
ಬೆಂಗಳೂರು: ‘ಮಾನ್ಯತೆ ಹೊಂದಿದ ವೀಸಾ, ಪಾಸ್‌ಪೋರ್ಟ್ ಇಲ್ಲದೆ ಅಕ್ರಮವಾಗಿ ನೆಲೆಸಿರುವ ವಿದೇಶಿಯರಿಂದ ದೇಶದ ಭದ್ರತೆಗೆ ಅಪಾಯ ಕಾದಿದೆ’ ಎಂದು ಹೈಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸಿದೆ.
‘ನಮ್ಮನ್ನು ಅಕ್ರಮವಾಗಿ ಬಂಧನದಲ್ಲಿ ಇರಿಸಲಾಗಿದ್ದು ಬಿಡುಗಡೆ ಮಾಡಲು ನಿರ್ದೇಶಿಸಬೇಕು’ ಎಂದು ಕೋರಿ ನೈಜಿರಿಯಾದ (ಸದ್ಯ ಕೋಗಿಲು ಲೇ ಔಟ್ ವಿಳಾಸ) ಇಮೆಕಾ ಜೇಮ್ಸ್ ಐವೊಬಾ ಅಲಿಯಾಸ್ ಆಸ್ಟಿನ್ ನೊಸೊ ಐವೊಬಾ ಹಾಗೂ ವುಡೆರಿಕ್ ಫಿಡೆಲಿಸ್ ಎಂಬ ಇಬ್ಬರು ಸಲ್ಲಿಸಿದ್ದ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.
‘ಎಫ್‌ಆರ್‌ಆರ್‌ಒ ಕಚೇರಿಯಲ್ಲಿ ನೋಂದಣಿ ಮಾಡಿಸದೆ ಬೆಂಗಳೂರು ಮಹಾನಗರದಲ್ಲಿ ಸಾಕಷ್ಟು ವಿದೇಶಿ ಪ್ರಜೆಗಳು ಠಿಕಾಣಿ ಹೂಡಿದ್ದಾರೆ ಎಂದರೆ ಹೇಗೆ? ಇಂತಹುದನ್ನು ನಿಭಾಯಿಸುವಲ್ಲಿ ರಾಜ್ಯ ಸರ್ಕಾರ ಕರ್ತವ್ಯ ಲೋಪ ಎಸಗಿದಂತಲ್ಲವೇ’ ಎಂದು ಪ್ರಶ್ನಿಸಿತು.
‘ಮಾನ್ಯತೆ ಹೊಂದಿದ ವೀಸಾ ಇಲ್ಲದೆ ಅಥವಾ ವಿದೇಶಿಯರ ಪ್ರಾದೇಶಿಕ ನೋಂದಣಿ ಅಧಿಕಾರಿ ಕಚೇರಿಯಲ್ಲಿ ನೋಂದಣಿ ಮಾಡಿಸದೆ ಬೆಂಗಳೂರು ನಗರದಲ್ಲಿ ಅವಧಿ ಮೀರಿ ವಾಸಿಸುತ್ತಿರುವ ವಿದೇಶಿ ಪ್ರಜೆಗಳನ್ನು ಪತ್ತೆಹಚ್ಚಲು ಕೈಗೊಂಡಿರುವ ಅಗತ್ಯ ಕ್ರಮಗಳನ್ನು ಮುಂದಿನ ವಿಚಾರಣೆಯಲ್ಲಿ ಹಾಜರುಪಡಿಸಿ’ ಎಂದು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿತು.
ಶಾಂತಿಭೂಷಣ್ ಹೇಳಿದ್ದು: ನ್ಯಾಯಾಲಯದ ನಿರ್ದೇಶನದಂತೆ ಪ್ರಕರಣದಲ್ಲಿ ಸೇರ್ಪಡೆಯಾಗಿರುವ ‘ಕೇಂದ್ರದ ವಿದೇಶಿಯರ ಪ್ರಾದೇಶಿಕ ನೋಂದಣಿ ಅಧಿಕಾರಿ’ (ಎಫ್‌ಆರ್‌ಆರ್‌ಒ) ಪರ ಹಾಜರಾಗಿದ್ದ, ಡೆಪ್ಯುಟಿ ಸಾಲಿಸಿಟರ್ ಜನರಲ್ ಎಚ್.ಶಾಂತಿಭೂಷಣ್, ‘ಅರ್ಜಿದಾರರು 2015 ರಲ್ಲಿ ಭಾರತಕ್ಕೆ ವ್ಯಾಪಾರ ವೀಸಾದಲ್ಲಿ ಬಂದಿದ್ದಾರೆ ಮತ್ತು ವಿಭಿನ್ನ ವೀಸಾಗಳಲ್ಲಿ ಉಳಿದುಕೊಂಡಿದ್ದಾರೆ. ಇಮೆಕಾ ಜೇಮ್ಸ್, ಸೋಗು ಹಾಕಿಕೊಂಡು ಮತ್ತೊಬ್ಬರ ಹೆಸರಿನಲ್ಲಿ ಅನುಮತಿಸಲಾದ ವೀಸಾ ಹೊಂದಿ ಗಡುವನ್ನು ಮೀರಿ ನಗರದಲ್ಲಿ ಉಳಿದುಕೊಂಡಿದ್ದಾರೆ’ ಎಂದು ನ್ಯಾಯಪೀಠಕ್ಕೆ ವಿವರ ಸಲ್ಲಿಸಿದರು.
