ADVERTISEMENT

4,346 ಹುದ್ದೆ ಭರ್ತಿಗೆ ಸಿದ್ದತೆ...: 1 ಲಕ್ಷ ಜನರ ರಕ್ಷಣೆಗೆ 165 ಪೊಲೀಸರು!

18 ಸಾವಿರ ಹುದ್ದೆಗಳು ಖಾಲಿ

ಆದಿತ್ಯ ಕೆ.ಎ
Published 5 ಸೆಪ್ಟೆಂಬರ್ 2025, 23:30 IST
Last Updated 5 ಸೆಪ್ಟೆಂಬರ್ 2025, 23:30 IST
ಎಂ.ಎ.ಸಲೀಂ 
ಎಂ.ಎ.ಸಲೀಂ    

ಬೆಂಗಳೂರು: ಪರಿಶಿಷ್ಟ ಜಾತಿಯ ಒಳಮೀಸಲಾತಿ ಅಳವಡಿಸಿಕೊಂಡು ಹೊಸದಾಗಿ ನೇಮಕಾತಿ ಅಧಿಸೂಚನೆ ಹೊರಡಿಸಬೇಕೆಂದು ರಾಜ್ಯ ಸರ್ಕಾರವು ನೇಮಕಾತಿ ಪ್ರಾಧಿಕಾರಗಳಿಗೆ ಸೂಚಿಸಿದ ಬೆನ್ನಲ್ಲೇ  ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆ ಚಾಲನೆ ಸಿಕ್ಕಿದೆ.

ನೇರ ನೇಮಕಾತಿ ವೇಳೆ ಅನುಸರಿಸಬೇಕಾದ ‘ಪರಿಷ್ಕೃತ ಮೀಸಲಾತಿ ರೋಸ್ಟರ್’ ನಿಗದಿಪಡಿಸಲಾಗಿದ್ದು, ಪೊಲೀಸ್ ಇಲಾಖೆಯಲ್ಲಿ 4,346 ಹುದ್ದೆಗಳ ಭರ್ತಿಗೆ ಸಿದ್ದತೆಗಳು ಆರಂಭವಾಗಿವೆ. 

ಪೊಲೀಸ್‌ ಇಲಾಖೆಯಲ್ಲಿ ವಿವಿಧ ಹಂತದ ಸಿಬ್ಬಂದಿ ಒಳಗೊಂಡು ಒಟ್ಟು 1,11,330 ಮಂಜೂರಾದ ಹುದ್ದೆಗಳಿವೆ. ಆ ಪೈಕಿ 18,581 ಹುದ್ದೆಗಳು ಖಾಲಿ ಇವೆ. ಹೀಗಾಗಿ, ಕರ್ತವ್ಯದಲ್ಲಿರುವ ಸಿಬ್ಬಂದಿ ಹಾಗೂ ಅಧಿಕಾರಿಗಳ ಮೇಲೆ ಒತ್ತಡ ಸೃಷ್ಟಿಯಾಗಿದೆ. ತಕ್ಷಣವೇ ಕೆಲವು ಹುದ್ದೆಗಳನ್ನಾದರೂ ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಂಡು ಸಿಬ್ಬಂದಿ ಮೇಲಿನ ಒತ್ತಡ ಕಡಿಮೆ ಮಾಡಲು ಇಲಾಖೆ ಮುಂದಾಗಿದೆ.

ADVERTISEMENT

ಈ ಸಂಬಂಧ ನೇಮಕಾತಿ ವಿಭಾಗದ (ಪೊಲೀಸ್‌) ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದಿರುವ ರಾಜ್ಯ ಪೊಲೀಸ್ ಮಹಾನಿರ್ದೇಶಕ ಎಂ.ಎ.ಸಲೀಂ, ಒಳಮೀಸಲಾತಿ ಜಾರಿಗೆ ಬಂದಿರುವ ಕಾರಣ ಹುದ್ದೆಗಳನ್ನು ಮರು ಹಂಚಿಕೆ ಮಾಡಿ, ಆ ಪಟ್ಟಿಯನ್ನು ನೇಮಕಾತಿ ವಿಭಾಗಕ್ಕೆ ರವಾನಿಸಿದ್ದಾರೆ.

ಸದ್ಯ, ಡಿಟೆಕ್ಟಿವ್ ಸಬ್‌ ಇನ್‌ಸ್ಪೆಕ್ಟರ್‌, ಸಶಸ್ತ್ರ ಪೊಲೀಸ್‌ ಕಾನ್‌ಸ್ಟೆಬಲ್‌, ಸಿವಿಲ್‌ ಪೊಲೀಸ್‌ ಕಾನ್‌ಸ್ಟೆಬಲ್‌, ವಿಶೇಷ ಸಶಸ್ತ್ರ ಪೊಲೀಸ್ ಕಾನ್‌ಸ್ಟೆಬಲ್‌ (ಕೆಎಸ್‌ಆರ್‌ಪಿ), ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ. ಕಲ್ಯಾಣ ಕರ್ನಾಟಕ, ಕಲ್ಯಾಣ ಕರ್ನಾಟಕೇತರ ಭಾಗಕ್ಕೆ ಹುದ್ದೆಗಳನ್ನು ಮರು ಹಂಚಿಕೆ ಮಾಡಲಾಗಿದೆ.

