ADVERTISEMENT

ಜಿ.ಪಂ, ತಾ.ಪಂ ಚುನಾವಣೆಗಳಲ್ಲಿ ಬಿಜೆಪಿ ಜತೆ ಹೊಂದಾಣಿಕೆ ಕಷ್ಟ: ದೇವೇಗೌಡ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2025, 14:51 IST
Last Updated 26 ಡಿಸೆಂಬರ್ 2025, 14:51 IST
ಎಚ್‌.ಡಿ.ದೇವೇಗೌಡ
ಎಚ್‌.ಡಿ.ದೇವೇಗೌಡ   

ಬೆಂಗಳೂರು: ‘ಜಿಲ್ಲಾ ಪಂಚಾಯತಿ, ತಾಲ್ಲೂಕು ಪಂಚಾಯತಿ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಬಿಜೆಪಿ ಜತೆಗೆ ಹೊಂದಾಣಿಕೆ ಕಷ್ಟವಾಗಲಿದೆ. ಅಲ್ಲೆಲ್ಲಾ ಜೆಡಿಎಸ್‌ ಸ್ವಂತ ಬಲದಲ್ಲಿ ಸ್ಪರ್ಧಿಸಲಿದೆ’ ಎಂದು ಪಕ್ಷದ ವರಿಷ್ಠ ಎಚ್‌.ಡಿ.ದೇವೇಗೌಡ ಹೇಳಿದರು.

ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಲೋಕಸಭೆ, ರಾಜ್ಯಸಭೆ, ವಿಧಾನಸಭೆ ಮತ್ತು ವಿಧಾನಪರಿಷತ್ತುಗಳಿಗೆ ನಡೆಯುವ ಚುನಾವಣೆಗಳಲ್ಲಿ ಜೆಡಿಎಸ್‌ ಮತ್ತು ಬಿಜೆಪಿ ಹೊಂದಾಣಿಕೆಯಲ್ಲಿ ಸ್ಪರ್ಧಿಸಲಿವೆ. ಅದರಲ್ಲಿ ಯಾವುದೇ ಬದಲಾವಣೆ ಇಲ್ಲ’ ಎಂದು ಸ್ಪಷ್ಟಪಡಿಸಿದರು.

‘ಆದರೆ, ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಪರಿಸ್ಥಿತಿ ಭಿನ್ನವಾಗಿದೆ. ಅಲ್ಲೆಲ್ಲಾ ಪಕ್ಷದ ಸಂಘಟನೆ ಬಲವಾಗಿದ್ದು, ಸ್ವತಂತ್ರವಾಗಿಯೇ ಸ್ಪರ್ಧಿಸಬೇಕಾಗುತ್ತದೆ. ಹೀಗಾಗಿ ಆ ಹಂತದ ಚುನಾವಣೆಗಳಲ್ಲಿ ಬಿಜೆಪಿ ಜತೆ ಹೊಂದಾಣಿಕೆ ಮಾಡಿಕೊಳ್ಳುವುದು ಕಷ್ಟ’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. 

ADVERTISEMENT

‘ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅಥವಾ ಗೃಹ ಸಚಿವ ಅಮಿತ್ ಶಾ ಅವರ ಜತೆ ಮಾತನಾಡಲು ಸಾಧ್ಯವೇ? ಈ ವಿಚಾರದಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರು ತಮ್ಮ ನಿಲುವನ್ನು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ನಾವೂ ನಮ್ಮ ಸ್ವಂತ ಬಲದಲ್ಲಿಯೇ ಚುನಾವಣೆ ಎದುರಿಸುತ್ತೇವೆ. ಕೇರಳದಲ್ಲಿ ಎಡಪಕ್ಷಗಳ ಜತೆಗೆ ಮೈತ್ರಿ ಮಾಡಿಕೊಳ್ಳುತ್ತೇವೆ’ ಎಂದು ವಿವರಿಸಿದರು.

‘ಅಹಿಂದದ ವ್ಯಾಖ್ಯಾನ ಏನು?’

‘ಅಹಿಂದ ನಾಯಕ ಎಂದು ಓಡಾಡುತ್ತಿರುವವರು ಯಾವಾಗ ಅಹಿಂದ ನಾಯಕರಾಗಿದ್ದರು? ಅಹಿಂದದ ವ್ಯಾಖ್ಯಾನ ಏನು’ ಎಂದು ದೇವೇಗೌಡ ಪ್ರಶ್ನಿಸಿದರು.

ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ‘ಮುಸ್ಲಿಮರಿಗೆ ಮೀಸಲಾತಿ ನೀಡಿದವರು ಯಾರು? ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡಿದವರು ಯಾರು? ನಿಜಕ್ಕೂ ಅಹಿಂದ ನಾಯಕರು ಆಗಿದ್ದಿದ್ದರೆ ಸಿದ್ದರಾಮಯ್ಯ ಅವರು ಚುನಾವಣೆಗೆ ಸ್ಪರ್ಧಿಸಲು ಕೋಲಾರ, ಬಾದಾಮಿ ಎಂದು ವರ್ಷಗಳ ಕಾಲ ಕ್ಷೇತ್ರ ಹುಡುಕಬೇಕಿತ್ತೇ’ ಎಂದರು.

‘ಚರ್ಚ್‌ ಮೇಲಿನ ದಾಳಿ ಖಂಡನೀಯ’
‘ದೇಶದ ಕೆಲವು ರಾಜ್ಯಗಳಲ್ಲಿ ಕ್ರಿಸ್‌ಮಸ್‌ ಆಚರಣೆ ವೇಳೆ ಚರ್ಚ್‌ಗಳ ಮೇಲೆ ದಾಳಿ ನಡೆದಿದೆ. ಇದು ಹೇಯ ಕೃತ್ಯ. ಇದನ್ನು ನಾವೆಲ್ಲರೂ ಖಂಡಿಸಬೇಕು’ ಎಂದು ದೇವೇಗೌಡ ಹೇಳಿದರು. ‘ಈ ದೇಶದಲ್ಲಿ ಎಲ್ಲ ಧರ್ಮದವರೂ ಇದ್ದಾರೆ. ಚರ್ಚ್‌ ಮೇಲೆ ದಾಳಿ ನಡೆಯಬಾರದಿತ್ತು. ಆದರೆ ಆಗಿದೆ. ದಾಳಿ ನಡೆಸಿದವರ ವಿರುದ್ಧ ಕ್ರಮತೆಗೆದುಕೊಳ್ಳಬೇಕು. ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯಲ್ಲಿ ಚರ್ಚ್‌ಗೆ ಹೋಗಿ ಪ್ರಾರ್ಥನೆ ಸಲ್ಲಿಸಿದ್ದಾರೆ. ದಾಳಿಕೋರರ ಮೇಲೆ ಅವರು ಖಂಡಿತಾ ಕ್ರಮ ತೆಗೆದುಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.