ADVERTISEMENT

ಮೃಗಾಲಯದಲ್ಲಿ ತಣ್ಣೀರಿನ ಸಿಂಚನ!

ತಾಪದಿಂದ ಪ್ರಾಣಿಗಳನ್ನು ರಕ್ಷಿಸುವ ಪ್ರಯತ್ನ; ಆಹಾರ ಕ್ರಮದಲ್ಲೂ ಬದಲಾವಣೆ

ಜೋಮನ್ ವರ್ಗಿಸ್
Published 8 ಏಪ್ರಿಲ್ 2019, 20:00 IST
Last Updated 8 ಏಪ್ರಿಲ್ 2019, 20:00 IST
ಗದಗ ಬಿಂಕದಕಟ್ಟಿ ಮೃಗಾಲಯದಲ್ಲಿ, ಬಿಸಿಲಿನ ತಾಪದಿಂದ ರಕ್ಷಿಸಿಕೊಳ್ಳಲು ಸ್ಪ್ರಿಂಕ್ಲರ್‌ನಿಂದ ಚಿಮ್ಮುವ ನೀರಿನ ಸಮೀಪ ಬಂದು ನಿಂತಿರುವ ಜಿಂಕೆಗಳು
ಗದಗ ಬಿಂಕದಕಟ್ಟಿ ಮೃಗಾಲಯದಲ್ಲಿ, ಬಿಸಿಲಿನ ತಾಪದಿಂದ ರಕ್ಷಿಸಿಕೊಳ್ಳಲು ಸ್ಪ್ರಿಂಕ್ಲರ್‌ನಿಂದ ಚಿಮ್ಮುವ ನೀರಿನ ಸಮೀಪ ಬಂದು ನಿಂತಿರುವ ಜಿಂಕೆಗಳು   

ಗದಗ: ದಿನದಿಂದ ದಿನಕ್ಕೆ ಏರುತ್ತಿರುವ ಬಿಸಿಲಿನ ತಾಪದಿಂದ ಪ್ರಾಣಿ, ಪಕ್ಷಿಗಳನ್ನು ರಕ್ಷಿಸುವುದಕ್ಕಾಗಿ ಗದುಗಿನ ಬಿಂಕದಕಟ್ಟಿ ಮೃಗಾಲಯದ ಸಿಬ್ಬಂದಿ, ತುಂತುರು ನೀರಾವರಿಗೆ ಮೊರೆ ಹೋಗಿದ್ದಾರೆ.

ಕಳೆದೆರಡು ವಾರಗಳಿಂದ ನಗರದಲ್ಲಿ ಸರಾಸರಿ 39 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ಉಷ್ಣಾಂಶ ದಾಖಲಾಗುತ್ತಿದ್ದು, ಬಿಸಿಲಿನ ಝಳಕ್ಕೆ ಪ್ರಾಣಿಗಳು ತತ್ತರಿಸಿವೆ. ಪ್ರಾಣಿಗಳಿಗೆ ಪಂಜರದಲ್ಲಿ ಸ್ಪ್ರಿಂಕ್ಲರ್‌ ಅಳವಡಿಸಿ, ತಣ್ಣೀರಿನ ಸಿಂಚನ ಮಾಡುವ ಮೂಲಕ ಅವುಗಳ ತಾಪ ತಣಿಸುವ ಪ್ರಯತ್ನ ನಡೆಸಿದ್ದಾರೆ.

ಮೃಗಾಲಯದಲ್ಲಿ ವಿವಿಧ ಜಾತಿಯ 350ಕ್ಕೂ ಹೆಚ್ಚು ಪ್ರಾಣಿ, ಪಕ್ಷಿಗಳಿವೆ. ಇದರಲ್ಲಿ ಕಡವೆ, ಜಿಂಕೆ, ಸಾಂಬಾರ್‌ ಹಿಂಡು ಇರುವ ಆವರಣದಲ್ಲಿ ಮತ್ತು ಆಸ್ಟ್ರಿಚ್‌, ಎಮು ಪಕ್ಷಿಗಳ ಪಂಜರದಲ್ಲಿ 10 ಸ್ಪ್ರಿಂಕ್ಲರ್‌ಗಳನ್ನು ಅಳವಡಿಸಲಾಗಿದೆ. ಪ್ರತಿನಿತ್ಯ 3ರಿಂದ 4 ತಾಸು ಇಲ್ಲಿ ತಣ್ಣೀರು ಸಿಂಪಡಿಸಲಾಗುತ್ತಿದೆ. ಮಧ್ಯಾಹ್ನದ ವೇಳೆಗೆ ಬಿಸಿಲ ಧಗೆಯಿಂದ ಪಾರಾಗಲು, ಪ್ರಾಣಿಗಳು ಈ ಸ್ಪ್ರಿಂಕ್ಲರ್‌ನಿಂದ ನೀರು ಚಿಮ್ಮುವ ಸುತ್ತಳತೆಯಲ್ಲೇ ಬಂದು ನಿಲ್ಲುವ ದೃಶ್ಯ ಸಾಮಾನ್ಯವಾಗಿದೆ.

