ವಿಜಯಪುರ: ‘ನಕಲಿ ಲೆಟರ್‌ಹೆಡ್, ಸಹಿ ಬಳಸಿಕೊಂಡು ನನ್ನ ತೇಜೋವಧೆಯ ಯತ್ನ ನಡೆಸಲಾಗಿದೆ. ಸಮಾಜದಲ್ಲಿ ಗೊಂದಲ ಸೃಷ್ಟಿಸಿದವರ ವಿರುದ್ಧ ತನಿಖೆ ನಡೆಸಿ, ಕ್ರಮ ಜರುಗಿಸಬೇಕು’ ಎಂದು ಗೃಹ ಸಚಿವ ಎಂ.ಬಿ.ಪಾಟೀಲ ಇಲ್ಲಿನ ಆದರ್ಶ ನಗರದ ಪೊಲೀಸ್ ಠಾಣೆಯಲ್ಲಿ ಮಂಗಳವಾರ ದೂರು ದಾಖಲಿಸಿದ್ದಾರೆ.
ಪೊಲೀಸ್ ಠಾಣೆಗೆ ತನ್ನ ಬೆಂಬಲಿಗರೊಂದಿಗೆ ಖುದ್ದು ಭೇಟಿ ನೀಡಿ, ಪಿಎಸ್‌ಐ ರಾಜೇಶ ಲಮಾಣಿ ಅವರಿಗೆ ಗೃಹ ಸಚಿವರು ದೂರು ಸಲ್ಲಿಸಿದರು.
‘ಬಿಎಲ್‌ಡಿಇ ಸಂಸ್ಥೆಯ ಅಧ್ಯಕ್ಷರಾಗಿರುವ ಸಚಿವ ಎಂ.ಬಿ.ಪಾಟೀಲ 2017ರ ಜುಲೈ 10ರಂದು ಆಗಿನ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಅವರಿಗೆ ‘ಲಿಂಗಾಯತ ಪ್ರತ್ಯೇಕ ಧರ್ಮ’ದ ಕುರಿತಂತೆ ಪತ್ರ ಬರೆದಿದ್ದರುಎಂಬ ಖೊಟ್ಟಿ ಪತ್ರ ಸೃಷ್ಟಿಸಿ, ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡಲಾಗಿತ್ತು.’
‘2018ರ ವಿಧಾನಸಭಾ ಚುನಾವಣೆ ಸಂದರ್ಭವೂ ಈ ಪತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಲಾಗಿತ್ತು. ಇದೀಗ ಲೋಕಸಭಾ ಚುನಾವಣೆ ಸಂದರ್ಭದಲ್ಲೂ ರಾಜಕೀಯ ದುರುದ್ದೇಶಕ್ಕಾಗಿ ಸುಳ್ಳು ಪತ್ರವನ್ನುಬಳಸಿಕೊಳ್ಳಲಾಗುತ್ತಿದೆ. ಸಮಾಜದಲ್ಲಿ ಗೊಂದಲ ಸೃಷ್ಟಿಸುವವರ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂದು ಗೃಹ ಸಚಿವರು ದೂರು ದಾಖಲಿಸಿದ್ದಾರೆ’ ಎಂದು ಆದರ್ಶ ನಗರ ಪೊಲೀಸರು ‘ಪ್ರಜಾವಾಣಿ’ಗೆ ತಿಳಿಸಿದರು.
‘ಪತ್ರಿಕೆಯೊಂದು ಪ್ರಕಟಿಸಿದ್ದಸುದ್ದಿಯ ತುಣುಕಿನ ಜತೆಗೆ ಗೃಹ ಸಚಿವರು ದೂರು ದಾಖಲಿಸಿದ್ದಾರೆ. ಎಫ್‌ಐಆರ್ ಮಾಡಿದ್ದೇವೆ. ತನಿಖೆ ನಡೆಯಲಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್ ಅಮೃತ್ ನಿಕ್ಕಂ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.