ADVERTISEMENT

ವಿಧಾನಪರಿಷತ್‌: ಕಾಂಗ್ರೆಸ್‌ನಿಂದ ನಾಗರಾಜು ಯಾದವ್, ಅಬ್ದುಲ್‌ ಜಬ್ಬಾರ್ ಕಣಕ್ಕೆ

​ಪ್ರಜಾವಾಣಿ ವಾರ್ತೆ
Published 23 ಮೇ 2022, 18:59 IST
Last Updated 23 ಮೇ 2022, 18:59 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಕರ್ನಾಟಕದ ವಿಧಾನ ಸಭೆಯಿಂದ ವಿಧಾನ ಪರಿಷತ್‌ ಸ್ಥಾನಗಳಿಗೆ ನಡೆಯಲಿರುವ ಚುನಾವಣೆಗೆ ಅಭ್ಯರ್ಥಿಗಳನ್ನಾಗಿ ಕೆ.ಅಬ್ದುಲ್‌ ಜಬ್ಬಾರ್‌ ಹಾಗೂ ಎಂ.ನಾಗರಾಜು ಯಾದವ್‌ ಹೆಸರು ಪ್ರಕಟಿಸುವ ಮೂಲಕ ಕಾಂಗ್ರೆಸ್‌ ಹೈಕಮಾಂಡ್‌ ಅಚ್ಚರಿ ಮೂಡಿಸಿದೆ.

ತಾವು ಸೂಚಿಸಿದ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕೆಂದು ಪರಸ್ಪರ ಮೇಲಾಟ ನಡೆಸಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಹೈಕಮಾಂಡ್‌ನ ಈ ನಡೆಯಿಂದ ತೀವ್ರ ಹಿನ್ನಡೆ ಆಗಿದೆ ಎಂದು ಪಕ್ಷದ ವಲಯದಲ್ಲಿ ವ್ಯಾಖ್ಯಾನಿಸಲಾಗಿದೆ.

ಒಟ್ಟು 7 ಸ್ಥಾನಗಳ ಪೈಕಿ ಕಾಂಗ್ರೆಸ್‌ ಪಾಲಿಗೆ 2 ಸ್ಥಾನಗಳನ್ನು ಮಾತ್ರ ಗೆಲ್ಲು ವುದಕ್ಕೆ ಸಾಧ್ಯವಿದೆ. ಈ ಎರಡು ಸ್ಥಾನಗಳಿಗೆ ಪಕ್ಷದ ಅಲ್ಪಸಂಖ್ಯಾತರ ರಾಜ್ಯ ಘಟಕದ ಅಧ್ಯಕ್ಷ ಕೆ.ಅಬ್ದುಲ್‌ ಜಬ್ಬಾರ್‌ ಹಾಗೂ ಬಿಎಂಟಿಸಿ ಮಾಜಿ ಅಧ್ಯಕ್ಷ ಎಂ.ನಾಗರಾಜು ಯಾದವ್‌ ಅವರಿಗೆ ಸೋಮವಾರ ಟಿಕೆಟ್‌ ಘೋಷಿ ಸಲಾಯಿತು.

ADVERTISEMENT

ಅಬ್ದುಲ್‌ ಜಬ್ಬಾರ್‌ ಅವರು ಈ ಹಿಂದೆ ಪರಿಷತ್‌ ಸದಸ್ಯರಾಗಿದ್ದರೆ, ಯಾದವ್‌ ಅವರು ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಅವಧಿಯಲ್ಲಿ ಬಿಎಂಟಿಸಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.ಟಿಕೆಟ್‌ಗಾಗಿ ಪಕ್ಷದಲ್ಲಿ ಭಾರಿ ಪೈಪೋಟಿ ಏರ್ಪಟ್ಟಿತ್ತು. ಟಿಕೆಟ್‌ ನಿರೀಕ್ಷೆಯಲ್ಲಿದ್ದ ಹಿರಿಯ ಮುಖಂಡ, ಪರಿಷತ್‌ನ ಮಾಜಿ ಸದಸ್ಯ ಎಸ್‌.ಆರ್‌. ಪಾಟೀಲ ಮತ್ತಿತರರಿಗೆ ತೀವ್ರ ನಿರಾಸೆ ಆದಂತಾಗಿದೆ. ವಿಧಾನಸಭೆಯಿಂದ ವಿಧಾನಪರಿಷತ್‌ಗೆ ಸದಸ್ಯರನ್ನು ಆಯ್ಕೆ ಮಾಡುವ ಸಂಬಂಧ ನಾಮಪತ್ರ ಸಲ್ಲಿಕೆಗೆ ಮಂಗಳವಾರ ಕೊನೆಯ ದಿನವಾಗಿದೆ.

