ADVERTISEMENT

ಹನೂರು ಚನ್ನಪ್ಪರ ಕಬ್ಬಿಣದ ಕುದುರೆಗಳು ಕಾದಂಬರಿ ಜನಾರ್ಪಣೆ

ಪರಂಪರೆ ಮಿಳಿತ ಸಾಹಿತ್ಯವೇ ಗಟ್ಟಿ: ಬರಗೂರು

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2026, 13:03 IST
Last Updated 15 ಫೆಬ್ರುವರಿ 2026, 13:03 IST
<div class="paragraphs"><p>ಹನೂರು ಚನ್ನಪ್ಪ ಅವರ ಕಬ್ಬಿಣದ ಕುದುರೆಗಳು ಕಾದಂಬರಿ ಲೋಕಾರ್ಪಣೆ ಸಮಾರಂಭದಲ್ಲಿ ಕರ್ನಾಟಕ ಗೃಹ ಮಂಡಳಿ ಆಯುಕ್ತ ಕೆ.ಎ.ದಯಾನಂದ ಮಾತನಾಡಿದರು.</p></div>

ಹನೂರು ಚನ್ನಪ್ಪ ಅವರ ಕಬ್ಬಿಣದ ಕುದುರೆಗಳು ಕಾದಂಬರಿ ಲೋಕಾರ್ಪಣೆ ಸಮಾರಂಭದಲ್ಲಿ ಕರ್ನಾಟಕ ಗೃಹ ಮಂಡಳಿ ಆಯುಕ್ತ ಕೆ.ಎ.ದಯಾನಂದ ಮಾತನಾಡಿದರು.

   

ಬೆಂಗಳೂರು: ‘ಪ್ರಯೋಗದ ಮೂಲಕ ರೋಮಾಂಚನದೊಂದಿಗೆ ತಾತ್ಕಾಲಿಕ ಅನುಭವ ನೀಡಿ ಮರೆಯಾಗುವುದಕ್ಕಿಂತ ಪರಂಪರೆ ಗಟ್ಟಿ ಮಿಳಿತದ, ಜನರ ಮನಸ್ಸಿನಲ್ಲಿ ಶಾಶ್ವತವಾಗಿ ನಿಲ್ಲುವ ಸಾಹಿತ್ಯ ರಚಿಸಿ’ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಹೇಳಿದರು.

ಚಾಮರಾಜನಗರದ ಜೋಳಿಗೆ ಪ್ರಕಾಶನ ಹೊರ ತಂದಿರುವ ಹನೂರು ಚನ್ನಪ್ಪ ಅವರ ಕಬ್ಬಿಣದ ಕುದುರೆಗಳು ಕಾದಂಬರಿಯನ್ನು ಭಾನುವಾರ ಜ್ಞಾನಭಾರತಿ ಆವರಣದ ವೆಂಕಟಗಿರಿಗೌಡ ಸ್ಮಾರಕ ಸಭಾಂಗಣದಲ್ಲಿ ನಡೆದ ಜನಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.‌

ADVERTISEMENT

‘ಪ್ರಯೋಗದಿಂದ ಹೊರ ಬಂದ ಕೃತಿಗಳು ತಾತ್ಕಾಲಿಕ ರೋಮಾಂಚನ ನೀಡಬಲ್ಲವು. ಆದರೆ, ಅವುಗಳು ಜನರ ನೆನಪಿನಲ್ಲಿ ಉಳಿಯುವುದಿಲ್ಲ. ಕನ್ನಡದಲ್ಲಿ ಕುವೆಂಪು ಅವರ ಮಲೆಗಳಲ್ಲಿ ಮದುಮಗಳು, ಕಾನೂರು ಸುಬ್ಬಮ್ಮ ಹೆಗ್ಗಡತಿ, ಶಿವರಾಮ ಕಾರಂತರ ಮರಳಿ ಮಣ್ಣಿಗೆ, ರಾವ್ ಬಹದ್ದೂರ್‌ ಅವರ ಗ್ರಾಮಾಯಣ ಕಾದಂಬರಿಗಳು ಬದುಕಿನ ವಿವಿಧ ಸ್ಥಿತ್ಯಂತರಗಳನ್ನು ಕಟ್ಟಿಕೊಟ್ಟಂತವು. ಈ ಕಾರಣದಿಂದಲೇ ಈಗಲೂ ಇವುಗಳು ಮಾಸ್ಟರ್‌ಪೀಸ್‌ ಎನ್ನಿಸಿ ಜನರ ನಡುವೆ ಸಾರ್ವತ್ರಿಕವಾಗಿ ಉಳಿದುಕೊಂಡಿವೆ’ ಎಂದು ಹೇಳಿದರು.

