ADVERTISEMENT

ಮಂಡ್ಯದ ಮನೆಮಗಳು ಯಾರು?: ಸುಮಲತಾರನ್ನು ಮತ್ತೆ ಕೆಣಕಿದ ಜೆಡಿಎಸ್

ಫೇಸ್‌ಬುಕ್‌ ಪುಟದಲ್ಲಿ ಚರ್ಚೆ: ಮುನ್ನಲೆಗೆ ಬಂದ ಲಕ್ಷ್ಮೀ ಅಶ್ವಿನ್‌ಗೌಡ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2019, 16:32 IST
Last Updated 5 ಫೆಬ್ರುವರಿ 2019, 16:32 IST
   

ಮಂಡ್ಯ: ‘ಮಂಡ್ಯ ಗೌಡ್ತಿ’ ಹೇಳಿಕೆ ವಿಚಾರ ರಾಜ್ಯದಾದ್ಯಂತ ಸದ್ದು ಮಾಡುತ್ತಿರುವಾಗ ಜೆಡಿಎಸ್‌ ಪಕ್ಷ ಸುಮಲತಾ ಅವರನ್ನು ಮತ್ತೊಮ್ಮೆ ಕೆಣಕಿದೆ. ಲಕ್ಷ್ಮಿಅಶ್ವಿನ್‌ಗೌಡ ಅವರನ್ನು ಚರ್ಚೆಯ ಅಂಗಳಕ್ಕೆ ಕರೆತಂದಿರುವ ಜೆಡಿಎಸ್‌, ಫೇಸ್‌ಬುಕ್‌ ಪುಟದಲ್ಲಿ ಸುಮಲತಾ ಹಾಗೂ ಲಕ್ಷ್ಮಿ ಚಿತ್ರ ಹಾಕಿ ‘ನಿಜವಾದ ಮಂಡ್ಯದ ಮನೆಮಗಳು ಯಾರು’ ಎಂದುಪ್ರಶ್ನಿಸಿದ್ದಾರೆ.

ವಿಧಾನ ಪರಿಷತ್‌ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ‘ಸುಮಲತಾ ಮಂಡ್ಯ ಗೌಡ್ತಿ ಅಲ್ಲ, ಆಂಧ್ರ ಗೌಡ್ತಿ’ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಅಂಬರೀಷ್‌ ಪತ್ನಿಯ ಮೂಲ ಹಾಗೂ ಜಾತಿ ಕೆಣಕಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದರು. ಇದಕ್ಕೆ ರಾಜ್ಯದಾದ್ಯಂತ ವಿರೋಧ ವ್ಯಕ್ತವಾಗಿತ್ತು. ಅವರ ಹೇಳಿಕೆಗೆ ಅಂಬರೀಷ್‌ ಅಭಿಮಾನಿಗಳು ತಿರುಗೇಟು ನೀಡಿದ್ದರು.

ಕಳೆದ ಲೋಕಸಭಾ ಉಪಚುನಾವಣೆಯಲ್ಲಿ ಜೆಡಿಎಸ್‌ ಟಿಕೆಟ್‌ ವಂಚಿತರಾಗಿ ಪಕ್ಷದ ಚಟುವಟಿಕೆಗಳಿಂದ ದೂರವೇ ಉಳಿದಿದ್ದ ಲಕ್ಷ್ಮಿ ಅಶ್ವಿನ್‌ಗೌಡ ಅವರನ್ನು ಜೆಡಿಎಸ್‌ ಮುಖಂಡರು ಈಗ ಕರೆತಂದಿದ್ದಾರೆ. ಜೆಡಿಎಸ್‌ ಫೇಸ್‌ಬುಕ್‌ ಪುಟದಲ್ಲಿ ಸುಮಲತಾ ಹಾಗೂ ಲಕ್ಷ್ಮಿ ಅಶ್ವಿನ್‌ಗೌಡ ಚಿತ್ರಗಳು ಚರ್ಚೆಗೆ ದಾರಿಮಾಡಿಕೊಟ್ಟಿದೆ. ಸಾವಿರಾರು ಜನರು ಇದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಪರ ವಿರೋಧ ಚರ್ಚೆಗಳು ನಡೆದಿವೆ.

