ADVERTISEMENT

ಆತ್ಮ ಸ್ವಚ್ಛ, ಹೋರಾಟ ನಿರಂತರ: ಎಚ್‌.ಡಿ. ದೇವೇಗೌಡ ಪ್ರತಿಪಾದನೆ

ಜೆಡಿಎಸ್‌ ಬೆಳ್ಳಿ ಹಬ್ಬದ ಸಮಾವೇಶದಲ್ಲಿ ಕಾಂಗ್ರೆಸ್‌ ವಿರುದ್ಧ ಎಚ್‌.ಡಿ.ದೇವೇಗೌಡ ಕಿಡಿ

​ಪ್ರಜಾವಾಣಿ ವಾರ್ತೆ
Published 24 ಜನವರಿ 2026, 23:30 IST
Last Updated 24 ಜನವರಿ 2026, 23:30 IST
ಹಾಸನದಲ್ಲಿ ಶನಿವಾರ ನಡೆದ ಜೆಡಿಎಸ್‌ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಜನರ ಕೈಕುಲುಕಿದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ
ಹಾಸನದಲ್ಲಿ ಶನಿವಾರ ನಡೆದ ಜೆಡಿಎಸ್‌ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಜನರ ಕೈಕುಲುಕಿದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ   

ಹಾಸನ: ಬೆಳ್ಳಿಹಬ್ಬದ ಅಂಗವಾಗಿ ನಗರದಲ್ಲಿ ಶನಿವಾರ ನಡೆದ ಜೆಡಿಎಸ್ ಆಯೋಜಿಸಿದ್ದ ಸಮಾವೇಶವು ಪಕ್ಷದ ಶಕ್ತಿ ಪ್ರದರ್ಶನ ಹಾಗೂ ಕಾಂಗ್ರೆಸ್‌ ಸರ್ಕಾರದ ವಿರುದ್ಧ ವಾಗ್ದಾಳಿಗೆ ವೇದಿಕೆಯಾಯಿತು.

ಭಾರಿ ಸಂಖ್ಯೆಯಲ್ಲಿ ಸೇರಿದ್ದ ಜನರನ್ನು ನೋಡಿದ ಜೆಡಿಎಸ್ ವರಿಷ್ಠ ಎಚ್‌.ಡಿ. ದೇವೇಗೌಡರು, ಗಟ್ಟಿ ಮಾತಿನಲ್ಲಿಯೇ ತಮ್ಮ ಸಾಧನೆಗಳನ್ನು ಹೇಳಿಕೊಂಡರು. ಬಿಜೆಪಿ ಜೊತೆಗಿನ ಮೈತ್ರಿಯನ್ನು ಸಮರ್ಥಿಸಿ ಕೊಳ್ಳುತ್ತಲೇ, ಜಿಲ್ಲೆಯಲ್ಲಿ ಜೆಡಿಎಸ್‌ ಹೊರತಾಗಿ ಅದಕ್ಕೆ ಅಸ್ತಿತ್ವವಿಲ್ಲ ಎಂಬ ಸಂದೇಶವನ್ನೂ ನೀಡಿದರು. ಕಾಂಗ್ರೆಸ್‌ನ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರ ವಿರುದ್ಧ ಆಕ್ರೋಶವನ್ನೂ ಹೊರಹಾಕಿದರು. ‘ಪಕ್ಷದಲ್ಲಿ ನಾಯಕತ್ವದ ಕೊರತೆ ಇಲ್ಲ’ ಎಂಬ ಪ್ರತಿಪಾದನೆಯೂ ನಡೆಯಿತು.

ಜಿಲ್ಲೆಯಲ್ಲಿ ಕಾಂಗ್ರೆಸ್‌ ಸರ್ಕಾರ ನಡೆಸಿದ ಎರಡು ಸಮಾವೇಶಗಳಿಗೆ ಪ್ರತಿಯಾಗಿ ಆಯೋಜಿಸಿದಂತಿದ್ದ ಸಮಾವೇಶದ ಮೂಲಕವೇ, ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗೆ ಸಿದ್ಧತೆಯನ್ನೂ ಪಕ್ಷ ಆರಂಭಿಸಿತು. ನಿಖಿಲ್‌ ಕುಮಾರಸ್ವಾಮಿ, ಡಾ.ಸೂರಜ್‌ ರೇವಣ್ಣ ಅವರಿಗೆ ಮಾತನಾಡಲು ಅವಕಾಶ ನೀಡಿ, ‘ಯುವ ನಾಯಕತ್ವ’ವನ್ನು ಪ್ರತಿಪಾದಿಸಿತು. 

