ADVERTISEMENT

ಕೆಐಒಸಿಎಲ್‌ ಗಣಿ ಅನ್ವೇಷಣೆ: ರಾಜ್ಯ ಸರ್ಕಾರ ಹಸಿರು ನಿಶಾನೆ

ನಿಬಂಧನೆ ಪಾಲಿಸಿದರಷ್ಟೇ ಗಣಿಗಾರಿಕೆ ಅನುಮತಿ: ಷರತ್ತು

ಮಂಜುನಾಥ್ ಹೆಬ್ಬಾರ್‌
Published 10 ಏಪ್ರಿಲ್ 2025, 23:30 IST
Last Updated 10 ಏಪ್ರಿಲ್ 2025, 23:30 IST
ಕೆಐಒಸಿಎಲ್‌ ಗಣಿ ನಡೆಸಲಿರುವ ಪ್ರದೇಶದ ಉಪಗ್ರಹ ಚಿತ್ರ 
ಕೆಐಒಸಿಎಲ್‌ ಗಣಿ ನಡೆಸಲಿರುವ ಪ್ರದೇಶದ ಉಪಗ್ರಹ ಚಿತ್ರ    

ನವದೆಹಲಿ: ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನ ತುಂಬರಗುಡ್ಡಿ ರಾಜ್ಯ ಅರಣ್ಯದ 125 ಎಕರೆಯಲ್ಲಿ ಕಬ್ಬಿಣದ ಹಾಗೂ ಮ್ಯಾಂಗನೀಸ್‌ ಅದಿರು ಅನ್ವೇಷಣೆ ನಡೆಸಲು ಕುದುರೆಮುಖ ಕಬ್ಬಿಣದ ಅದಿರು ಕಂಪನಿಗೆ (ಕೆಐಒಸಿಎಲ್‌) ಕರ್ನಾಟಕ ಸರ್ಕಾರ ಹಸಿರು ನಿಶಾನೆ ತೋರಿದೆ. 

ಸಂಡೂರಿನ ದೇವದಾರಿಯಲ್ಲಿ ಈ ಕಂಪನಿಗೆ ಕಬ್ಬಿಣದ ಅದಿರು ಗಣಿಗಾರಿಕೆ ನಡೆಸಲು ಕೇಂದ್ರ ಉಕ್ಕು ಸಚಿವಾಲಯ ಕಳೆದ ವರ್ಷ ಅನುಮತಿ ನೀಡಿತ್ತು. ಆದರೆ, ರಾಜ್ಯ ಸರ್ಕಾರ ಇದಕ್ಕೆ ಒಪ್ಪಿಗೆ ನೀಡಿರಲಿಲ್ಲ. ‘ಈ ಕಂಪನಿಯು ಕುದುರೆಮುಖ ರಾಷ್ಟ್ರೀಯ ಉದ್ಯಾನದೊಳಗೆ ಕೊಳವೆ ಮಾರ್ಗ ಅಳವಡಿಸುವುದೂ ಸೇರಿ 465.73 ಹೆಕ್ಟೇರ್‌ ಪ್ರದೇಶವನ್ನು ಅನುಮತಿ ಇಲ್ಲದೇ ಅರಣ್ಯೇತರ ಉದ್ದೇಶಕ್ಕೆ ಬಳಕೆ ಮಾಡಿದೆ. ಎನ್‌ಪಿವಿ ಶುಲ್ಕ ₹628 ಕೋಟಿ ಹಾಗೂ ಬಡ್ಡಿ ಸೇರಿ ಒಟ್ಟಾರೆ ₹3,000 ಕೋಟಿಯನ್ನು ರಾಜ್ಯ ಸರ್ಕಾರಕ್ಕೆ ಕೊಡಬೇಕಾಗಿದೆ. ಈ ಎಲ್ಲ ನಿಬಂಧನೆಗಳನ್ನು ಪಾಲಿಸಿದರೆ ಗಣಿಗಾರಿಕೆಗೆ ಅನುಮತಿ ನೀಡಲಾಗುವುದು’ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಸ್ಪಷ್ಟಪಡಿಸಿದ್ದರು. ಕೆಐಒಸಿಎಲ್‌ ಈ ಮೊತ್ತ ಪಾವತಿಸದೇ ಇದ್ದರೂ ಗಣಿ ಅನ್ವೇಷಣೆಗೆ ರಾಜ್ಯ ಸರ್ಕಾರ ಒಪ್ಪಿಗೆ ಕೊಟ್ಟಿರುವುದು ಚರ್ಚೆಗೆ ಗ್ರಾಸವಾಗಿದೆ. 

