ADVERTISEMENT

ಅಸಮಾನತೆ ತೊಡೆದು ಹಾಕಲು ಗ್ಯಾರಂಟಿ ಜಾರಿ: ಮುಖ್ಯಮಂತ್ರಿ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2025, 9:35 IST
Last Updated 6 ಡಿಸೆಂಬರ್ 2025, 9:35 IST
<div class="paragraphs"><p>ಕಾರ್ಯಕ್ರಮದಲ್ಲಿ&nbsp;ಸಿದ್ದರಾಮಯ್ಯ-ಡಿ.ಕೆ ಶಿವಕುಮಾರ್</p></div>

ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ-ಡಿ.ಕೆ ಶಿವಕುಮಾರ್

   

ಹಾಸನ: ಸಂವಿಧಾನ ಜಾರಿಗೆ ಬಂದು 75 ವರ್ಷಗಳಾದರೂ, ಸಮಾಜದಲ್ಲಿ ಸಮಾನತೆ ಬಂದಿಲ್ಲ. ಶ್ರೀಮಂತರು ಶ್ರೀಮಂತರೆ, ಬಡವರು ಬಡವರೇ. ಜಾತಿ ವ್ಯವಸ್ಥೆಯಿಂದಾಗಿ ಸಮಾನ ಅವಕಾಶ ಸಿಗದೇ ಅಸಮಾನತೆ ಇನ್ನೂ ಇದೆ. ಅಸಮಾನತೆ ತೊಡದು ಹಾಕದವರೆಗೆ ಸ್ವಾತಂತ್ರ್ಯದ ಉದ್ದೇಶ ಈಡೇರುವುದಿಲ್ಲ. ಇದನ್ನು ಅರ್ಥ ಮಾಡಿಕೊಂಡಿರುವ ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳ ಮೂಲಕ ಅಸಮಾನತೆ ತೊಡದು ಹಾಕುವ ಪ್ರಯತ್ನ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ನಗರದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಶನಿವಾರ ಆಯೋಜಿಸಿರುವ ಸರ್ಕಾರಿ ಸೇವೆಗಳ ಸಮರ್ಪಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ADVERTISEMENT

ಡಾ.ಅಂಬೇಡ್ಕರ್‌ ಅವರು ದೇಶಕ್ಕೆ ಸಂವಿಧಾನ ಕೊಟ್ಟರು. ಸಮಾನತೆ, ಭ್ರಾತೃತ್ವ, ಸಮಸಮಾಜ ನಿರ್ಮಾಣ ಮಾಡಬೇಕು. ಎಲ್ಲರಿಗೂ ಸಮಾನ ಅವಕಾಶ, ಸಮಾನ ಹಕ್ಕುಗಳನ್ನು ಕೊಡಬೇಕು ಎಂದು ಅವರು ಹೇಳಿದ್ದರು. ಸಮಾನ ಅವಕಾಶ ಇಲ್ಲದಿದ್ದರೆ, ದೇಶಕ್ಕೆ ಸ್ವಾತಂತ್ರ್ಯ ಬಂದರೂ ಸಾರ್ಥಕವಾಗಲ್ಲ. ಕೇವಲ ರಾಜಕೀಯ ಸ್ವಾತಂತ್ರ್ಯ ಬಂದರೆ ಸಾಲದು ಎಂದು ಪ್ರತಿಪಾದಿಸಿದ್ದರು. ಅದಕ್ಕೆ ಅನುಗುಣವಾಗಿ ಎಲ್ಲ ಜಾತಿ, ಧರ್ಮಗಳ ಬಡವರಿಗೆ ಗ್ಯಾರಂಟಿಗಳನ್ನು ಜಾರಿ ಮಾಡಲಾಗಿದೆ ಎಂದು ಹೇಳಿದರು.

