ADVERTISEMENT

Asha Workers Strike | ಮತ್ತೆ ಮುರಿದ ಮಾತುಕತೆ, ಸಿಎಂ ಮಧ್ಯಪ್ರವೇಶಕ್ಕೆ ಆಗ್ರಹ

ನಾಲ್ಕನೇ ದಿನಕ್ಕೆ ‘ಆಶಾ’ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 10 ಜನವರಿ 2025, 9:45 IST
Last Updated 10 ಜನವರಿ 2025, 9:45 IST
<div class="paragraphs"><p>ಆಶಾ ಕಾರ್ಯಕರ್ತೆಯರ ಪ್ರತಿಭಟನೆ</p></div>

ಆಶಾ ಕಾರ್ಯಕರ್ತೆಯರ ಪ್ರತಿಭಟನೆ

   

ಬೆಂಗಳೂರು: ಮಾಸಿಕ ₹15,000 ಗೌರವಧನ ಮತ್ತು ಇತರ ಸವಲತ್ತುಗಳಿಗಾಗಿ ಆಗ್ರಹಿಸುತ್ತಿರುವ ಆಶಾ ಕಾರ್ಯಕರ್ತೆಯರು ಮತ್ತು ಸರ್ಕಾರದ ಪ್ರತಿನಿಧಿಗಳ ಜತೆಗೆ ಶುಕ್ರವಾರ ಬೆಳಿಗ್ಗೆ ನಡೆದ ಮತ್ತೊಂದು ಮಾತುಕತೆಯೂ ಮುರಿದುಬಿದ್ದಿದೆ. ಮುಖ್ಯಮಂತ್ರಿಯ ಮಧ್ಯಪ್ರವೇಶಕ್ಕೆ ಆಗ್ರಹಿಸುತ್ತಿರುವ ಧರಣಿ ನಿರತರು, ಸಂಕ್ರಾಂತಿಯನ್ನೂ ಇಲ್ಲೇ ಆಚರಿಸುವುದಾಗಿ ಪಣ ತೊಟ್ಟರು.

ಮಂಗಳವಾರದಿಂದ ಆರಂಭವಾಗಿರುವ ಅಹೋರಾತ್ರಿ ಅನಿರ್ದಿಷ್ಟಾವಧಿ ಧರಣಿಯು ಶುಕ್ರವಾರ ನಾಲ್ಕನೇ ದಿನಕ್ಕೆ ಕಾಲಿರಿಸಿತು. ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್‌.ಕೆ.ಅತೀಕ್‌, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತಾ ಅವರು ಪ್ರತಿಭಟನಾ ನಿರತರ ಪ್ರತಿನಿಧಿಗಳ ಜತೆಗೆ ಶುಕ್ರವಾರ ಬೆಳಿಗ್ಗೆಯೇ ಸಭೆ ನಡೆಸಿದರು. ಆದರೆ ಬೇಡಿಕೆ ಈಡೇರಿಕೆ ಸಂಬಂಧ ಒಮ್ಮತಕ್ಕೆ ಬರಲು ಆಗದೇ ಇದ್ದ ಕಾರಣಕ್ಕೆ ಮಾತುಕತೆ ಮುರಿದುಬಿತ್ತು.

ADVERTISEMENT

‘ಬುಧವಾರ ಮತ್ತು ಗುರುವಾರ ನಡೆದ ಸಭೆಯಲ್ಲಿ ಸರ್ಕಾರದ ಪ್ರತಿನಿಧಿಗಳು ವ್ಯಕ್ತಪಡಿಸಿದ್ದಕ್ಕಿಂತ ಭಿನ್ನವಾದ ನಿಲುವನ್ನು ಅಧಿಕಾರಿಗಳು ಪ್ರದರ್ಶಿಸಿದರು. ಆಶಾ ಕಾರ್ಯಕರ್ತೆಯರ ಅವಶ್ಯಕತೆಯೇ ಇಲ್ಲ. ಆರೋಗ್ಯ ಇಲಾಖೆ ಸಿಬ್ಬಂದಿಯೇ ಎಲ್ಲವನ್ನೂ ನಿಭಾಯಿಸುತ್ತಾರೆ ಎಂಬ ಅಭಿಪ್ರಾಯ ಸರ್ಕಾರದ ಕಡೆಯಿಂದ ವ್ಯಕ್ತವಾಯಿತು. ಹೀಗಾಗಿಯೇ ಮಾತುಕತೆ ಮುರಿದುಬಿತ್ತು’ ಎಂದು ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ರಾಜ್ಯ ಕಾರ್ಯದರ್ಶಿ ಡಿ.ನಾಗಲಕ್ಷ್ಮಿ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಧರಣಿ ನಿರತರನ್ನು ಕುರಿತು ಮಾತನಾಡಿದ ಅವರು, ‘ಅಧಿಕಾರಿಗಳು ನಿಮ್ಮೊಂದಿಗೆ ಸಭೆ ನಡೆಸಿದಾಗ ಯಾವ ಸಮಸ್ಯೆಯನ್ನೂ ಹೇಳಿಕೊಳ್ಳುವುದಿಲ್ಲ. ಆದರೆ ಈಗ ಸುಮ್ಮನೆ ಪ್ರತಿಭಟನೆ ಮಾಡುತ್ತೀದ್ದೀರ ಎಂದು ಹೇಳಿದರು’ ಎಂದರು.

ಇದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ‘ಆಶಾ’ಗಳು, ‘ಸಭೆಗಳಲ್ಲಿ ಮಾತನಾಡಲು ಅವಕಾಶವನ್ನೇ ನೀಡುವುದಿಲ್ಲ. ಇನ್ನು ಸಮಸ್ಯೆ ಹೇಳಿಕೊಳ್ಳುವುದೆಲ್ಲಿ? ಎಲ್ಲ ಜಿಲ್ಲೆಗಳ ಜಿಲ್ಲಾ ಆರೋಗ್ಯಾಧಿಕಾರಿಗಳೂ ಬರಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಬರಲಿ. ಎಲ್ಲ ಸಮಸ್ಯೆಯನ್ನು ಅವರ ಎದುರೇ ತೆರೆದಿಡುತ್ತೇವೆ’ ಎಂದರು.

‘ಆರೋಗ್ಯ ಸಚಿವರೂ ಬಂದದ್ದಾಯಿತು, ಅಧಿಕಾರಿಗಳ ಜತೆಗೆ ಎರಡು ಸುತ್ತಿನ ಮಾತುಕತೆಯೂ ಮುರಿದುಬಿತ್ತು. ಸಮಸ್ಯೆ ಬಗೆಹರಿದಿಲ್ಲ. ಇನ್ನು ಮುಖ್ಯಮಂತ್ರಿ ಅವರೇ ಬರಲಿ, ಅವರಿಂದಷ್ಟೇ ಸಮಸ್ಯೆ ಬಗೆಹರಿಸಲು ಸಾಧ್ಯ’ ಎಂದು ಪ್ರತಿಭಟನಾ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.