ಸಿದ್ದರಾಮಯ್ಯ
ಬೆಂಗಳೂರು: ಭಾರಿ ಮಳೆಯಿಂದಾಗಿ ಅನಾಹುತ ಸಂಭವಿಸಿರುವ ಮತ್ತು ಪ್ರವಾಹ ಪೀಡಿತ ಪ್ರದೇಶಗಳಿಗೆ ತಕ್ಷಣ ತೆರಳಿ ಪರಿಹಾರ ಕಾರ್ಯದ ಉಸ್ತುವಾರಿ ನೋಡಿಕೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವರು, ಉಸ್ತುವಾರಿ ಕಾರ್ಯದರ್ಶಿಗಳು ಹಾಗೂ ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.
ಮಳೆಯಿಂದ ಆಗಿರುವ ಅನಾಹುತಗಳ ಕುರಿತು ಅಧಿಕಾರಿಗಳಿಂದ ಬುಧವಾರ ಮಾಹಿತಿ ಪಡೆದುಕೊಂಡ ಮುಖ್ಯಮಂತ್ರಿ, ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ನಿರ್ದೇಶನ ನೀಡಿದರು.
ಅಲ್ಲದೆ, ಪರಿಸ್ಥಿತಿಯನ್ನು ಸಮಗ್ರವಾಗಿ ಅವಲೋಕಿಸಲು ಇದೇ 30 ಮತ್ತು 31ರಂದು ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಮತ್ತು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ಸಭೆ ಕರೆಯುವಂತೆ ಮುಖ್ಯ ಕಾರ್ಯದರ್ಶಿಗೆ ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ.
‘ಜೋರು ಮಳೆಯಿಂದ ಹಾನಿಗೆ ಒಳಗಾಗಿರುವ ಮತ್ತು ಪ್ರವಾಹ ಪೀಡಿತ ಪ್ರದೇಶಗಳಲ್ಲಿನ ಪರಿಸ್ಥಿತಿಯನ್ನು ಉಸ್ತುವಾರಿ ಸಚಿವರು ಹಾಗೂ ಉಸ್ತುವಾರಿ ಕಾರ್ಯದರ್ಶಿಗಳು ಸಮಗ್ರವಾಗಿ ಅವಲೋಕಿಸಬೇಕು. ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಈ ಬಗ್ಗೆ ಕಟ್ಟೆಚ್ಚರ ಮತ್ತು ತೀವ್ರ ನಿಗಾ ವಹಿಸಿ ಪರಿಹಾರ ಕಾರ್ಯಗಳನ್ನು ಸಮರೋಪಾದಿಯಲ್ಲಿ ನಿರ್ವಹಿಸಬೇಕು’ ಎಂದು ಅವರು ಸೂಚನೆ ನೀಡಿದ್ದಾರೆ.
₹973.51 ಕೋಟಿ ಲಭ್ಯ: ಮಳೆಯಿಂದಾಗಿ ರಾಜ್ಯದಾದ್ಯಂತ ಸೋಮವಾರದವರೆಗೆ (ಮೇ 26) 45 ಮನೆಗಳು ಸಂಪೂರ್ಣವಾಗಿ ಹಾನಿಯಾಗಿದೆ. 1,385 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಮನೆ ಕಳೆದುಕೊಂಡವರ ಪೈಕಿ ಶೇಕಡಾ 99 ರಷ್ಟು ಕುಟುಂಬಗಳಿಗೆ ಆರ್ಥಿಕ ಸಹಾಯ ಧನ ನೀಡಲಾಗಿದೆ. ವಿಪತ್ತು ನಿರ್ವಹಣೆಗಾಗಿ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಪಿ.ಡಿ ಖಾತೆಯಲ್ಲಿ ಒಟ್ಟು ₹ 973.51 ಕೋಟಿ ಅನುದಾನ ಲಭ್ಯವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.