2023 ಮೇ 23 ಕ್ಕೆ ಅಧಿಕಾರಕ್ಕೆ ಬಂದೆವು. ಜೂನ್‌ 11 ರಿಂದ ಶಕ್ತಿ ಯೋಜನೆ ಜಾರಿ ಮಾಡಿದೆವು. 600 ಕೋಟಿಗೂ ಹೆಚ್ಚು ಮಹಿಳೆಯರು ಬಸ್‌ನಲ್ಲಿ ಉಚಿತ ಪ್ರಯಾಣ ಮಾಡಿದ್ದಾರೆ. ಜುಲೈನಲ್ಲಿ ಅನ್ನಭಾಗ್ಯ, ಗೃಹ ಜ್ಯೋತಿ, ಆಗಸ್ಟ್‌ನಲ್ಲಿ ಗೃಹಲಕ್ಷ್ಮಿ, 2024 ಜನವರಿಗೆ ಯುವನಿಧಿ ಯೋಜನೆ ಜಾರಿ ಮಾಡಿದೆವು. ₹1,08,135 ಕೋಟಿಯನ್ನು ಗ್ಯಾರಂಟಿ ಮೂಲಕ ಜನರಿಗೆ ನೀಡಿದ್ದೇವೆ. ಅಧಿಕಾರಕ್ಕೆ ಬಂದ ವರ್ಷದಲ್ಲಿಯೇ ಎಲ್ಲ ಐದು ಗ್ಯಾರಂಟಿಗಳನ್ನು ಜಾರಿ ಮಾಡಿದೆವು. ಲೋಕಸಭೆ ಚುನಾವಣೆಯ ನಂತರ ಗ್ಯಾರಂಟಿ ನಿಲ್ಲುತ್ತವೆ ಎಂದು ಪ್ರತಿಪಕ್ಷದವರು ಹೇಳಿದರು. ಆದರೆ ನಿಂತಿವೆಯೇ ಎಂದು ಪ್ರಶ್ನಿಸಿದರು.

ಈ ಕಾರ್ಯಕ್ರಮಗಳು ಸರಿಯಲ್ಲ ಎಂದು ಹೇಳುವವರಿಗೆ ಜನರೇ ಉತ್ತರ ಕೊಡಬೇಕು. ₹1 ಲಕ್ಷ ಕೋಟಿಯನ್ನು ಖರ್ಚು ಮಾಡುತ್ತಿರುವುದು ಅಸಮಾನತೆಯನ್ನು ನಿವಾರಿಸುವುದಕ್ಕಾಗಿ. ಡಾ.ಬಾಬಾಸಾಹೇಬ ಅಂಬೇಡ್ಕರ್‌ ಅವರನ್ನು ನೆನೆಯೋಣ. ಅಸಮಾನತೆ ತೊಡದು ಹಾಕುವ ಕೆಲಸ ಮಾಡೋಣ. ನಮ್ಮದು ಸಂವಿಧಾನದ ಪರವಾಗಿರುವ ಸರ್ಕಾರ ಎಂದರು.

ಹಾಸನ ನಮಗೆ ಪಕ್ಕದ ಜಿಲ್ಲೆ. ಇಲ್ಲಿನ ರಾಜಕೀಯ, ಸಂಸ್ಕೃತಿ ನನಗೆ ಗೊತ್ತು. ಅನೇಕ ಸಮಸ್ಯೆಗಳಿಗೆ ಪರಿಹಾರ ನೀಡುವ ಕೆಲಸ ಮಾಡಲಾಗುತ್ತಿದೆ. 2013– 18 ರವರೆಗೆ 165 ರಲ್ಲಿ 158 ಭರವಸೆಗಳನ್ನು ಈಡೇರಿಸಿದ್ದೇವೆ. 2023ರ ಚುನಾವಣೆಯಲ್ಲಿ 492 ಭರವಸೆ ನೀಡಿದ್ದೇವು. ಎರಡೂವರೆ ವರ್ಷದಲ್ಲಿ 242 ಭರವಸೆಗಳನ್ನು ಈಡೇರಿಸಿದ್ದೇವೆ. ಇಲ್ಲಿಯವರೆಗೆ ನೀಡಿರುವ ಎಲ್ಲ ಭರವಸೆಗಳನ್ನು ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಹೇಮಾವತಿ ಜಲಾಶಯ ಉದ್ಯಾನ, ಪ್ರವಾಸೋದ್ಯಮ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ಮಾತು ಕೊಡಲ್ಲ. ಕೊಟ್ಟ ಮೇಲೆ ಮಾಡಿಯೇ ಮಾಡುತ್ತೇವೆ. ಕೊಟ್ಟ ಮಾತಿನಂತೆ ನಡೆದುಕೊಂಡ ಸರ್ಕಾರ ಇದ್ದರೆ ಅದು ಕಾಂಗ್ರೆಸ್‌ ಸರ್ಕಾರ ಎಂದು ಹೇಳಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.