ಎಚ್.ಎಸ್. ವೆಂಕಟೇಶಮೂರ್ತಿ
– ಪ್ರಜಾವಾಣಿ ಚಿತ್ರ
ಬೆಂಗಳೂರು: ಹಿರಿಯ ಸಾಹಿತಿ ಎಚ್.ಎಸ್. ವೆಂಕಟೇಶಮೂರ್ತಿಯವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ರಾಜಕೀಯ ನಾಯಕರು ಕಂಬನಿ ಮಿಡಿದಿದ್ದಾರೆ.
ಸಾಮಾಜಿಕ ಜಾಲತಾಣ ಪೋಸ್ಟ್ ಮೂಲಕ ಹಿರಿಯ ಕವಿಗೆ ಮುಖ್ಯಮಂತ್ರಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
‘ಹಿರಿಯ ಸಾಹಿತಿ ಹೆಚ್.ಎಸ್.ವೆಂಕಟೇಶ್ ಮೂರ್ತಿಯವರ ನಿಧನ ನೋವುಂಟುಮಾಡಿದೆ. ಕವಿತೆ, ನಾಟಕ, ಮಕ್ಕಳ ಸಾಹಿತ್ಯ, ಅನುವಾದ, ಪ್ರಬಂಧ, ಕಾದಂಬರಿ ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ತೊಡಗಿಸಿಕೊಂಡು, ಅಪಾರ ಓದುಗ ಬಳಗ ಹೊಂದಿದ್ದ ವಿಶಿಷ್ಟ ಬರಹಗಾರ ವೆಂಕಟೇಶ ಮೂರ್ತಿಯವರ ಅಗಲಿಕೆಯಿಂದ ಸಾರಸ್ವತ ಲೋಕ ಬಡವಾಗಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
‘ಕನ್ನಡದ ಸಾರಸ್ವತ ಲೋಕದ ಸುಪ್ರಸಿದ್ಧ ಕವಿಗಳಾದ ಶ್ರೀ ಹೆಚ್.ಎಸ್. ವೆಂಕಟೇಶಮೂರ್ತಿ ಅವರ ನಿಧನದ ವಾರ್ತೆ ಕೇಳಿ ಬಹಳ ದುಃಖವಾಯಿತು. ಗದ್ಯ, ಕಾವ್ಯ, ನಾಟಕ, ಚಿತ್ರಗೀತೆ ಸೇರಿ ಅಕ್ಷರ ಜಗತ್ತಿಗೆ ಅನೇಕ ಆಯಾಮಗಳಲ್ಲಿ ಕನ್ನಡಕ್ಕೆ ಚಿರಸ್ಮರಣೀಯ ಕೊಡುಗೆ ನೀಡಿರುವ ಹೆಚ್ಎಸ್‌ವಿ ಅವರ ಅಗಲಿಕೆ ಬಹುದೊಡ್ಡ ನಷ್ಟ. 'ಲೋಕದ ಕಣ್ಣಿಗೆ ರಾಧೆಯು ಕೂಡ ಎಲ್ಲರಂತೆ ಒಂದು ಹೆಣ್ಣು..' ದಂತಹ ಅನನ್ಯ ಭಾವಗೀತೆಯನ್ನು ರಚಿಸಿರುವ ಅವರನ್ನು ಮರೆಯಲು ಸಾಧ್ಯವೇ?’ ಎಂದು ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ನೆನಪಿಸಿಕೊಂಡಿದ್ದಾರೆ.
‘ಅಖಿಲ ಭಾರತ 85ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಕನ್ನಡದ ಪ್ರಖ್ಯಾತ ಹಿರಿಯ ಕವಿ, ಸಾಹಿತಿ ಡಾ.ಎಚ್.ಎಸ್.ವೆಂಕಟೇಶ ಮೂರ್ತಿ ನಿಧನ ಕನ್ನಡ ಸಾಹಿತ್ಯಲೋಕಕ್ಕೆ ತುಂಬಲಾರದ ನಷ್ಟ, ಅತ್ಯಂತ ನೋವಿನ ಸಂಗತಿ.ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ ವೆಂಕಟೇಶ ಮೂರ್ತಿ ಅವರ ಆತ್ಮಕ್ಕೆ ಚಿರಶಾಂತಿ ಲಭಿಸಲಿ.ಅವರ ಕುಟುಂಬಕ್ಕೆ, ಅಭಿಮಾನಿಗಳಿಗೆ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.