ಅಷ್ಟಕ್ಕೂ, ‘ಅರ್ಜಿದಾರರ ವಿರುದ್ಧ ಈಗಾಗಲೇ ಮಾದಕ ದ್ರವ್ಯ ನಿಗ್ರಹ ಕಾಯ್ದೆ–1985ರ (ಎನ್‌ಡಿಪಿಎಸ್) ಅಡಿಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ. ಇಬ್ಬರ ವಿರುದ್ಧ 400 ಗ್ರಾಂ ಎಂಡಿಎಂಎ ಮತ್ತು ಕೊಕೇನ್ ಮಾರಾಟ ಮಾಡಿದ ಆರೋಪವಿದೆ. ಆದರೆ, ಅವರು ಭಾರತದ ಸಂವಿಧಾನದ ಅಡಿಯಲ್ಲಿ ನೈಜೀರಿಯನ್ ಪ್ರಜೆಗಳಾಗಿ ನಮ್ಮ ಹಕ್ಕನ್ನು ಉಲ್ಲಂಘಿಸಿಲಾಗಿದೆ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ’ ಎಂದರು.
‘ಅರ್ಜಿದಾರರು ಮಾತ್ರವಲ್ಲದೆ ಇನ್ನೂ ಸಾಕಷ್ಟು ವಿದೇಶಿಯರು ಅಧಿಕೃತ ವೀಸಾ ಇಲ್ಲದೆ ನಗರದಲ್ಲಿ ಉಳಿದುಕೊಂಡಿದ್ದಾರೆ ಮತ್ತು ತನಿಖೆಗೆ ಅಗತ್ಯವಿರುವ ಅವಧಿಯನ್ನು ಮೀರಿದ್ದಾರೆ. ಪ್ರಮಾಣಿತ ಕಾರ್ಯಾಚರಣೆ ವಿಧಾನದ (ಎಸ್‌ಒಪಿ) ನಿಯಮಗಳ ಪ್ರಕಾರ, ದೇಶದೊಳಗೆ ಪ್ರವೇಶಿಸುವ ವಿದೇಶಿ ಪ್ರಜೆ 14 ದಿನಗಳ ಒಳಗಾಗಿ ಎಫ್‌ಆರ್‌ಆರ್‌ಒ ಕಚೇರಿಯಲ್ಲಿ ನೋಂದಾಯಿಸಿಕೊಳ್ಳಬೇಕು. ಆದರೆ, ಈ ಅರ್ಜಿದಾರರು ಇವತ್ತಿಗೂ ತಮ್ಮನ್ನು ಕಚೇರಿಯಲ್ಲಿ ನೋಂದಣಿ ಮಾಡಿಸಿಕೊಂಡಿಲ್ಲ. ಎಫ್ಆರ್‌ಆರ್‌ಒ ನೋಂದಣಿ ಇಲ್ಲದೆ ನಗರದಲ್ಲಿ ಉಳಿದುಕೊಂಡಿರುವ ಈ ವಿದೇಶಿ ಪ್ರಜೆಗಳನ್ನು ನಿಭಾಯಿಸುವಲ್ಲಿ ರಾಜ್ಯದ ಕಡೆಯಿಂದಲೂ ಕರ್ತವ್ಯ ಲೋಪವಾಗಿದೆ’ ಎಂದರು.