‘ಜಗತ್ತಿನ ಹಲವು ಲೇಖಕರ ಕಾದಂಬರಿಗಳನ್ನು ಜನರು ಈಗಲೂ ಓದುತ್ತಾರೆ. ಕೆಲವು ಕಾದಂಬರಿಗಳು ವಸ್ತು ವಿಷಯದಲ್ಲಿ ಗಟ್ಟಿಯಾಗಿದ್ದರೂ ಜನಪ್ರಿಯವಾಗುವುದಿಲ್ಲ. ವಿಮರ್ಶೆಯ ಮಾನದಂಡದಿಂದಲೂ ಕೆಲವೊಮ್ಮೆ ಈ ರೀತಿ ಆಗಿರುವುದನ್ನು ಜಗತ್ತಿನ ಸಾಹಿತ್ಯದಲ್ಲಿ ಕಾಣುತ್ತೇವೆ. ಸಾಹಿತ್ಯ, ಸಾಮಾಜಿಕ ನೆಲೆಯನ್ನು ಬಿಟ್ಟು ರಾಜಕೀಯ ನೆಲೆ‌ಯಲ್ಲಿ ನೋಡಿದಾಗ ವಿಮರ್ಶೆ, ನೈಜ ಚರ್ಚೆ ಕ್ಷೀಣವಾಗುತ್ತದೆ’ ಎಂದರು.

‘ತಳ ಸಮುದಾಯದವರಿಗೆ ಶಿಕ್ಷಣ ಸಿಕ್ಕಾಗ ಅಲ್ಲಿನ ಅಜ್ಞಾತ ಲೋಕ ಅಕ್ಷರ ರೂಪದಲ್ಲಿ ಅನಾವರಣಗೊಳ್ಳುತ್ತದೆ. ಗುಡಿಸಲು, ಹಟ್ಟಿಗಳಲ್ಲಿ ಬೆಳೆದವರು ತಾವು ಅನುಭವಿಸಿದ ಜಾತಿ ಕಟ್ಟುಪಾಡುಗಳು, ಅಲ್ಲಿ ಕಂಡಿದ್ದನ್ನು ಪ್ರಾಮಾಣಿಕವಾಗಿ ಬರೆಯುತ್ತಾರೆ. ಚನ್ನಪ್ಪ ಅವರು ಚಾಮರಾಜನಗರ ಜಿಲ್ಲೆಯ ಕೆಳ ಸಮುದಾಯದ ದನಿಯನ್ನು ತಮ್ಮ ಕಾದಂಬರಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಶ್ರೇಣಿಕೃತ ವ್ಯವಸ್ಥೆಯ ಪಲ್ಲಟಗಳ ಚಿತ್ರಣದಿಂದ ಚಲನಶೀಲತೆಯನ್ನು ಉಳಿಸಿಕೊಂಡಿದ್ದು, ಆಧ್ಯಯನಾಸಕ್ತರಿಗೆ ಇದು ಪಠ್ಯವಾಗಬಲ್ಲದು’ ಎಂದು ಹೇಳಿದರು.

ಗೃಹ ಮಂಡಳಿ ಆಯುಕ್ತ ಕೆ.ಎ.ದಯಾನಂದ ಕಾದಂಬರಿ ಜನಾರ್ಪಣೆಗೊಳಿಸಿದರು. ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್‌.ಎನ್‌.ಮುಕುಂದರಾಜ್‌ ಅಧ್ಯಕ್ಷತೆ ವಹಿಸಿದ್ದರು. ಪ್ರಜಾವಾಣಿಯ ‘ಅಭಿಮತ’ದ ಸಂಪಾದಕ ರಘುನಾಥ ಚ.ಹ. ಕಾದಂಬರಿ ಕುರಿತು ಮಾತನಾಡಿದರು. ಲೇಖಕ ಹನೂರು ಚನ್ನಪ್ಪ, ಪ್ರಕಾಶಕ ಮಂಜು ಕೋಡಿಉಗನೆ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.