ADVERTISEMENT

ವಿಧಾನ ಪರಿಷತ್: ಬಲ ವರ್ಧಿಸಿಕೊಂಡ ಬಿಜೆಪಿ; ಬೀಗಿದ ಕಾಂಗ್ರೆಸ್, ಕುಗ್ಗಿದ ಜೆಡಿಎಸ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಡಿಸೆಂಬರ್ 2021, 15:14 IST
Last Updated 14 ಡಿಸೆಂಬರ್ 2021, 15:14 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್‌ನ 25 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 11, ಕಾಂಗ್ರೆಸ್ 11, ಜೆಡಿಎಸ್ 2 ಹಾಗೂ ಪಕ್ಷೇತರ ಅಭ್ಯರ್ಥಿ 1 ಸ್ಥಾನಗಳನ್ನು ಗೆದ್ದುಕೊಂಡಿದ್ದಾರೆ.

ಡಿ.10ರಂದು ಚುನಾವಣೆಗಳು ನಡೆದಿದ್ದು, ಮಂಗಳವಾರ ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ಗೆದ್ದ ಅಭ್ಯರ್ಥಿಗಳ ಪರವಾಗಿ ಪಕ್ಷ ಕಾರ್ಯಕರ್ತರು ಅಲ್ಲಲ್ಲಿ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ.

ಬಿಜೆಪಿಗೆ ಪ್ಲಸ್ 6

ADVERTISEMENT

75 ಸದಸ್ಯರುಳ್ಳ ಕರ್ನಾಟಕ ವಿಧಾನ ಪರಿಷತ್‌ನಲ್ಲಿ ಬಿಜೆಪಿ ಬಹುಮತ ಗಳಿಸಬೇಕಿದ್ದರೆ 25ರಲ್ಲಿ 13 ಸ್ಥಾನಗಳನ್ನು ಗೆಲ್ಲಬೇಕಿತ್ತು. ಕನಿಷ್ಠ 15 ಸ್ಥಾನಗಳನ್ನು ಗೆಲ್ಲುವುದಾಗಿ ಬಿಜೆಪಿ ಹೇಳಿಕೊಂಡಿತ್ತು. ಇದೀಗ 11 ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿಯು ತನ್ನ ಪ್ರಾಬಲ್ಯ ವೃದ್ಧಿಸಿಕೊಂಡಿದೆ.

2015ರಲ್ಲಿ 25 ಕ್ಷೇತ್ರಗಳಲ್ಲಿ ಬಿಜೆಪಿಗೆ ಕೇವಲ 6 ಸ್ಥಾನಗಳಲ್ಲಿ ಗೆಲುವಾಗಿದ್ದರೆ, ಈ ಬಾರಿ 5 ಹೆಚ್ಚುವರಿ ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ.

ಕಾಂಗ್ರೆಸ್ ಸಂಖ್ಯೆ 3 ಕುಸಿತ

ಆದರೆ, ಕಾಂಗ್ರೆಸ್ ಪಕ್ಷವು 11 ಸ್ಥಾನಗಳನ್ನು ಗೆಲ್ಲುವ ಮೂಲಕ, ಬಿಜೆಪಿಗೆ ನೇರ ಪೈಪೋಟಿ ನೀಡುವಲ್ಲಿ ಯಶಸ್ವಿಯಾಗಿದೆ. ಬೆಳಗಾವಿಯಂಥ ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಮಣಿಸಿ ಹೊಸ ಹುಮ್ಮಸ್ಸಿನಲ್ಲಿದೆ. ಕಳೆದ ಬಾರಿ ಕಾಂಗ್ರೆಸ್ 25ರಲ್ಲಿ 14 ಸ್ಥಾನ ಗೆದ್ದಿತ್ತು. ಈ ಬಾರಿ 3 ಸ್ಥಾನಗಳನ್ನು ಕಳೆದುಕೊಂಡಿದೆ.

ಜೆಡಿಎಸ್ ಮೈನಸ್ 2

ಇತ್ತ ಜೆಡಿಎಸ್, ಕೇವಲ 2 ಸ್ಥಾನಕ್ಕಷ್ಟೇ ತೃಪ್ತಿಪಟ್ಟುಕೊಳ್ಳಬೇಕಾಗಿ ಬಂದಿದೆ. ಕಳೆದ ಬಾರಿ 25 ಕ್ಷೇತ್ರಗಳಲ್ಲಿ ಜೆಡಿಎಸ್ ಕೈಯಲ್ಲಿ 4 ಸ್ಥಾನಗಳಿದ್ದವು. ಜಾತ್ಯತೀತ ಜನತಾ ದಳವು ತನ್ನ ಭದ್ರಕೋಟೆ ಎಂದೇ ಹೆಸರಾಗಿದ್ದ ಮಂಡ್ಯ, ತುಮಕೂರು, ಮೈಸೂರು ಭಾಗಗಳಲ್ಲಿ ದಯನೀಯ ಹಿನ್ನಡೆ ಕಂಡಿದೆ. ಗೆದ್ದದ್ದು ಹಾಸನ ಕ್ಷೇತ್ರದಲ್ಲಿ, ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರ ಪುತ್ರ ಸೂರಜ್ ರೇವಣ್ಣ. ಸೂರಜ್ ಅವರು ಗೌಡ ಕುಟುಂಬದಿಂದ ರಾಜಕೀಯಕ್ಕೆ ಕಾಲಿಟ್ಟಿರುವ 8ನೇ ಸದಸ್ಯ.

ಸ್ವತಂತ್ರ ಅಭ್ಯರ್ಥಿಗಳು ಕಳೆದ ಬಾರಿ ಒಬ್ಬರು ಗೆದ್ದಿದ್ದರೆ, ಈ ಬಾರಿಯೂ ಲಖನ್ ಜಾರಕಿಹೊಳಿ ಒಬ್ಬರೇ ಗೆದ್ದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.