ADVERTISEMENT

ಈಶ್ವರ ದೇಗುಲದ ಅರ್ಚಕರ ಮನೆ ಮೇಲೆ ಐಟಿ ದಾಳಿ?

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2019, 19:20 IST
Last Updated 12 ಏಪ್ರಿಲ್ 2019, 19:20 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹಾಸನ: ಹೊಳೆನರಸೀಪುರ ತಾಲ್ಲೂಕಿನ ಹರದನಹಳ್ಳಿ ಈಶ್ವರ ದೇಗುಲದ ಅರ್ಚಕ ಪ್ರಕಾಶ್ ಭಟ್ ಅವರ ಮನೆ ಮೇಲೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಶುಕ್ರವಾರ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.

ಮಧ್ಯಾಹ್ನ 12 ಗಂಟೆಗೆ ಎರಡು ವಾಹನಗಳಲ್ಲಿ ಬಂದ ಆರು ಅಧಿಕಾರಿಗಳ ತಂಡ, ಮೊದಲು ಅರ್ಚಕರ ಮನೆಯಲ್ಲಿ ದಾಖಲೆ ಪರಿಶೀಲನೆ ನಡೆಸಿತು. ಅಲ್ಲಿ ಯಾವುದೇ ದಾಖಲೆ, ಹಣ ಪತ್ತೆಯಾಗಲಿಲ್ಲ. ನಂತರ ಅಲ್ಲಿಂದ ದೇವಾಲಯ ಪ್ರಾಂಗಣಕ್ಕೆ ಬಂದು ಶೋಧ ನಡೆಸಿತು. ಅಲ್ಲೂ ಏನು ಸಿಗದೆ, ಬರಿಗೈಲಿ ವಾಪಸ್ ಆದರು. ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಕುಟುಂಬದಕುಲದೇವರು ಹರದನಹಳ್ಳಿ
ಈಶ್ವರ. ಚುನಾವಣೆಗೆ ಮುನ್ನ ಹಾಗೂ ಇತರ ಶುಭ ಕಾರ್ಯ ಆರಂಭಿಸುವ ಮೊದಲು ಗೌಡರ ಕುಟುಂಬದವರು ಈಶ್ವರನಿಗೆ ಪೂಜೆ ಸಲ್ಲಿಸುತ್ತಾರೆ. ಹಾಗಾಗಿ ದೇಗುಲ ಹಾಗೂ ಅರ್ಚಕರ ಮನೆಯಲ್ಲಿ ಚುನಾವಣೆಗೆ ಹಂಚಲು ಹಣ ಇಟ್ಟಿರಬಹುದು ಎಂಬ ಅನುಮಾನದ ಮೇಲೆ ದಾಳಿ ನಡೆಸಲಾಗಿದೆ ಎನ್ನಲಾಗಿದೆ.

‘ಮೋದಿಗೆ ಶಿವನ ಶಾಪ ತಟ್ಟುತ್ತದೆ’
ಕುಣಿಗಲ್:
ಹರದನಹಳ್ಳಿಯಲ್ಲಿ ಎಚ್.ಡಿ.ದೇವೇಗೌಡರು ಪೂಜಿಸಿಕೊಂಡು ಬಂದ ಶಿವಾಲಯದ ಗರ್ಭಗುಡಿ, ಆ ದೇವಸ್ಥಾನದ ಅರ್ಚಕರ ಮನೆ ಮೇಲೆ ಆದಾಯ ತೆರಿಗೆ ಅಧಿಕಾರಿಗಳ ತಂಡ ಶುಕ್ರವಾರ ದಾಳಿ ನಡೆಸಿದ್ದು, ಆದಾಯ ತೆರಿಗೆ ಇಲಾಖೆ ದುರುಪಯೋಗಪಡಿಸಿಕೊಳ್ಳುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆ ಶಿವನ ಶಾಪ ತಟ್ಟಲಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದರು.

ADVERTISEMENT

ಪಟ್ಟಣದಲ್ಲಿ ನಡೆದ ಜೆಡಿಎಸ್– ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿ, ‘ಶಿವನ ಶಾಪ ತಟ್ಟಿಯೇ ತಟ್ಟುತ್ತದೆ. ಮತ್ತೆ ನರೇಂದ್ರ ಮೋದಿ, ಬಿಜೆಪಿ ಪಕ್ಷದ ದೇಶದಲ್ಲಿ ಅಧಿಕಾರಕ್ಕೆ ಬರೋಲ್ಲ’ ಎಂದು ಹೇಳಿದರು.

ಶಿವನ ದೇವಾಲಯದಲ್ಲಿ ದೇವೇಗೌಡರ ಕುಟುಂಬ ಹಣ ಇಟ್ಟಿದ್ದಾರೆನೋ ಎಂದು ಐ.ಟಿ ಅಧಿಕಾರಿಗಳ ತಂಡವು ಹುಂಡಿ ಪರಿಶೀಲನೆ ಮಾಡಿದೆ. ಅದರಲ್ಲಿ ಏನೂ ಸಿಕ್ಕಿಲ್ಲ ಎಂದು ತಿಳಿಸಿದರು.

‘ದಾಳಿ ನಡೆದಿಲ್ಲ’
ಅರ್ಚಕ ಪ್ರಕಾಶ್ ಭಟ್ ಅವರ ಮನೆ ಮೇಲೆ ದಾಳಿ ನಡೆಸಿಲ್ಲ ಎಂದು ಆದಾಯ ತೆರಿಗೆ ಇಲಾಖೆ ಸ್ಪಷ್ಟನೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.