ಮಣೆ ಹಾಕದ ವರಿಷ್ಠರು: ಮಾಜಿ ಸಚಿವ ಎಂ.ಆರ್‌. ಸೀತಾರಾಮ್‌ ಅಥವಾ ಐವಾನ್‌ ಡಿಸೋಜಾ ಅವರ ಪರ ಒಲವು ತೋರಿದ್ದ ಸಿದ್ದರಾಮಯ್ಯ ಅವರ ಮಾತು ನಡೆಯಲಿಲ್ಲ. ಮತ್ತೊಂದೆಡೆ ಕೇಂದ್ರದ ಮಾಜಿ ಸಚಿವ ರೆಹಮಾನ್‌ ಖಾನ್‌ ಅವರ ಪುತ್ರ ಮನ್ಸೂರ್‌ ಅಲಿ ಖಾನ್‌ ಹಾಗೂ ಎಸ್‌.ಆರ್‌. ಪಾಟೀಲ ಅವರ ಪರ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ಕೊನೆ ಕ್ಷಣದವರೆಗೂ ನಡೆಸಿದ ಪ್ರಯತ್ನ ಫಲಿಸಿಲ್ಲ.

ಮುಸ್ಲಿಂ ಸಮುದಾಯವು ಎಸ್‌ಡಿಪಿಐ ಪರ ವಾಲುವ ಸಾಧ್ಯತೆಯನ್ನು ಮನಗಂಡ ವರಿಷ್ಠರು, ಅಲ್ಪಸಂಖ್ಯಾತ ಘಟಕದ ರಾಜ್ಯ ಅಧ್ಯಕ್ಷ ಕೆ.ಅಬ್ದುಲ್‌ ಜಬ್ಬಾರ್‌ ಅವರ ಪರ ಒಲವು ತೋರಿದ್ದಾರೆ.ಹಿಂದುಳಿದ ವರ್ಗದ ಮುಖಂಡರನ್ನು ಪಕ್ಷದಲ್ಲೇ ಹಿಡಿದಿಟ್ಟುಕೊಳ್ಳುವ ಪ್ರಯತ್ನವಾಗಿ ಗೊಲ್ಲ ಸಮುದಾಯಕ್ಕೆ ಸೇರಿರುವ ಯಾದವ್‌ ಅವರಿಗೆ ಟಿಕೆಟ್‌ ನೀಡಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಸಾಮೂಹಿಕ ನಾಯಕತ್ವಕ್ಕೆ ಆದ್ಯತೆ ನೀಡಲಾಗುವುದು ಎಂಬ ಸಂದೇಶವನ್ನು ಸಾರಿರುವ ಕಾಂಗ್ರೆಸ್‌ ಹೈಕಮಾಂಡ್‌, ಪರಿಷತ್‌ ಟಿಕೆಟ್ ಹಂಚಿಕೆ ಕಾರಣ ರಾಜ್ಯ ಮುಖಂಡರಲ್ಲಿ ವೈಮನಸ್ಯ ಉಂಟಾಗುವ ಸಾಧ್ಯತೆ ಇದ್ದುದರಿಂದ ಯಾರ ಶಿಫಾರಸ್ಸುಗಳಿಗೂ ಮಹತ್ವ ನೀಡದೇ ಸ್ಪಷ್ಟ ಸಂದೇಶ ರವಾನಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.