
ವಿಧಾನಸಭೆ ಕಲಾಪ (ಸಂಗ್ರಹ ಚಿತ್ರ)
ರಾಜ್ಯಪಾಲರ ಭಾಷಣಕ್ಕೆ ಅಡ್ಡಿಪಡಿಸಿದರೆಂದು ಆರೋಪಿಸಿ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಮತ್ತು ಬಿಜೆಪಿಯ ವಿ.ಸುನಿಲ್‌ಕುಮಾರ್ ಅವರು ಕಾನೂನು ಸಚಿವ ಎಚ್.ಕೆ.ಪಾಟೀಲ ವಿರುದ್ಧ ಸಭಾಧ್ಯಕ್ಷ ಯು.ಟಿ.ಖಾದರ್ ಅವರಿಗೆ ನೋಟಿಸ್ ನೀಡಿದರೆ, ರಾಜ್ಯಪಾಲರು ರಾಷ್ಟ್ರಗೀತೆ ಮೊಳಗಿದಾಗ ನಿಲ್ಲದೇ, ಅಗೌರವ ತೋರಿ ಹೊರ ನಡೆದರು ಎಂದು ಎಚ್.ಕೆ.ಪಾಟೀಲ ಅವರು ರಾಜ್ಯಪಾಲರ ವಿರುದ್ಧ ಆರೋಪ ಮಾಡಿದರು. ಇದು ಆಡಳಿತ ಮತ್ತು ವಿರೋಧ ಪಕ್ಷಗಳ ಮಧ್ಯೆ ಭಾರಿ ವಾಕ್ಸಮರಕ್ಕೆ ಕಾರಣವಾಯಿತು. ರಾಜ್ಯಪಾಲರನ್ನು ಬೀಳ್ಕೊಟ್ಟ ಬಳಿಕ ಸದನ ಮತ್ತೆ ಸೇರಿತು. ಇತ್ತೀಚೆಗೆ ನಿಧನರಾದವರಿಗೆ ಸಂತಾಪ ಸೂಚನೆ ಬಳಿಕ ನಡೆದ ಚರ್ಚೆಯ ವೇಳೆ, ಕಲಾಪ ಗದ್ದಲದ ಗೂಡಾಯಿತು.
ಸದನದಲ್ಲಿ ರಾಷ್ಟ್ರಗೀತೆ ಮೊಳಗುವಾಗ ರಾಜ್ಯಪಾಲರು ನಿಲ್ಲದೇ ಓಡಿ ಹೋದರು. ಈ ಮೂಲಕ ಅವರು ರಾಷ್ಟ್ರಗೀತೆಗೆ ಅಪಮಾನ ಮಾಡಿದ್ದಾರೆ. ಅವರು ಕನ್ನಡ ನಾಡಿನ ಜನರಲ್ಲಿ ಕ್ಷಮೆ ಕೇಳಬೇಕು. ಸಂವಿಧಾನ ಕಾಪಾಡಬೇಕಾದವರಿಂದಲೇ ಅಗೌರವ ಆಗಿದೆ. ಸಚಿವ ಸಂಪುಟವು ಒಪ್ಪಿ ಕಳುಹಿಸಿದ ಭಾಷಣವನ್ನು ಓದದೇ ಇರುವುದು ಮತ್ತು ಅರ್ಧಕ್ಕೆ ಮೊಟಕುಗೊಳಿಸಿದ್ದು ಚುನಾಯಿತ ಸರ್ಕಾರಕ್ಕೆ ಮಾಡಿದ ಅಪಮಾನ.
-ಎಚ್.ಕೆ.ಪಾಟೀಲ, ಕಾನೂನು ಸಚಿವ
ಎಚ್.ಕೆ.ಪಾಟೀಲ ಅವರು ರಾಜ್ಯಪಾಲರ ಭಾಷಣಕ್ಕೆ ಅಡ್ಡಿ ಮಾಡಿ ಅಗೌರವ ತೋರಿದ್ದಾರೆ. ಈ ಸಂಬಂಧ ವಿಷಯ ಪ್ರಸ್ತಾಪಕ್ಕೆ ನಿಮಗೆ (ಸಭಾಧ್ಯಕ್ಷ) ನೋಟಿಸ್ ನೀಡಿದ್ದೇನೆ. ನೀವು ಸಂತಾಪ ಸೂಚನೆ ಕೈಗೆತ್ತಿಕೊಂಡಿದ್ದೀರಿ. ಆಗ ಪಾಟೀಲರು ಮಧ್ಯ ಪ್ರವೇಶಿಸಿ ರಾಜ್ಯಪಾಲರ ಕುರಿತು ಮಾತನಾಡಿದ್ದು ಸರಿಯಲ್ಲ. ನೀವು ಅವಕಾಶ ನೀಡಬಾರದಿತ್ತು. ಅವರು ಅಪರಾಧ ಮಾಡಿದ್ದಾರೆ. ನಿಯಮ ಉಲ್ಲಂಘಿಸಿದವರಿಗೇ ಅವಕಾಶ ನೀಡಿದ್ದೀರಿ. ಅವರಿಗೆ ಯಾವ ವಿಶೇಷ ಅಧಿಕಾರ ಇದೆ? ವಿರೋಧ ಪಕ್ಷದ ನಾಯಕರಿಗೆ ಮಾತನಾಡಲು ನೀವು ಬಿಟ್ಟಿಲ್ಲ? ನೀವು (ಸಭಾಧ್ಯಕ್ಷ) ತಾರತಮ್ಯ ಮಾಡುತ್ತಿದ್ದೀರಿ. ಈ ಸದನದಲ್ಲಿ ಎಲ್ಲರೂ ಒಂದೇ, ಎಲ್ಲರೂ ಶಾಸಕರೇ. ರಾಜ್ಯಪಾಲರು ಹೊರಗೆ ಹೋಗು ವಾಗ ಕಾಂಗ್ರೆಸ್ ಶಾಸಕರು ಅವರನ್ನು ಅಡ್ಡಗಟ್ಟಿ, ಧಿಕ್ಕಾರ ಕೂಗಿದ್ದಕ್ಕೆ ವಿಡಿಯೊ ಪುರಾವೆಗಳಿವೆ. ರಾಜ್ಯಪಾಲರ ವಿರುದ್ಧ ಅಸಭ್ಯವಾಗಿ ನಡೆದುಕೊಂಡವರಿಗೆ ಯಾವ ಶಿಕ್ಷೆ ನೀಡುತ್ತೀರಿ?
