ADVERTISEMENT

ಇಂದಿರಾ, ವಲ್ಲಭಭಾಯಿ ನಡೆಯೇ ದಾರಿದೀಪ: ಸಿ.ಎಂ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2025, 22:20 IST
Last Updated 31 ಅಕ್ಟೋಬರ್ 2025, 22:20 IST
ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಮಾತನಾಡಿದರು
ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಮಾತನಾಡಿದರು   

ಬೆಂಗಳೂರು: ‘ದಿವಂಗತ ಪ್ರಧಾನಿ ಇಂದಿರಾ ಗಾಂಧಿ ಹುತಾತ್ಮರಾದರೂ ಅವರ ಆದರ್ಶಗಳನ್ನು ಬಿಟ್ಟು ಹೋಗಿದ್ದಾರೆ. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದವರಲ್ಲಿ ವಲ್ಲಭಭಾಯಿ ಪಟೇಲರು ಅಗ್ರಗಣ್ಯರು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಣ್ಣಿಸಿದರು.

ಕಾಂಗ್ರೆಸ್‌ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಇಂದಿರಾ ಗಾಂಧಿಯವರ ಪುಣ್ಯಸ್ಮರಣೆ ಹಾಗೂ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅವರ 150ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಇಂದಿರಾ ಗಾಂಧಿಯವರು ದಿಟ್ಟ ಮಹಿಳೆ, ಉಕ್ಕಿನ ಮಹಿಳೆ. ಬಾಂಗ್ಲಾದೇಶದ ವಿಮೋಚನಾ ಯುದ್ಧದಲ್ಲಿ ಪಾಕಿಸ್ತಾನವನ್ನು ಸದೆಬಡಿದಿದ್ದರು. ಪಾಕಿಸ್ತಾನದ ಸುಮಾರು 90 ಸಾವಿರ ಸೈನಿಕರು ಸೆರೆಯಾಗಿದ್ದರು’ ಎಂದರು.

ADVERTISEMENT

‘ವಲ್ಲಭಭಾಯಿ ಪಟೇಲರು ದೇಶದ ಉಪ ಪ್ರಧಾನಿಯಾಗಿದ್ದರು. ದೇಶದಲ್ಲಿದ್ದ 562 ಸಂಸ್ಥಾನಗಳನ್ನು ಭಾರತಕ್ಕೆ ಸೇರಿಸಲು ಅವರ ಪ್ರಯತ್ನವೇ ಕಾರಣ. ಅದಕ್ಕಾಗಿಯೇ ಅವರನ್ನು ಉಕ್ಕಿನ ಮನುಷ್ಯ ಎಂದು ಕರೆಯುತ್ತೇವೆ’ ಎಂದು ಸ್ಮರಿಸಿದರು. 

ಸಚಿವ ಎಚ್.ಸಿ.ಮಹದೇವಪ್ಪ, ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ. ಚಂದ್ರಶೇಖರ್‌, ವಿಧಾನ ಪರಿಷತ್ತಿನ ಮುಖ್ಯ ಸಚೇತಕ ಸಲೀಂ ಅಹಮದ್‌, ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ. ರೇವಣ್ಣ, ಮಾಜಿ ಸಂಸದ ಬಿ.ಎನ್‌. ಚಂದ್ರಪ್ಪ, ಎಐಸಿಸಿ ಕಾರ್ಯದರ್ಶಿ ಬಿ.ಎಂ. ಸಂದೀಪ್‌, ಕೆಪಿಸಿಸಿ ಅಧ್ಯಕ್ಷರ ರಾಜಕೀಯ ಕಾರ್ಯದರ್ಶಿ ದೀಪಕ್‌ ತಿಮ್ಮಯ ಉಪಸ್ಥಿತರಿದ್ದರು.

‘ಬಡಜನರ ಉಸಿರು ಇಂದಿರಾ ಹೆಸರು’

‘ಇಂದಿರಾಗಾಂಧಿ ಅವರ ಹೆಸರು ಈ ದೇಶದ ಬಡ ಜನರ ಉಸಿರು. ಇಂದಿರಾಗಾಂಧಿ ಅವರು ಈ ದೇಶದ ಏಕತೆ, ಸಮಗ್ರತೆ ಮತ್ತು ಶಾಂತಿಗೆ ದೊಡ್ಡ ಕೊಡುಗೆ ನೀಡಿ ಹುತಾತ್ಮರಾದವರು. ಅವರು ಪ್ರಧಾನಿಯಾದ್ದಾಗ ಈ ದೇಶಕ್ಕೆ ನೀಡಿದ ಕಾರ್ಯಕ್ರಮಗಳು ಇಂದಿಗೂ ಜೀವಂತವಾಗಿವೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹೇಳಿದರು.

ಜೆ.ಪಿ. ನಗರದ ಸಾರಕ್ಕಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಶಿವಕುಮಾರ್ ಮಾತನಾಡಿದರು.

ಇಂದಿರಾ ಗಾಂಧಿ ಅವರು ಬಡತನ ನಿವಾರಣೆಗೆ ದಿಟ್ಟ ‌ನಿರ್ಧಾರ ತೆಗೆದುಕೊಂಡರು. ಇಂದಿರಾಗಾಂಧಿಯವರ ಉಳುವವನೇ ಭೂಮಿಯ ಒಡೆಯ ಯೋಜನೆಯನ್ನು ರಾಜ್ಯದಲ್ಲಿ ದೇವರಾಜ ಅರಸು ಅವರು ಜಾರಿಗೆ ತಂದು ಬಡವರಿಗೆ ಭೂಮಿ ಹಂಚಿದರು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.