
ಬೆಂಗಳೂರು: ಕರ್ನಾಟಕದಿಂದ ಸಾಫ್ಟ್‌ವೇರ್ ರಫ್ತನ್ನು 2030 ವೇಳೆಗೆ ₹4.09 ಲಕ್ಷ ಕೋಟಿಯಿಂದ ₹11.5 ಲಕ್ಷ ಕೋಟಿಗೆ ಹೆಚ್ಚಿಸುವ ಗುರಿ ಹೊಂದಿದ ‘ಕರ್ನಾಟಕ ಮಾಹಿತಿ ತಂತ್ರಜ್ಞಾನ ನೀತಿ 2025–2030’ಕ್ಕೆ ಗುರುವಾರ ನಡೆದ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.
ಬೆಂಗಳೂರಿನಾಚೆಗೆ ಮೈಸೂರು, ಮಂಗಳೂರು, ಹುಬ್ಬಳ್ಳಿ–ಧಾರವಾಡ, ಬೆಳಗಾವಿ, ತುಮಕೂರು, ಕಲಬುರಗಿ ಮತ್ತು ಶಿವಮೊಗ್ಗದಂತಹ ನಗರಗಳಲ್ಲಿ ಕೃತಕ ಬುದ್ಧಿಮತ್ತೆ ಹಾಗೂ ಇತರ ನೂತನ ತಂತ್ರಜ್ಞಾನಗಳ ಮೇಲೆ ಹೂಡಿಕೆಗೆ ಆದ್ಯತೆ ನೀಡುವ ಬಗ್ಗೆಯೂ ನೀತಿ ಪ‍್ರಸ್ತಾಪಿಸಿದೆ.
ಕಾನೂನು ಸಚಿವ ಎಚ್.ಕೆ.ಪಾಟೀಲ ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದರು.
ರಾಜ್ಯದ ಆದಾಯ ಮೌಲ್ಯವರ್ಧನೆಗೆ ಐಟಿ ವಲಯದ ಕೊಡುಗೆಯನ್ನು ಶೇ 26ರಿಂದ ಶೇ 36ಕ್ಕೆ ಹೆಚ್ಚಿಸಲು ಗುರಿ ನಿಗದಿ ಮಾಡಲಾಗಿದೆ. ಜಾಗತಿಕ ತಂತ್ರಜ್ಞಾನ ಮಾರುಕಟ್ಟೆಗಳಲ್ಲಿ ಕರ್ನಾಟಕದ ನಾಯಕತ್ವ ಬಲಪಡಿಸುವುದು ಮತ್ತು ಕರ್ನಾಟಕದ ಬ್ರ್ಯಾಂಡ್ ಅನ್ನು ಕೃತಕ ಬುದ್ದಿಮತ್ತೆಯ ಸ್ಥಳೀಯ ತಾಣವಾಗಿ (ಎಐ–ನೇಟಿವ್) ಉನ್ನತೀಕರಿಸಲು ಅಗತ್ಯ ಯೋಜನೆ ರೂಪಿಸಲಾಗುವುದು ಎಂದು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.