-ಆರ್. ಅಶೋಕ, ವಿರೋಧಪಕ್ಷದ ನಾಯಕ
ರಾಷ್ಟ್ರಗೀತೆಗೂ ಕಾಯದೇ ಎದ್ದು ಹೊರಟ ರಾಜ್ಯಪಾಲರು ಶಿಷ್ಟಾಚಾರ ಬದಿಗೊತ್ತಿ ರಾಷ್ಟ್ರಗೀತೆ ಯನ್ನು ಅವಮಾನಿಸಿದ್ದಾರೆ. ಈ ಮೂಲಕ ಬಿಜೆಪಿ ರಾಷ್ಟ್ರಗೀತೆಯ ವಿರೋಧಿ, ಸಂವಿಧಾನ ವಿರೋಧಿ, ಕನ್ನಡಿಗರ ವಿರೋಧಿ ಎನ್ನುವುದು ಜಗಜ್ಜಾಹೀರಾಗಿದೆ. ಅಸಡ್ಡೆಯಿಂದ ಕೂಡಿದ ನಾಲ್ಕು ಸಾಲಿನ ಮಾತು, ಸರ್ಕಾರದ ಭಾಷಣದ ತಿರಸ್ಕಾರವು ಸಂವಿಧಾನದ ಆಶಯಗಳ ಉಲ್ಲಂಘನೆ. ಆರ್‌ಎಸ್ ಎಸ್ ಕಚೇರಿಯಲ್ಲಿ ರಾಷ್ಟ್ರಧ್ವಜ ಹಾರಿಸುತ್ತಾರೆಯೇ?
-ಪ್ರಿಯಾಂಕ್ ಖರ್ಗೆ, ಸಚಿವ
ನೀವು (ಸಭಾಧ್ಯಕ್ಷರು) ಸದನವನ್ನು ಬುಲ್ಡೋಜ್ ಮಾಡಿಕೊಂಡು ಹೋಗಲು ಆಗಲ್ಲ. ನೋಟಿಸ್ ನೀಡಿರುವ ವಿರೋಧ ಪಕ್ಷದ ನಾಯಕರಿಗೆ ಮಾತನಾಡಲು ಅವಕಾಶ ನೀಡದೇ ಕಾನೂನು ಸಚಿವರಿಗೆ ಹೇಗೆ ಅವಕಾಶ ನೀಡಿದಿರಿ? ಕಾನೂನು ಸಚಿವರು ಸದನದ ನಿಯಮ ಉಲ್ಲಂಘಿಸಿ ರಾಜ್ಯಪಾಲರು ಮಾತನಾಡುವಾಗ ಅಡ್ಡಿಪಡಿಸಿದ್ದಾರೆ? ಇದು ಗಂಭೀರ ಲೋಪ. ಹುಬ್ಬಳಿಯಲ್ಲಿ ರಾಷ್ಟ್ರಧ್ವಜ ಹಾರಿಸಲು ಬಿಡದ ಕಾಂಗ್ರೆಸ್‌ನವರಿಂದ ನಾವು ಪಾಠ ಹೇಳಿಸಿಕೊಳ್ಳಬೇಕಿಲ್ಲ. ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದು
ಹೇಳಿದವರ ವಿರುದ್ಧ ಕ್ರಮ ತೆಗೆದುಕೊಳ್ಳದ ಕಾಂಗ್ರೆಸ್ ಸರ್ಕಾರಕ್ಕೆ ನಾಚಿಕೆ ಆಗಬೇಕು.
-ಸುನಿಲ್ ಕುಮಾರ್, ಬಿಜೆಪಿ ಸದಸ್ಯ
ಸಂತಾಪ ಸೂಚನೆಗೂ ಮುನ್ನ ಕಾನೂನು ಸಚಿವರು ಮಾತನಾಡುತ್ತೇನೆ ಎಂದರು. ನಿಮಗೂ ಮಾತನಾಡಲು ಅವಕಾಶ ನೀಡುತ್ತೇನೆ. ನಾನು ತಾರತಮ್ಯ ಮಾಡುತ್ತಿಲ್ಲ. ರಾಜ್ಯಪಾಲರ ವಿಚಾರವನ್ನು ಸಚಿವರು ಹೇಳಿದ್ದಾರೆ, ಸಚಿವರು ರಾಜ್ಯಪಾಲರಿಗೆ ಅಡ್ಡಿ ಪಡಿಸಿದರು ಮತ್ತು ಶಾಸಕರು ರಾಜ್ಯಪಾಲರನ್ನು ಅಡ್ಡಗಟ್ಟಿ ಧಿಕ್ಕಾರ ಕೂಗಿದ್ದಾರೆ ಎಂದು ನೀವು ಹೇಳಿದ್ದೀರಿ. ಈ ಬಗ್ಗೆ ನಾನು ರೂಲಿಂಗ್ ನೀಡುತ್ತೇನೆ
-ಯು.ಟಿ. ಖಾದರ್, ಸಭಾಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.