ADVERTISEMENT

‘ದೇವೇಗೌಡನ ಆತ್ಮ ಸ್ವಚ್ಛವಾಗಿದೆ. ಯಾರ ಹಂಗಿಗೂ ನಾನು ಒಳಗಾಗಿಲ್ಲ. ದುಡಿದಿದ್ದೇನೆ, ಕಷ್ಟಪಟ್ಟಿದ್ದೇನೆ. ನಿನ್ನೆಯೇ ಡಯಾಲಿಸಿಸ್‌ ಮಾಡಿಕೊಂಡಿದ್ದು, ಇಂದು ಜನರ ಮಧ್ಯೆ ಇದ್ದೇನೆ. ನನ್ನ ಹೋರಾಟ ನಿರಂತರ’ ಎಂದು ಎಚ್‌.ಡಿ. ದೇವೇಗೌಡ ಪ್ರತಿಪಾದಿಸಿದರು. 

‘ನನಗೆ ದೈವದಲ್ಲಿ ನಂಬಿಕೆ ಇದೆ. ಕಾಲ ಬರುತ್ತೆ. ಸ್ವಲ್ಪ ಕಾಯಿರಿ. ರಾಜ್ಯದಲ್ಲಿ ಏನೇನು ನಡೆದಿದೆ ಎಂಬುದನ್ನು ಹೇಳಬಲ್ಲೆ. ಆದರೆ, ಈ ಬಾಯಿ ಹೊಲಸು ಮಾಡಿಕೊಳ್ಳಲು ಹೋಗಲ್ಲ. 10 ವರ್ಷದ ಹಿಂದೆ ಜಿಲ್ಲೆಗೆ ಬಂದಿದ್ದ ರಾಹುಲ್‌ ಗಾಂಧಿ, ಜೆಡಿಎಸ್ ಪಕ್ಷವನ್ನು ಕಾಂಗ್ರೆಸ್‌ನ ಬಿ ಟೀಂ ಎಂದು ಕರೆದಿದ್ದರು. ಇಂದು ಅದೇ ದೇವೇಗೌಡ ಬಿಜೆಪಿ ಜೊತೆ ಮೈತ್ರಿ ಸಾಧಿಸಿ, ಎನ್‌ಡಿಎದಲ್ಲಿ ನಾವು ಪಾಲುದಾರರಾಗಿದ್ದೇವೆ’ ಎಂದು ಸಮರ್ಥಿಸಿಕೊಂಡರು.

‘ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಜ್ಯದ ಜೆಡಿಎಸ್‌–ಬಿಜೆಪಿಯ 18 ಸಂಸದರನ್ನು ಇಲ್ಲಿಗೆ ಕರೆಸಿ, ವಿಮಾನ ನಿಲ್ದಾಣದ ಉದ್ಘಾಟನೆ ಹಾಗೂ ಐಐಟಿ ಸ್ಥಾಪನೆಯ ಕನಸನ್ನು ಈಡೇರಿಸುವೆ’ ಎಂದರು.

