ADVERTISEMENT

ಉಲ್ಟಾ ಹೊಡೆದ ‘ಗುಳ್ಳೆ ನರಿ ಶಾಸ್ತ್ರ’

​ಪ್ರಜಾವಾಣಿ ವಾರ್ತೆ
Published 19 ಜುಲೈ 2019, 20:00 IST
Last Updated 19 ಜುಲೈ 2019, 20:00 IST
ಶಾಸಕ ಶಿವಲಿಂಗೇಗೌಡ ಮಾತನಾಡಿದರು –ಪ್ರಜಾವಾಣಿ ಚಿತ್ರ-
ಶಾಸಕ ಶಿವಲಿಂಗೇಗೌಡ ಮಾತನಾಡಿದರು –ಪ್ರಜಾವಾಣಿ ಚಿತ್ರ-   

ಬೆಂಗಳೂರು: ವಿಧಾನಸಭೆಯಲ್ಲಿ ಶುಕ್ರವಾರ ಅರಸೀಕೆರೆಯ ಜೆಡಿಎಸ್ ಶಾಸಕ ಕೆ.ಎಂ.ಶಿವಲಿಂಗೇಗೌಡ ಹೇಳಿದ ‘ಗುಳ್ಳೆನರಿ ಶಾಸ್ತ್ರ’‌ದ ಕತೆ ಸಾಕಷ್ಟು ಕುತೂಹಲ ಕೆರಳಿಸಿತು.

‘ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಉಳಿದರೆ ₹1 ಕೋಟಿ ನೀಡುವುದಾಗಿ ಹರಕೆ ಹೊತ್ತು ಚಿಕ್ಕತಿರುಪತಿ ದೇವಸ್ಥಾನಕ್ಕೆ ಹೋಗಿದ್ದೆ. ದೇವಸ್ಥಾನದಿಂದ ಇಳಿದು ಬರುವಾಗ ಗುಳ್ಳೆನರಿಯೊಂದು ನನ್ನ ಎಡಭಾಗದಿಂದ ಬಲಕ್ಕೆ ಹೋಯಿತು. ಆಗ ಸರ್ಕಾರ ಸುರಕ್ಷಿತ ಎಂದುಕೊಂಡೆ. ಹರಕೆ ಹೊತ್ತಿದ್ದಕ್ಕೂ ಫಲ ಸಿಗುತ್ತಿದೆ ಎಂದು ಮನಸ್ಸಿನಲ್ಲೇ ಯೋಚಿಸುತ್ತಾ ಮುಂದೆ ಬಂದೆ’.

‘ದೇಗುಲದಿಂದ ಕೆಳಗೆ ಇಳಿದು ಕಾರಿನ ಬಳಿ ಬರುವಷ್ಟರಲ್ಲಿ ಶಾಸಕ ಎಂ.ಟಿ.ಬಿ.ನಾಗರಾಜ್ ವಿಮಾನ ಹತ್ತಿ ಮುಂಬೈಗೆ ತೆರಳುತ್ತಿರುವ ವಿಚಾರ ತಿಳಿಯಿತು. ಗುಳ್ಳೆನರಿಅಡ್ಡಬಂದು, ಎಡದಿಂದ ಬಲಕ್ಕೆ ಹೋದರೂ ಏನೂ ಆಗಲಿಲ್ಲ’ ಎಂದು ಗುಳ್ಳೆನರಿಶಾಸ್ತ್ರದ ಕತೆಯನ್ನು ಸ್ವಾರಸ್ಯಕರವಾಗಿ ಕಟ್ಟಿಕೊಟ್ಟರು.

