲಾಗಿದೆ ಎಂದು ತಿಳಿಸಿತ್ತು. ಆ ನಂತರ, ನಾಲ್ಕು ವಲಯಗಳ ಅರಣ್ಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಯೋಜನೆಯ ಶಿಫಾರಸು ಮಾಡಿದ್ದರು. ಜತೆಗೆ, ಯೋಜನೆಯ ಅನುಷ್ಠಾನದಿಂದ ಪಶ್ಚಿಮ ಘಟ್ಟದ ಮೇಲೆ ಹಾನಿ ಉಂಟಾಗಲಿದೆ ಎಂದೂ ಎಚ್ಚರಿಸಿದ್ದರು. 

ಅಂತರ್‌ ಪ್ರಾದೇಶಿಕ ವಿದ್ಯುತ್ ವಿತರಣಾ ಜಾಲದ ವೃದ್ಧಿಗೆ ಈ ಯೋಜನೆ ಬಹಳ ಅಗತ್ಯ ಎಂದು ಪ್ರತಿಪಾದಿಸಿದ್ದ ಕೆಪಿಟಿಸಿಎಲ್‌ ವ್ಯವಸ್ಥಾಪಕ ನಿರ್ದೇಶಕರು, ಅರಣ್ಯ ತೀರುವಳಿ ಪ್ರಸ್ತಾವಕ್ಕೆ ಶೀಘ್ರ ಅನುಮೋದನೆ ನೀಡುವಂತೆ ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.