ADVERTISEMENT

ಮುತ್ತಿಗೆ ಯತ್ನ: ಕೆ.ಟಿ.ಶ್ರೀಕಂಠೇಗೌಡ ಹೇಳಿಕೆ ಖಂಡಿಸಿ ಸುಭಾಷ್‌ ನಗರದಲ್ಲಿರುವ ಅವರ ಮನೆಗೆ ಅಂಬರೀಷ್‌ ಅಭಿಮಾನಿಗಳ ಸಂಘದ ಸದಸ್ಯರು ಮುತ್ತಿಗೆ ಹಾಕಲು ಯತ್ನಿಸಿದರು. ಮುನ್ನೆಚ್ಚರಿಕೆಯಾಗಿ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದರು. ಮನೆ ಎದುರು ಅಭಿಮಾನಿಗಳು ಘೋಷಣೆ ಕೂಗಿದರು.

ಶ್ರೀಕಂಠೇಗೌಡ ಮಹಿಳೆ ಬಗ್ಗೆ ಅಗೌರವದಿಂದ ಮಾತನಾಡಿದ್ದಾರೆ. ಬಕೆಟ್ ರಾಜಕಾರಣ ಮಾಡುತ್ತಿದ್ದು, ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ಅಂಬರೀಷ್‌ ಕುಟುಂಬ ಸದಸ್ಯರ ಬಗ್ಗೆ ಮಾತನಾಡುವ ಅರ್ಹತೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಗೌರವ ತೋರಿಲ್ಲ: ಈ ನಡುವೆ ಪ್ರತಿಕ್ರಿಯೆ ನೀಡಿರುವ ಶ್ರೀಕಂಠೇಗೌಡ, ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಮಂಡ್ಯ ಗೌಡ್ತಿ’ ಕಾರ್ಯಕ್ರಮದ ಬಗ್ಗೆ ಮಾತನಾಡಿದ್ದೇನೆ. ಸುಮಲತಾ ಅವರಿಗೆ ಅಗೌರವ ತರುವ ರೀತಿಯಲ್ಲಿ ಮಾತನಾಡಿಲ್ಲ. ಅಂಬರೀಷ್‌ ಮೇಲೆ ನಮಗೆ ಅಗಾಧ ಅಭಿಮಾನವಿದೆ. ಅವರು ಮೃತಪಟ್ಟಾಗ ನಾವು ನಡೆದುಕೊಂಡ ರೀತಿ ಇಡೀ ರಾಜ್ಯಕ್ಕೆ ಗೊತ್ತಿದೆ. ಸುಮಲತಾ ಸ್ಪರ್ಧೆಗೆ ನಮ್ಮ ಯಾವುದೇ ವಿರೋಧವಿಲ್ಲ ಸ್ಪಷ್ಟನೆ ನೀಡಿದ್ದಾರೆ.

ಬೇಳೂರು ಶ್ರೀಕಂಠೇಗೌಡರ ಹೇಳಿಕೆಗೆ ರಾಜ್ಯದಾದ್ಯಂತ ವಿರೋಧ ವ್ಯಕ್ತವಾಗಿತ್ತು. ಅವರ ಹೇಳಿಕೆಗೆ ಅಂಬರೀಷ್‌ ಅಭಿಮಾನಿಗಳು ತಿರುಗೇಟು ನೀಡಿದ್ದರು.ಮಂಗಳವಾರ ಅಭಿಮಾನಿಗಳು ಶ್ರೀಕಂಠೇಗೌಡರ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದರು.

ಕಳೆದ ಲೋಕಸಭಾ ಉಪ ಚುನಾವಣೆಯಲ್ಲಿ ಜೆಡಿಎಸ್‌ ಟಿಕೆಟ್‌ ವಂಚಿತರಾಗಿ ಪಕ್ಷದ ಚಟುವಟಿಕೆಗಳಿಂದ ದೂರವೇ ಉಳಿದಿದ್ದ ಲಕ್ಷ್ಮೀ ಅಶ್ವಿನ್‌ಗೌಡ ಅವರನ್ನು ಜೆಡಿಎಸ್‌ ಮುಖಂಡರು ಈಗ ಕರೆತಂದಿದ್ದಾರೆ. ಜೆಡಿಎಸ್‌ ಫೇಸ್‌ಬುಕ್‌ ಪುಟದಲ್ಲಿ ಸುಮಲತಾ ಹಾಗೂ ಲಕ್ಷ್ಮೀ ಅಶ್ವಿನ್‌ಗೌಡ ಚಿತ್ರಗಳು ಚರ್ಚೆಗೆ ದಾರಿಮಾಡಿಕೊಟ್ಟಿವೆ. ಸಾವಿರಾರು ಜನರು ಇದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಪರ ವಿರೋಧ ಚರ್ಚೆ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.