2024ರ ನವೆಂಬರ್‌ನಲ್ಲೂ 4,115 ಹುದ್ದೆಗಳ ನೇಮಕಾತಿಗೆ ಇಲಾಖೆ ಮುಂದಾಗಿತ್ತು. ಆದರೆ, ಒಳಮೀಸಲಾತಿ ನಿಗದಿ ಆಗುವವರೆಗೂ ಹೊಸದಾಗಿ ಯಾವುದೇ ಅಧಿಸೂಚನೆ ಪ್ರಕಟಿಸಬಾರದು ಎಂದು ರಾಜ್ಯ ಸರ್ಕಾರ ಸೂಚಿಸಿತ್ತು. ಹೀಗಾಗಿ ಅಧಿಸೂಚನೆ ಕಾಯ್ದಿರಿಸಲಾಗಿತ್ತು.

‘ಪೊಲೀಸ್ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗ (ಬಿಪಿಆರ್‌ಡಿ) ಪ್ರತಿ ವರ್ಷ ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರ ಮಾಹಿತಿಯನ್ನು ಪ್ರಕಟಿಸುತ್ತದೆ. ಆ ಪ್ರಕಾರ ರಾಜ್ಯದಲ್ಲಿ 1 ಲಕ್ಷ ಜನರಿಗೆ ಕೇವಲ 165 ಪೊಲೀಸರಷ್ಟೇ ಕೆಲಸ ಮಾಡುತ್ತಿದ್ದಾರೆ. ಅಖಿಲ ಭಾರತ ಮಟ್ಟದಲ್ಲಿ ಒಂದು ಲಕ್ಷ ಜನರಿಗೆ 196 ಪೊಲೀಸರಿದ್ದಾರೆ. ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಪೊಲೀಸರಿದ್ದಾರೆ. ಕರ್ನಾಟಕದಲ್ಲೂ ಖಾಲಿ ಹುದ್ದೆಗಳ ಭರ್ತಿಗೆ ಕ್ರಮ ವಹಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಸಿಬ್ಬಂದಿ ಕೊರತೆಯ ಕಾರಣಕ್ಕೆ ವಾರದ ರಜೆಯನ್ನೂ ತ್ಯಾಗ ಮಾಡಿ, ಕೆಲಸ ಮಾಡಬೇಕಾದ ಅನಿವಾರ್ಯ ಸೃಷ್ಟಿಯಾಗಿದೆ’ ಎಂದು ಪೊಲೀಸ್‌ ಸಿಬ್ಬಂದಿ ಅಳಲು ತೋಡಿಕೊಂಡಿದ್ದಾರೆ.  

ರಾಷ್ಟ್ರೀಯ ಸಾಮಾಜಿಕ ನ್ಯಾಯದಳದ ರಾಷ್ಟ್ರೀಯ ಅಧ್ಯಕ್ಷ ಆರ್.ಸ್ಕಂದ ಶರತ್‌ ಅವರು ಕೆಲವು ತಿಂಗಳ ಹಿಂದೆ ಸಲ್ಲಿಸಿದ್ದ ಮನವಿ ಆಧರಿಸಿ, ‘ಪೊಲೀಸ್‌ ಸಿಬ್ಬಂದಿಗೆ ಮೂರು ಪಾಳಿಯಲ್ಲಿ ಕೆಲಸದ ಸಮಯ ನಿಗದಿ ಪಡಿಸುವ ಕುರಿತು ಇಲಾಖೆ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.  

‘ಮೂರು ಪಾಳಿ ಕೆಲಸ ಸಾಧ್ಯವೇ ಎಂಬುದನ್ನು ಪರಿಶೀಲಿಸಿ ವರದಿ ಸಲ್ಲಿಸುವಂತೆ ಗೃಹ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ಜುಲೈನಲ್ಲಿ ಪತ್ರ ಬರೆದಿದ್ದರು. ಆ ಕುರಿತು ಪರಿಶೀಲನೆ ನಡೆಯುತ್ತಿದೆ. ಪ್ರಸ್ತುತ ಸಿಬ್ಬಂದಿ ಎರಡು ಪಾಳಿಯಲ್ಲಿ (12 ತಾಸು) ಕೆಲಸ ಮಾಡುತ್ತಿದ್ದಾರೆ. ಸಿಬ್ಬಂದಿ ಕೊರತೆಯಿರುವ ಕಾರಣಕ್ಕೆ ಈಗಿನ ಸ್ಥಿತಿಯಲ್ಲಿ ಮೂರು ಪಾಳಿಯಲ್ಲಿ (ಎಂಟು ತಾಸು) ಕೆಲಸ ನಿಗದಿ ಪಡಿಸುವುದು ಕಷ್ಟ’ ಎಂದು ಇಲಾಖೆ ಮೂಲಗಳು ಹೇಳಿವೆ.

ಕ್ರೀಡಾ ಮೀಸಲಾತಿ ಸೇರಿ ಸಂಬಂಧಿಸಿದ ಘಟಕಗಳಿಂದ ವರ್ಗೀಕರಣದ ಮಾಹಿತಿ ಪಡೆದು ಹುದ್ದೆಗಳ ಭರ್ತಿಗೆ ಪ್ರಕ್ರಿಯೆ ಆರಂಭಿಸಲಾಗಿದೆ. ಶೀಘ್ರ ಅಧಿಸೂಚನೆ ಪ್ರಕಟವಾಗಲಿದೆ.
–ಎಂ.ಎ.ಸಲೀಂ, ರಾಜ್ಯ ಪೊಲೀಸ್ ಮಹಾನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.