ಈ ಅರಣ್ಯದಲ್ಲಿ ಭವಿಷ್ಯದಲ್ಲಿ ಗಣಿಗಾರಿಕೆ ನಡೆಸಲು ಕಂಪನಿ ಉದ್ದೇಶಿಸಿದೆ. ಇದಕ್ಕಾಗಿ ಅನ್ವೇಷಣೆ ನಡೆಸಲು ಅರಣ್ಯ ಇಲಾಖೆಗೆ ಪ್ರಸ್ತಾವ ಸಲ್ಲಿಸಿತ್ತು. ಬಳ್ಳಾರಿ ಡಿಸಿಎಫ್ ಅವರು ಸ್ಥಳ ಪರಿಶೀಲನೆ ನಡೆಸಿ ಶಿಫಾರಸು ಮಾಡಿದ್ದರು. ಈ ಕಾರ್ಯಾಚರಣೆ ಸಂದರ್ಭದಲ್ಲಿ 966 ಮರಗಳ ಹನನ ಮಾಡಲಾಗುತ್ತದೆ ಎಂದೂ ತಿಳಿಸಿದ್ದರು. ಈ ಅರಣ್ಯವು ರಾಷ್ಟ್ರೀಯ ಉದ್ಯಾನದ ಭಾಗವಲ್ಲ ಎಂದೂ ಸ್ಪಷ್ಟಪಡಿಸಿದ್ದರು. ಈ ಪ್ರಸ್ತಾವಕ್ಕೆ ಬಳ್ಳಾರಿ ಸಿಸಿಎಫ್ ಅನುಮೋದನೆ ನೀಡಿದ್ದರು. ಈ ಪ್ರಸ್ತಾವವನ್ನು ಶಿಫಾರಸು ಮಾಡಿ ಅರಣ್ಯ ಪಡೆಯ ಮುಖ್ಯಸ್ಥರು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರಿಗೆ ಮಾರ್ಚ್‌ 13ರಂದು ಪತ್ರ ಬರೆದಿದ್ದರು. ಇದಕ್ಕೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸಹಮತ ಸೂಚಿಸಿ ಕೇಂದ್ರಕ್ಕೆ ಶಿಫಾರಸು ಮಾಡಿದ್ದಾರೆ. ಕೇಂದ್ರ ಸರ್ಕಾರದಿಂದ ಈ ಪ್ರಸ್ತಾವಕ್ಕೆ ಇನ್ನಷ್ಟೇ ಅನುಮೋದನೆ ಸಿಗಬೇಕಿದೆ. 

ADVERTISEMENT

‘ಕೆಐಒಸಿಎಲ್‌ ವಿಷಯದಲ್ಲಿ ರಾಜ್ಯ ಸರ್ಕಾರ ನಿಲುವು ಬದಲಿಸಿರುವುದು ಅನುಮಾನಕ್ಕೆ ಕಾರಣವಾಗಿದೆ. ಇದು ರಾಜ್ಯ ಸರ್ಕಾರದ ದ್ವಂದ್ವ ನಿಲುವು. ಗಣಿಗಾರಿಕೆಯಿಂದ ಸಂಡೂರಿನ ಅರಣ್ಯ ಪ್ರದೇಶಗಳಿಗೆ ಈಗಾಗಲೇ ಸಾಕಷ್ಟು ಹಾನಿಯಾಗಿದೆ. ಹೊಸದಾಗಿ ಗಣಿಗಾರಿಕೆಗೆ ಅವಕಾಶ ನೀಡದೆ ಅಳಿದುಳಿದ ಅರಣ್ಯ ಪ್ರದೇಶಗಳನ್ನು ಸಂರಕ್ಷಿಸಲು ರಾಜ್ಯ ಸರ್ಕಾರ ಕ್ರಮ ವಹಿಸಬೇಕು’ ಎಂದು ಸಾಮಾಜಿಕ ಹೋರಾಟಗಾರ ಎಸ್‌.ಆರ್.ಹಿರೇಮಠ ಆಗ್ರಹಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.