ADVERTISEMENT

ಪರಿಷತ್ ಸದಸ್ಯ ರಾಜೇಂದ್ರ ಹತ್ಯೆಗೆ ₹70 ಲಕ್ಷಕ್ಕೆ ಒಪ್ಪಂದ: ಪ್ರಭಾವಿ ಕೈವಾಡ?

ಕೊಲೆಗೆ ಸುಪಾರಿ: ರೌಡಿ ಸೇರಿದಂತೆ ಐವರ ವಿರುದ್ಧ ಎಫ್‌ಐಆರ್‌

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2025, 0:30 IST
Last Updated 29 ಮಾರ್ಚ್ 2025, 0:30 IST
<div class="paragraphs"><p>ಆರ್‌.ರಾಜೇಂದ್ರ</p></div>

ಆರ್‌.ರಾಜೇಂದ್ರ

   

ತುಮಕೂರು: ಸಹಕಾರ ಸಚಿವ ಕೆ.ಎನ್‌.ರಾಜಣ್ಣ ಅವರ ಪುತ್ರ, ವಿಧಾನ ಪರಿಷತ್‌ ಸದಸ್ಯ ಆರ್‌.ರಾಜೇಂದ್ರ ಅವರ ಕೊಲೆಗೆ ಸಂಚು ನಡೆಸಿದ್ದ ಆರೋಪದ ಮೇಲೆ ಐವರ ವಿರುದ್ಧ ಇಲ್ಲಿನ ಕ್ಯಾತ್ಸಂದ್ರ ಪೊಲೀಸ್‌ ಠಾಣೆಯಲ್ಲಿ ಶುಕ್ರವಾರ ಎಫ್‌ಐಆರ್‌ ದಾಖಲಾಗಿದೆ. ಬೆಂಗಳೂರಿನ ಪ್ರಭಾವಿ ವ್ಯಕ್ತಿಯೊಬ್ಬರು ಕೊಲೆಗೆ ₹70 ಲಕ್ಷಕ್ಕೆ ಸುಪಾರಿ ನೀಡಿದ್ದರು ಎಂಬ ಆರೋಪ ಎಫ್‌ಐಆರ್‌ನಲ್ಲಿ ಇದೆ.

ಸೋಮ, ಭರತ್, ಅಮಿತ್, ಗುಂಡಾ, ಯತೀಶ್ ಇತರರ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿಗಳ ಪೈಕಿ ಸೋಮ ಎಂಬಾತ ರೌಡಿ ಶೀಟರ್ ಎಂಬುದು ಗೊತ್ತಾಗಿದೆ.  

ADVERTISEMENT

ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಅಲೋಕ್‌ ಮೋಹನ್ ಅವರನ್ನು ಗುರುವಾರ ಭೇಟಿ ಮಾಡಿದ್ದ ರಾಜೇಂದ್ರ ಅವರು ದೂರು ಸಲ್ಲಿಸಿದ್ದರು. ಘಟನೆಯು ತುಮಕೂರಿನಲ್ಲಿ ನಡೆದಿದ್ದು, ಎಸ್‌ಪಿಯವರಿಗೆ ದೂರು ಸಲ್ಲಿಸುವಂತೆ ಡಿಜಿಪಿ ಸೂಚಿಸಿದ್ದರು. ಅವರ ಸೂಚನೆ ಮೇರೆಗೆ ಶುಕ್ರವಾರ ಎಸ್‌ಪಿ ಕಚೇರಿಗೆ ತೆರಳಿದ ರಾಜೇಂದ್ರ ಅವರು ಕೊಲೆಗೆ ಕೆಲವರು ಸಂಚು ರೂಪಿಸಿದ್ದು, ತನಿಖೆ ನಡೆಸುವಂತೆ ಕೋರಿ ದೂರು ಸಲ್ಲಿಸಿದರು. ದೂರಿನ ಬೆನ್ನಲ್ಲೇ ಐವರ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಎಫ್‌ಐಆರ್‌ನಲ್ಲಿ ಏನಿದೆ?:

‘ಬೆಂಗಳೂರಿನ ಪ್ರಭಾವಿ ವ್ಯಕ್ತಿಗಳು ನನ್ನ ಕೊಲೆಗೆ ಪಿತೂರಿ ನಡೆಸಿದ್ದು, ಒಂದು ಗುಂಪಿಗೆ ₹70 ಲಕ್ಷಕ್ಕೆ ಸುಪಾರಿ ನೀಡಿದ್ದು, ಮುಂಗಡವಾಗಿ ₹5 ಲಕ್ಷ ನೀಡಲಾಗಿತ್ತು. ಇದಕ್ಕೆ ಸಂಬಂಧಿಸಿದ ಆಡಿಯೊ ತುಣುಕು ಲಭ್ಯವಾಗಿದೆ. ಅನಾಮಧೇಯ ಮೂಲಗಳಿಂದ ಕೆಲವು ತಿಂಗಳ ಹಿಂದೆ ಆಡಿಯೊ ರೆಕಾರ್ಡ್ ಸಿಕ್ಕಿತ್ತು. ಅದರ ಒಂದು ತುಣುಕಿನಲ್ಲಿ ಇಬ್ಬರು ವ್ಯಕ್ತಿಗಳು ಸಂಭಾಷಣೆ ನಡೆಸಿದ್ದಾರೆ. ಸೋಮ, ಭರತ್, ಅಮಿತ್, ಗುಂಡಾ, ಯತೀಶ್ ಇತರರು ಹತ್ಯೆಗೆ ಸಂಚು ರೂಪಿಸಿದ ಬಗ್ಗೆ ಮಾಹಿತಿ ಲಭ್ಯವಾಗಿದೆ.

