ADVERTISEMENT

ಆಲಮಟ್ಟಿ ಹಿನ್ನೀರಿನಿಂದ ಮಹಾರಾಷ್ಟ್ರಕ್ಕೆ ತೊಂದರೆಯಿಲ್ಲ: ಯಡಿಯೂರಪ್ಪ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2019, 11:37 IST
Last Updated 8 ಆಗಸ್ಟ್ 2019, 11:37 IST
   

ಬೆಳಗಾವಿ: ಆಲಮಟ್ಟಿ ಹಾಗೂ ನಾರಾಯಣಪುರ ಜಲಾಶಯಗಳಲ್ಲಿ ನೀರು ಸಂಗ್ರಹಿಸಿರುವುದರಿಂದ ಮಹಾರಾಷ್ಟ್ರದ ಜನರಿಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸ್ಪಷ್ಟಪಡಿಸಿದರು.

ಜಿಲ್ಲೆಯ ಪ್ರವಾಹ ಬಾಧಿತ ಪ್ರದೇಶಗಳಿಗೆ ಭೇಟಿ ನೀಡಿದ ಬಳಿಕ ಚಿಕ್ಕೋಡಿಯ ಪ್ರವಾಸಿಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯಗಳ ಹಿನ್ನೀರಿನಿಂದ ಮಹಾರಾಷ್ಟ್ರದ ಗಡಿ ಜಿಲ್ಲೆಗಳಾದ ಕೊಲ್ಲಾಪುರ ಮತ್ತು ಸಾಂಗ್ಲಿ ಜಿಲ್ಲೆಗಳಲ್ಲಿ ಪ್ರವಾಹಕ್ಕೆ ಕಾರಣವಾಗುತ್ತಿದೆ ಎಂದು ಅಲ್ಲಿನ ಕೆಲವು ಮಾಧ್ಯಮಗಳಲ್ಲಿ ತಪ್ಪು ಅಭಿಪ್ರಾಯ ಮೂಡಿಸುವ ವರದಿಗಳು ಪ್ರಕಟವಾಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

ಆಲಮಟ್ಟಿಯಿಂದ ಸಾಂಗ್ಲಿ 250 ಕಿಮೀ ದೂರದಲ್ಲಿದೆ. ಈ ಜಲಾಶಯಗಳ ಹಿನ್ನೀರು ಅಲ್ಲಿಯವರೆಗೆ ತಲುಪಲು ಸಾಧ್ಯವೇ ಇಲ್ಲ.

ಆಲಮಟ್ಟಿ ಜಲಾಶಯದಲ್ಲಿ ಗರಿಷ್ಠ 123 ಟಿ.ಎಂ.ಸಿ ನೀರು ಸಂಗ್ರಹಿಸಬಹುದು. ಆದರೆ ಸದ್ಯಕ್ಕೆ ಕೇವಲ 85 ಟಿ ಎಂಸಿ ನೀರು ಮಾತ್ರ ಇದೆ. ಅದೇ ರೀತಿ ನಾರಾಯಣಪುರ ಜಲಾಶಯದ ಗರಿಷ್ಠ ಸಂಗ್ರಹ ಸಾಮರ್ಥ್ಯ 33 ಟಿ.ಎಂ.ಸಿ. ಸದ್ಯ 18 ಟಿ ಎಂ.ಸಿ ಮಾತ್ರ ನೀರಿದೆ. ಇನ್ನೂ ಸಂಗ್ರಹಿಸಲು ಅವಕಾಶ ಇದೆ ಎಂದರು.

ಮಹಾರಾಷ್ಟ್ರದ ಸಿಎಂ ಜತೆ ಈಗಾಗಲೇ ಈ ಬಗ್ಗೆ ಮೂರು ಬಾರಿ ಚರ್ಚೆ ಮಾಡಿದ್ದೇನೆ. ಅಲ್ಲಿನ ಕೆಲ ಮಾಧ್ಯಮಗಳಲ್ಲಿ ತಪ್ಪು ಮಾಹಿತಿ ಪ್ರಕಟವಾಗುತ್ತಿರುವುದರಿಂದ ಮತ್ತೇ ಸ್ಪಷ್ಟನೆ ನೀಡುತ್ತಿದ್ದೇನೆ ಎಂದರು.