ADVERTISEMENT

‘ಮೃಗಾಲಯದ ಬಳಕೆಗಾಗಿ ಪ್ರತಿನಿತ್ಯ ಸರಾಸರಿ 40 ಸಾವಿರ ಲೀಟರ್‌ನಷ್ಟು ನೀರು ಬೇಕಾಗುತ್ತದೆ. ಈಗ ಸ್ಪ್ರಿಂಕ್ಲರ್‌ ವ್ಯವಸ್ಥೆ ಕಲ್ಪಿಸಿರುವುದರಿಂದ ಹೆಚ್ಚುವರಿಯಾಗಿ 20 ಸಾವಿರ ಲೀಟರ್‌ ನೀರು ಬೇಕಾಗುತ್ತದೆ. ಮೃಗಾಲಯದಲ್ಲಿ ಮೂರು ಕೊಳವೆಬಾವಿಗಳಿವೆ. ಜತೆಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ನೀರು ಪೂರೈಕೆಯಾಗುತ್ತಿದೆ. ಹೀಗಾಗಿ ನೀರಿನ ಕೊರತೆ ಇಲ್ಲ’ ಎಂದು ಮೃಗಾಲಯದ ಆರ್‌ಎಫ್‌ಒ ಮಹಾಂತೇಶ ಪೆಟ್ಲೂರ ‘ಪ್ರಜಾವಾಣಿ’ಗೆ ತಿಳಿಸಿದರು.‌

ಮೃಗಾಲಯದ ಆವರಣದಲ್ಲಿ ಪ್ರಾಣಿಗಳ ವಿಶ್ರಾಂತಿಗಾಗಿ ಅಲ್ಲಲ್ಲಿ ಒಣಹುಲ್ಲಿನ ಚಾವಣಿ ಇರುವ ನೆರಳಿನ ಮನೆಗಳನ್ನು ನಿರ್ಮಿಸಲಾಗಿದೆ. ಬಿಸಿಲೇರುತ್ತಿದ್ದಂತೆ ಪ್ರಾಣಿಗಳು ಇದರ ಕೆಳಗೆ ವಿಶ್ರಾಂತಿ ಪಡೆಯುತ್ತವೆ. ಹುಲಿಗಳ ಆವಾಸಕ್ಕೆ ಕಾಡಿನ ಸಹಜ ಪರಿಸರ ಹೋಲುವಂತೆ ಅಭಿವೃದ್ಧಿಪಡಿಸಿರುವ ‘ಟೈಗರ್ ಡೇಕ್ರಾಲ್’ನಲ್ಲಿ ಪುಟ್ಟ ಕೊಳ ನಿರ್ಮಿಸಲಾಗಿದ್ದು, ಬಿಸಿಲಿನ ತಾಪದಿಂದ ರಕ್ಷಣೆ ಪಡೆಯಲು ಹುಲಿ ಈ ನೀರಿನಲ್ಲೇ ವಿರಮಿಸುತ್ತದೆ.

‘ಚಿರತೆ ಪಂಜರದ ಮೇಲ್ಭಾಗವನ್ನು ಅರ್ಧ ಭಾಗ ಹುಲ್ಲಿನಿಂದ ಹೊದೆಸಿ, ನೆರಳಿನ ವ್ಯವಸ್ಥೆ ಕಲ್ಪಿಸುವ ಪ್ರಯತ್ನಗಳು ನಡೆದಿವೆ. ಎಮು ಪಕ್ಷಿಗಳಿಗಾಗಿ ಶೀಘ್ರದಲ್ಲೇ ‘ಕೆಸರಿನ ಹೊಂಡ’ ನಿರ್ಮಿಸಲಾಗುವುದು’ ಎಂದು ಮೃಗಾಲಯದ ಸಿಬ್ಬಂದಿ, ಬಿಸಿಲಿನಿಂದ ಪ್ರಾಣಿಗಳನ್ನು ರಕ್ಷಿಸಲು ಕೈಗೊಳ್ಳುತ್ತಿರುವ ಕ್ರಮಗಳನ್ನು ವಿವರಿಸಿದರು.

ಕಲ್ಲಂಗಡಿಯೇ ಪ್ರಮುಖ ಆಹಾರ: ಉಷ್ಣಾಂಶದಲ್ಲಿ ಏರಿಕೆಯಾದ ಬೆನ್ನಲ್ಲೇ, ಮೃಗಾಲಯದ ಪ್ರಾಣಿಗಳ ಆಹಾರ ಕ್ರಮದಲ್ಲೂ ಬದಲಾವಣೆ ಮಾಡಲಾಗಿದೆ.

ಹೆಚ್ಚಿನ ನೀರಿನಂಶ ಇರುವ ಆಹಾರವನ್ನೇ ಪ್ರಾಣಿಗಳಿಗೆ ನೀಡಲಾಗುತ್ತಿದೆ. ಕರಡಿ, ಆಸ್ಟ್ರಿಚ್‌ ಮತ್ತು ಎಮು ಪಕ್ಷಿಗಳಿಗೆ ಕಲ್ಲಂಗಡಿ ಹಣ್ಣನ್ನು ಯಥೇಚ್ಛವಾಗಿ ನೀಡಲಾಗುತ್ತಿದೆ.

*
ಒಳ್ಳೆಯ ಮಳೆಯಾಗುವ ತನಕ, ಮೃಗಾಲಯದ ಪ್ರಾಣಿಗಳಿಗೆ ಸ್ಪ್ರಿಂಕ್ಲರ್‌ನಿಂದ ನೀರು ಸಿಂಪಡಿಸುವ ಕೆಲಸ ಮುಂದುವರಿಯಲಿದೆ.
-ಸೋನಲ್‌ ವೃಶ್ನಿ,ಉಪ ಅರಣ್ಯ ಸಂರಕ್ಷಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.