‘ಸೋಮ, ಭರತ, ಇತರರು ನಗರದ ಶಿರಾ ಗೇಟ್ ತೋಟದ ಮನೆಯಲ್ಲಿ ಕೊಲೆಗೆ ಸಂಚು ರೂಪಿಸಿದ್ದರು. ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿದ್ದರು. ನನ್ನನ್ನು ಕೊಲೆ ಮಾಡುವುದಕ್ಕಾಗಿಯೇ ಕಾರನ್ನೂ ಖರೀದಿಸಿದ್ದರು. ಬೆಂಗಳೂರಿನ ಕಲಾಸಿಪಾಳ್ಯ, ಮಧುಗಿರಿ ಭಾಗದಲ್ಲಿ ನನ್ನ ಚಲನವಲನ ತಿಳಿದುಕೊಳ್ಳಲು ಕೆಲವು ಹಿಂಬಾಲಕರನ್ನು ನೇಮಿಸಿಕೊಂಡಿದ್ದರು’ ಎಂದು ದೂರಿನಲ್ಲಿರುವ ಮಾಹಿತಿಯನ್ನು ಎಫ್ಐಆರ್ ಉಲ್ಲೇಖಿಸಿದೆ.

ಯಾವ ಸೆಕ್ಷನ್ ಅಡಿ ಪ್ರಕರಣ

ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್‌) ಸೆಕ್ಷನ್‌ 109 (ಕೊಲೆ ಯತ್ನ), 190 (ಕಾನೂನು ಬಾಹಿರ ಚಟುವಟಿಕೆ), 329 (4) (ಅತಿಕ್ರಮ ಪ್ರವೇಶ), 61(2)ರ (ಕ್ರಿಮಿನಲ್‌ ಸಂಚು) ಅಡಿ ಪ್ರಕರಣ ದಾಖಲಿಸಲಾಗಿದೆ.

‘ತಂದೆಯ ಮೇಲಿನ ರಾಜಕೀಯ ದ್ವೇಷದಿಂದ ಸಂಚು’

‘ನನ್ನನ್ನು ಕೊಲೆ ಮಾಡಿಸಲು ಒಪ್ಪಂದ ಮಾಡಿಕೊಳ್ಳಲಾಗಿತ್ತು. ನನ್ನ ತಂದೆ ರಾಜಣ್ಣ ಮುಖ್ಯಮಂತ್ರಿಯವರ ಆಪ್ತ ಬೆಂಬಲಿಗರಾಗಿದ್ದಾರೆ. ಕೆಲವು ಪ್ರಬಲ, ಉನ್ನತ ರಾಜಕಾರಣಿಗಳು ತಂದೆ ಮೇಲೆ ರಾಜಕೀಯ ದ್ವೇಷ ಹೊಂದಿದ್ದಾರೆ. ಬೆದರಿಕೆ, ಕ್ರಿಮಿನಲ್ ಒಳ ಸಂಚು, ಆಮಿಷದ ಮಾರ್ಗಗಳ ಮೂಲಕ ರಾಜಕೀಯವಾಗಿ ಮುಗಿಸಲು ಸಂಚು ರೂಪಿಸಿದ್ದಾರೆ’ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

‘ಕಳೆದ ನವೆಂಬರ್ ತಿಂಗಳಲ್ಲಿ ಕ್ಯಾತ್ಸಂದ್ರ ಮನೆಯಲ್ಲಿ ಹಿರಿಯ ಮಗಳ ಜನ್ಮ ದಿನಾಚರಣೆ ಕಾರ್ಯಕ್ರಮವಿತ್ತು. ಈ ಸಂದರ್ಭದಲ್ಲಿ ಕೆಲವರು ನನ್ನನ್ನು ಹತ್ಯೆ ಮಾಡುವುದಕ್ಕಾಗಿ ಕಾರ್ಮಿಕರ ವೇಷದಲ್ಲಿ ಮನೆಗೆ ಬಂದಿದ್ದರು. ಆಗ ಹತ್ಯೆ ಮಾಡಲು ಸಾಧ್ಯವಾಗಿಲ್ಲ. ಇದಕ್ಕೆ ಪರ್ಯಾಯವಾಗಿ ಮುಂದಿನ ದಿನಗಳಲ್ಲಿ ಹತ್ಯೆ ಮಾಡಲು ಸಂಚು ರೂಪಿಸುವ ಸಲುವಾಗಿ ನನ್ನ ಕಾರಿಗೆ ಜಿಪಿಎಸ್ ಅಳವಡಿಸುವ ಪ್ರಯತ್ನವೂ ನಡೆದಿದೆ’ ಎಂದು ರಾಜೇಂದ್ರ ಅವರ ಹೇಳಿಕೆಯನ್ನು ಎಫ್ಐಆರ್ ಉಲ್ಲೇಖಿಸಲಾಗಿದೆ.

ರಾಜೇಂದ್ರಗೆ ಹೆಚ್ಚಿನ ಭದ್ರತೆ

ರಾಜೇಂದ್ರ ಅವರ ಮನೆ ಕ್ಯಾತ್ಸಂದ್ರ ಪೊಲೀಸ್ ಠಾಣೆ ವ್ಯಾಪ್ತಿಗೆ ಬರಲಿದ್ದು, ಪ್ರಕರಣ ದಾಖಲಾಗಿದೆ. ಅವರಿಗೆ ಈಗಾಗಲೇ ಭದ್ರತೆ ನೀಡಲಾಗಿದೆ. ಹೆಚ್ಚುವರಿ ಭದ್ರತೆಗೆ ಮನವಿ ಮಾಡಿದರೆ ಕ್ರಮ
ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.