ಐದು ಸಾವಿರ ಕೋಟಿ ಅಗತ್ಯ: ರಾಜ್ಯದಲ್ಲಿ ಎದುರಾಗಿರುವ ಪ್ರವಾಹ ಪರಿಸ್ಥಿತಿಯಿಂದ ಉಂಟಾಗಿರುವ ಹಾನಿಗೆ ಪರಿಹಾರ ನೀಡಲು ಸದ್ಯಕ್ಕೆ ಅಂದಾಜು ₹ 5,000 ಕೋಟಿ ಅಗತ್ಯವಿದೆ. 30 ಸಾವಿರ ಮನೆಗಳನ್ನು ನಿರ್ಮಿಸಬೇಕಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದರು.

ಪ್ರವಾಹದಿಂದ ಉಂಟಾಗಿರುವ ಹಾನಿಯ ಬಗ್ಗೆ ಒಂದು ವಾರದ ಬಳಿಕ ಸಮಗ್ರ ಸಮೀಕ್ಷೆ ನಡೆಸಿ ಸೂಕ್ತ ಪರಿಹಾರವನ್ನು ನೀಡಲಾಗುವುದು.

ಸುಧಾಮೂರ್ತಿಗೆ ಧನ್ಯವಾದ; ದಾನಿಗಳಿಗೆ ಆಹ್ವಾನ:ಪ್ರವಾಹ ಪೀಡಿತ ಜನರಿಗೆ ಪುನರ್ವಸತಿ ಕಲ್ಪಿಸಲು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಇನ್ಫೋಸಿಸ್ ಸಂಸ್ಥೆಯ ಸುಧಾಮೂರ್ತಿ ₹ 10 ಕೋಟಿ ನೀಡಿದ್ದಾರೆ. ಅದೇ ರೀತಿಯಲ್ಲಿ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು ದಾನಿಗಳು ಮುಂದಾಗಬೇಕು ಎಂದು ಮನವಿ ಮಾಡಿಕೊಂಡರು.

2005 ರಲ್ಲಿ ಇದೇ ರೀತಿ ಪ್ರವಾಹ ಬಂದಾಗ ದಾನಿಗಳು ₹ 1,500 ಕೋಟಿ ದೇಣಿಗೆ ನೀಡುವ ಮೂಲಕ ಸಂತ್ರಸ್ತರಿಗೆ ಆಸರೆಯಾಗಿದ್ದರು ಎಂದರು.

ಕೇಂದ್ರ ಗೃಹಸಚಿವ ಅಮಿತ್ ಶಾ ಅವರ ಆಸಕ್ತಯಿಂದಾಗಿ ಎರಡು ವಿಶೇಷ ಹೆಲಿಕಾಪ್ಟರ್ ಬಂದಿದ್ದು, ರಕ್ಷಣಾ ಕಾರ್ಯಕ್ಕಾಗಿ ಬೆಳಗಾವಿಯಲ್ಲಿ ನಿಯೋಜಿಸಲಾಗಿದೆ ಎಂದರು.

ರೈಲ್ವೆ ಖಾತೆ ರಾಜ್ಯ ಸಚಿವರಾದ ಸುರೇಶ್ ಅಂಗಡಿ, ಸಂಸದರಾದ ಅಣ್ಣಾಸಾಹೇಬ್ ಜೊಲ್ಲೆ, ರಾಜ್ಯಸಭಾ ಸದಸ್ಯರಾದ ಡಾ.ಪ್ರಭಾಕರ್ ಕೋರೆ,ಶಾಸಕರಾದ ಗಣೇಶ್ ಹುಕ್ಕೇರಿ, ಉಮೇಶ್ ಕತ್ತಿ, ಶಶಿಕಲಾ ಜೊಲ್ಲೆ, ಪಿ.ರಾಜೀವ್, ದುರ್ಯೋಧನ ಐಹೊಳೆ, ಸಿದ್ದು ಸವದಿ, ವಿಧಾನ ಪರಿಷತ್ ಸದಸ್ಯರಾದ ಮಹಾಂತೇಶ್ ಕವಟಗಿಮಠ, ಹನುಮಂತ ನಿರಾಣಿ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.