ADVERTISEMENT

ಶಾಸಕ ಶ್ರೀಮಂತ ಪಾಟೀಲ ಅವರನ್ನು ಅಪಹರಿಸಿ, ಅನಾರೋಗ್ಯದ ನೆಪಹೇಳಿ ಆಸ್ಪತ್ರೆಯಲ್ಲಿ ಮಲಗಿಸಿದ್ದಾರೆ. ಮುಂಬೈನಲ್ಲಿ ತಂಗಿರುವ ಶಾಸಕರಿಂದ ರಾಜೀನಾಮೆ ಕೊಡಿಸದೆ ಅನಾರೋಗ್ಯದ ನೆಪದಲ್ಲಿ ಆಸ್ಪತ್ರೆಯಲ್ಲೇ ಮಲಗಿಸಬಹುದಿತ್ತು. ಹೀಗೆ ಮಾಡಿದ್ದರೆ ಸದನದಲ್ಲಿ ಇಷ್ಟೆಲ್ಲ ರದ್ದಾಂತ, ಚರ್ಚೆ ಮಾಡುವ ಅಗತ್ಯ ಇರಲಿಲ್ಲ ಎಂದು ಕುಟುಕಿದರು.

ಮುದಿ ಎತ್ತು:ಗಂಡಸಿ ಸಂತೆಯಲ್ಲಿ ಹಲವರು, ಎತ್ತುಗಳನ್ನು ಖರೀದಿಸುತ್ತಾರೆ. ಆದರೆ ಬಿಜೆಪಿಯವರು ಕೊಳ್ಳುವಾಗ ಮುದಿ ಎತ್ತು ಸಿಕ್ಕಿದ್ದು, ಅದನ್ನೇ ಖರೀದಿಸಿದ್ದಾರೆ. ನಂತರ ಕತ್ತರಿಸಿ ಹಾಕಿದ್ದಾರೊ, ಕೊಂದು ತಿಂದುಹಾಕಿದ್ದಾರೊ ಎಂಬುದು ಗೊತ್ತಾಗುತ್ತಿಲ್ಲ ಎಂದು ತಮ್ಮದೇ ಧಾಟಿಯಲ್ಲಿ ವ್ಯಾಖ್ಯಾನಿಸಿದರು.

‘ನಮ್ಮನ್ನು ಚಂಬಲ್ ಕಣಿವೆ ಡಕಾಯಿತರಿಗೆ ಜನರು ಹೋಲಿಕೆ ಮಾಡುತ್ತಿದ್ದಾರೆ’ ಎಂದು ಶಾಸಕರು ಆರೋಪಿದರು. ತಕ್ಷಣ ಪ್ರತಿಕ್ರಿಯಿಸಿದ ಸಭಾಧ್ಯಕ್ಷ ರಮೇಶ್ ಕುಮಾರ್ ‘ಡಕಾಯಿತರು ನಮಗಿಂತ ಉತ್ತಮ. ಅಂತಹವರಿಗೆ ನಮ್ಮನ್ನು ಹೋಲಿಕೆ ಮಾಡಬೇಡಿ’ ಎಂದರು.

ಶಾಸಕರಿಗೆ ಕಾವಲು
ವಿಧಾನಸಭೆ ಹಾಗೂ ಶಾಸಕರಿಗೆ ಮೀಸಲಿಟ್ಟಿರುವ ಮೊಗಸಾಲೆಯಿಂದ ತಮ್ಮ ಪಕ್ಷದ ಶಾಸಕರು ಹೊರಗೆ ಹೋಗದಂತೆ ಬಿಜೆಪಿ ಹಾಗೂ ಕಾಂಗ್ರೆಸ್ ಮುಖಂಡರು ಶುಕ್ರವಾರ ಕಾವಲು ನಿಂತಿದ್ದರು. ನೈಸರ್ಗಿಕ ಕರೆ ಮುಗಿದ ನಂತರ ವಾಪಸ್ ಬರುವವರೆಗೂ ಅವರ ಜತೆಯಲ್ಲಿ ಇರುತ್ತಿದ್ದರು. ಮಧ್ಯಾಹ್ನ ಊಟಕ್ಕೆ ಬಿಡುವು ನೀಡಿದ ಸಮಯದಲ್ಲೂ ಮೊಗಸಾಲೆಯಿಂದ ಹೊರಗೆ ಹೋಗಲು ಅವಕಾಶ ನೀಡಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.