ADVERTISEMENT

ಅಕ್ರಮ ಗಣಿಗಾರಿಕೆ | ಜನಾರ್ದನ ರೆಡ್ಡಿ ಅಪರಾಧಿ; 7 ವರ್ಷ ಜೈಲು: CBI ಕೋರ್ಟ್ ಆದೇಶ

​ಪ್ರಜಾವಾಣಿ ವಾರ್ತೆ
Published 6 ಮೇ 2025, 10:51 IST
Last Updated 6 ಮೇ 2025, 10:51 IST
ಗಾಲಿ ಜನಾರ್ದನ ರೆಡ್ಡಿ
ಗಾಲಿ ಜನಾರ್ದನ ರೆಡ್ಡಿ   

ನವದೆಹಲಿ: ಕರ್ನಾಟಕ– ಆಂಧ್ರಪ್ರದೇಶ ಅಂತರರಾಜ್ಯ ಗಡಿ ಭಾಗದಲ್ಲಿ ಅಕ್ರಮ ಗಣಿಗಾರಿಕೆ ನಡೆಸಿ ಸರ್ಕಾರದ ಬೊಕ್ಕಸಕ್ಕೆ ₹884 ಕೋಟಿ ನಷ್ಟ ಉಂಟು ಮಾಡಿರುವ ಪ್ರಕರಣದಲ್ಲಿ ಗಂಗಾವತಿ ಶಾಸಕ ಜಿ.ಜನಾರ್ದನ ರೆಡ್ಡಿ ಹಾಗೂ ಇತರ ಮೂವರನ್ನು ಹೈದರಾಬಾದ್‌ನ ಸಿಬಿಐ ವಿಶೇಷ ನ್ಯಾಯಾಲಯವು ದೋಷಿಗಳೆಂದು ಮಂಗಳವಾರ ತೀರ್ಪು ನೀಡಿದೆ. 

ನ್ಯಾಯಾಲಯವು ಅಪರಾಧಿಗಳಿಗೆ ಏಳು ವರ್ಷಗಳ ಜೈಲು ಶಿಕ್ಷೆ ಮತ್ತು ತಲಾ ₹10,000 ದಂಡ ವಿಧಿಸಿದೆ. ರೆಡ್ಡಿ ಅವರು ಎರಡನೇ ಅಪರಾಧಿಯಾಗಿದ್ದಾರೆ. ನ್ಯಾಯಾಲಯವು ಜನಾರ್ದನ ರೆಡ್ಡಿ ಒಡೆತನದ ಓಬಳಾಪುರಂ ಮೈನಿಂಗ್‌ ಕಂಪನಿಗೆ (ಒಎಂಸಿ) ₹1 ಲಕ್ಷ ದಂಡ ವಿಧಿಸಿದೆ. ತೀರ್ಪಿನ ನಂತರ ರೆಡ್ಡಿ ಮತ್ತು ಇತರರನ್ನು ಸಿಬಿಐ ವಶಕ್ಕೆ ಪಡೆಯಿತು. ಸುಮಾರು 14 ವರ್ಷಗಳ ಸುದೀರ್ಘ ವಿಚಾರಣೆಯ ಬಳಿಕ ಪ್ರಧಾನ ವಿಶೇಷ ನ್ಯಾಯಾಧೀಶ ಟಿ.ರಘುರಾಮ್ ತೀರ್ಪು ಪ್ರಕಟಿಸಿದರು. 

ಕರ್ನಾಟಕ-ಆಂಧ್ರಪ್ರದೇಶದ ಗಡಿಯಲ್ಲಿರುವ ಬಳ್ಳಾರಿ ಮೀಸಲು ಅರಣ್ಯ ಪ್ರದೇಶದಲ್ಲಿ ಅಂತರರಾಜ್ಯ ಗಡಿ ಗುರುತುಗಳನ್ನು ನಾಶ ಮಾಡಿ ವ್ಯಾಪಕ ಪ್ರಮಾಣದಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಸಿದ್ದಾರೆ ಎಂದು ಆರೋಪಿಸಿ ರೆಡ್ಡಿ ಮತ್ತು ಇತರರ ವಿರುದ್ಧ ಸಿಬಿಐ 2011ರಲ್ಲಿ ಆರೋಪಪಟ್ಟಿ ಸಲ್ಲಿಸಿತ್ತು. 

ADVERTISEMENT

2007 ಮತ್ತು 2009ರ ನಡುವೆ ನಡೆದ ಅಕ್ರಮ ಗಣಿಗಾರಿಕೆಯಿಂದ ಸರ್ಕಾರದ ಬೊಕ್ಕಸಕ್ಕೆ ₹884 ಕೋಟಿ ನಷ್ಟವಾಗಿದೆ ಎಂದು ಸಿಬಿಐ ಪರ ವಕೀಲರು ವಾದಿಸಿದ್ದರು. 

ಆರೋಪಿಗಳ ವಿರುದ್ಧ ಸಿಬಿಐ 2009ರ ಡಿಸೆಂಬರ್‌ 8ರಂದು ಪ್ರಕರಣ ದಾಖಲಿಸಿತ್ತು. ಮೊದಲ ಆರೋಪಪಟ್ಟಿಯನ್ನು 2011ರ ಡಿಸೆಂಬರ್‌ 3ರಂದು ಸಲ್ಲಿಸಿತ್ತು. ನಂತರ ಗಣಿ ಕಂಪನಿಯ ನಿರ್ದೇಶಕರೂ ಆಗಿರುವ ರೆಡ್ಡಿ, ಶ್ರೀನಿವಾಸ್ ರೆಡ್ಡಿ, ರಾಜಗೋಪಾಲ್, ದಿವಂಗತ ಆರ್. ಲಿಂಗಾ ರೆಡ್ಡಿ ಮತ್ತು ಒಎಂಸಿ ವಿರುದ್ಧದ ಪ್ರಕರಣದಲ್ಲಿ ಮೂರು ಪೂರಕ ಆರೋಪಪಟ್ಟಿಗಳನ್ನು ಸಲ್ಲಿಸಿತ್ತು.

ನ್ಯಾಯಾಲಯವು 219 ಸಾಕ್ಷಿಗಳ ವಿಚಾರಣೆ ನಡೆಸಿತ್ತು. ಅಕ್ರಮ ನಡೆದಿರುವುದಕ್ಕೆ ಸಾಕ್ಷಿಯಾಗಿ 3,336 ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.