22ನೇ ವಿಧಿಯ ಪರಾಮರ್ಶೆ
‘ಸುಪ್ರಿಂ ಕೋರ್ಟ್ ಗಮನಿಸಿರುವಂತೆ ಅರ್ಜಿದಾರರು, ಭಾರತದ ಸಂವಿಧಾನದ 22ನೇ ವಿಧಿಯ ಅಡಿಯಲ್ಲಿ ರಕ್ಷಣೆ ಪಡೆಯಲು ಅರ್ಹರು ಹೌದೇ ಅಲ್ಲವೇ ಎಂಬುದು ಜಿಜ್ಞಾಸೆಯ ಸಂಗತಿಯಾಗಿದ್ದು ಈ ಕುರಿತಾಗಿ ನ್ಯಾಯಾಲಯ ಸೂಕ್ತ ಉತ್ತರ ನೀಡುವ ಅಗತ್ಯವಿದೆ’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
‘ಯಾವುದೇ ವಿದೇಶಿ ವ್ಯಕ್ತಿಯು ಮಾನ್ಯತೆ ಹೊಂದಿದ ವೀಸಾ ಇಲ್ಲದೆ ಅಥವಾ ಎಫ್‌ಆರ್‌ಆರ್‌ಒ ಕಚೇರಿಯಲ್ಲಿ ನೋಂದಾಯಿಸದೆ ಅವಧಿ ಮೀರಿ ತಂಗಿದ್ದರೆ ಮತ್ತು ಕ್ರಿಮಿನಲ್ ಮೊಕದ್ದಮೆಗಳಲ್ಲಿ ದಾಖಲಾಗಿರುವ ವಿದೇಶಿ ಪ್ರಜೆಗಳು ಸಂವಿಧಾನದ 22ನೇ ವಿಧಿಯ ಅಡಿಯಲ್ಲಿ ಬಂಧನಕ್ಕೆ ಸಂಬಂಧಿಸಿದಂತೆ ರಕ್ಷಣೆ ಪಡೆಯಬಹುದೇ ಎಂಬುದನ್ನು ಪರಾಮರ್ಶಿಸಿ ಸೂಕ್ತ ಆದೇಶ ಹೊರಡಿಸಲಾಗುವುದು’ ಎಂದು ತಿಳಿಸಿದ ನ್ಯಾಯಪೀಠ ವಿಚಾರಣೆಯನ್ನು ಇದೇ 5ಕ್ಕೆ ಮುಂದೂಡಿತು.
22ನೇ ವಿಧಿ ಏನನ್ನು ಹೇಳುತ್ತದೆ?
ಭಾರತೀಯ ಸಂವಿಧಾನದ 22ನೇ ವಿಧಿ; ಬಂಧನ ಮತ್ತು ಬಂಧನವನ್ನು ತಡೆಗಟ್ಟುವ ಸಂದರ್ಭಗಳಲ್ಲಿ ವ್ಯಕ್ತಿಗಳಿಗೆ ರಕ್ಷಣೆ ನೀಡುತ್ತದೆ. ಇದು ಬಂಧನದ ಕಾರಣಗಳನ್ನು ತಿಳಿಯುವ ಹಕ್ಕು, ವಕೀಲರನ್ನು ನೇಮಿಸಿಕೊಳ್ಳುವ ಹಕ್ಕು (22(1)) ಮತ್ತು 24 ಗಂಟೆಗಳ ಒಳಗಾಗಿ ಬಂಧಿಸಿದ ವ್ಯಕ್ತಿಯನ್ನು ಸ್ಥಳೀಯ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸುವ ಹಕ್ಕನ್ನು (22(2)) ಖಾತರಿಪಡಿಸುತ್ತದೆ. ಇದು ಶೋಷಣೆಯ ವಿರುದ್ಧದ ಹಕ್ಕಿನ ಭಾಗವೂ ಆಗಿದೆ.
ವಿದೇಶಗಳಿಂದ ಬರುವವರು ಎಫ್‌ಆರ್‌ಆರ್‌ಒ ಕಚೇರಿಯಲ್ಲಿ ನೋಂದಣಿ ಮಾಡಿಕೊಳ್ಳದೇ ಇರುವ ಬಗ್ಗೆ ರಾಜ್ಯ ಸರ್ಕಾರ ದಿಗ್ಭ್ರಮೆಗೊಳಿಸುವಷ್ಟು ಮೌನ ಪ್ರದರ್ಶಿಸುತ್ತಿರುವುದು ಸೋಜಿಗದ ವಿಚಾರ.ನ್ಯಾ.ಎಂ.ನಾಗಪ್ರಸನ್ನ
* ಬೆಂಗಳೂರಿಗೆ 5 ವರ್ಷದಲ್ಲಿ 20 ದೇಶದ ಪ್ರಜೆಗಳ ಆಗಮನ
* ಕೆಐಎಗೆ ಬಂದಿಳಿದ ವಿದೇಶಿಯರ ಸಂಖ್ಯೆ 25 ಲಕ್ಷಕ್ಕೂ ಹೆಚ್ಚು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.