‘ರೇವಣ್ಣ ಹಾಗೂ ಅವರ ಕುಟುಂಬವನ್ನು ಮುಗಿಸಲು ಹೊರಟ ಎಸ್‌ಐಟಿ ಅಧಿಕಾರಿಗಳಿಗೆ, ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದಿರುವ ನಮ್ಮ ಎದುರಾಳಿಗಳು ಉಡುಗೊರೆ ಕೊಟ್ಟಿದ್ದಾರೆ. 25 ವರ್ಷದ ಹಿಂದೆ ಎಚ್‌.ಡಿ. ಕುಮಾರಸ್ವಾಮಿ ದುಡ್ಡು ಕೊಟ್ಟು ಜಮೀನು ಖರೀದಿಸಿದ್ದಕ್ಕೆ ಅವರ ವಿರುದ್ಧ ಪ್ರಕರಣ ದಾಖಲಿಸಿದರು’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಜಿಲ್ಲೆಯಲ್ಲಿ ನಮ್ಮ ಎದುರಾಳಿಗಳು ಎರಡು ಸಮಾವೇಶ ಮಾಡಿ, ಜೆಡಿಎಸ್‌ ನಾಶ ಮಾಡುವುದಾಗಿ ಹೇಳಿದ್ದರು. ಆದರೆ, ಇಲ್ಲಿ ಬಂದಿರುವ ಜನ, ನಿಮ್ಮ ಆಟ ನಡೆಯೊಲ್ಲ. ರೇವಣ್ಣ, ಕುಮಾರಸ್ವಾಮಿ ಹಿಂದೆ ನಾವಿದ್ದೇವೆ ಎಂಬ ಮಾತನ್ನು ಆಡಳಿತ ನಡೆಸುವವರಿಗೆ ನೀಡಿದ್ದೀರಿ’ ಎಂದು ಹೇಳಿದರು.

ಹಾಸನದಲ್ಲಿ ಶನಿವಾರ ನಡೆದ ಜೆಡಿಎಸ್‌ ಸಮಾವೇಶದಲ್ಲಿ ಸೇರಿದ್ದ ಜನಸ್ತೋಮ.

2028ಕ್ಕೆ ಜನಪರ ಸರ್ಕಾರ ರಚನೆ

‘ಇದು ಪ್ರಾರಂಭ. ರಾಜ್ಯದ ಆಡಳಿತ ನಡೆಸುತ್ತಿರುವ ದುರಂಹಕಾರಿ ಕಾಂಗ್ರೆಸ್‌ ಸರ್ಕಾರವನ್ನು ಕಿತ್ತೆಸೆಯಲು‌ 30 ಜಿಲ್ಲೆಗಳಲ್ಲಿ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. 2028ಕ್ಕೆ ರಾಜ್ಯದಲ್ಲಿ ಜನಪರ ಸರ್ಕಾರ ರಚಿಸುತ್ತೇವೆ’ ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

‘ಮುಖ್ಯಮಂತ್ರಿ ಕುರ್ಚಿಗಾಗಿ ಎರಡೂವರೆ ವರ್ಷದಿಂದ ನಡೆಯುತ್ತಿರುವ ನಾಟಕ ನೋಡುತ್ತಿದ್ದೇನೆ. ಕೋಗಿಲು ಪ್ರದೇಶದಲ್ಲಿ ಅಲ್ಪಸಂಖ್ಯಾತ ಕುಟುಂಬಗಳನ್ನು ಬೀದಿಗೆ ತಂದರು. ಮೆಕ್ಕೆಜೋಳ ತೊಗರಿ ಬೆಳೆದ ರೈತರು ಸಂಕಷ್ಟದಲ್ಲಿದ್ದಾರೆ. ರಾಜ್ಯದ ಜನರ ಕಷ್ಟಗಳಿಗೆ ಸ್ಪಂದಿಸಲು ಇವರಿಗೆ ಸಮಯವಿಲ್ಲ’ ಎಂದು ಟೀಕಿಸಿದರು.

‘ದೇವೇಗೌಡರ ಮಗನಾಗಿ ಹಾಸನ ಜಿಲ್ಲೆಗೆ ಮೂರು ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಕೊಟ್ಟಿದ್ದೇನೆ. ದೇವರಾಜ ಅರಸು ಅವರ ದಾಖಲೆಯನ್ನು ಅಳಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ತವರಿನಲ್ಲಿ ಒಂದೇ ಒಂದು ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜು ಇಲ್ಲ’ ಎಂದರು.

ದೇವೇಗೌಡರ ಕುಟುಂಬವನ್ನು ಹೆದರಿಸುತ್ತೇವೆ ಎಂದುಕೊಂಡಿದ್ದರೆ ‌ಆಗುವುದಿಲ್ಲ. ದ್ವೇಷ ರಾಜಕಾರಣ ಮಾಡುತ್ತಿರುವ ಕಾಂಗ್ರೆಸ್‌ ನಿರ್ನಾಮ ಈ ಜಿಲ್ಲೆಯಿಂದಲೇ ಆರಂಭವಾಗಲಿದೆ.
-ಎಚ್‌.ಡಿ. ರೇವಣ್ಣ, ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.