ADVERTISEMENT

RSS ನೋಂದಣಿಯಾಗಿಲ್ಲ: ಇದೊಂದು ಭೂಗತ ಸಂಘಟನೆ ಅಲ್ಲವೇ; BL ಸಂತೋಷ್‌ಗೆ ಹರಿಪ್ರಸಾದ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಅಕ್ಟೋಬರ್ 2025, 7:42 IST
Last Updated 19 ಅಕ್ಟೋಬರ್ 2025, 7:42 IST
<div class="paragraphs"><p>ಬಿ.ಎಲ್. ಸಂತೋಷ್‌ ಮತ್ತು&nbsp;&nbsp;ಬಿ.ಕೆ. ಹರಿ‍ಪ್ರಸಾದ್</p></div>

ಬಿ.ಎಲ್. ಸಂತೋಷ್‌ ಮತ್ತು  ಬಿ.ಕೆ. ಹರಿ‍ಪ್ರಸಾದ್

   

ಬೆಂಗಳೂರು: ಸರ್ಕಾರಿ ಸ್ಥಳಗಳಲ್ಲಿ ಶಾಖೆ, ಸಾಂಘಿಕ್ ಅಥವಾ ಬೈಠಕ್ ಹೆಸರಿನಲ್ಲಿ ಆರ್‌ಎಸ್‌ಎಸ್‌ ನಡೆಸುವ ಎಲ್ಲ ಬಗೆಯ ಚಟುವಟಿಕೆಗಳಿಗೂ ನಿಷೇಧ ಹೇರಬೇಕೆಂಬ ವಿಚಾರ ಆಡಳಿತಾರೂಢ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ರಾಜಕೀಯ ಜಟಾಪಟಿಗೆ ಕಾರಣವಾಗಿದೆ.

‘ಬಿ.ಎಲ್. ಸಂತೋಷ್‌ ಅವರೇ, ಕೈಯಲ್ಲಿ ದೊಣ್ಣೆ ಹಿಡಿದು ಜನರಲ್ಲಿ ಭಯ ಹುಟ್ಟಿಸಬಹುದೇ ಹೊರತು ಭರವಸೆ ಮೂಡಿಸಲು ಸಾಧ್ಯವಿಲ್ಲ. ದೇಶದ ಜನರಲ್ಲಿ ಆತ್ಮವಿಸ್ವಾಸ, ಧೈರ್ಯ, ಭರವಸೆ ಮೂಡಿಸಿರುವುದು ಬಾಬಾ ಸಾಹೇಬರು ನೀಡಿರುವ ಸಂವಿಧಾನದಿಂದ ಮಾತ್ರ. ಪಥಸಂಚಲನ ಸಾಗುವ ದ್ವೇಷದ ಬೀದಿಯಲ್ಲಿ ಪ್ರೀತಿ ಹುಟ್ಟವುದಾದರೂ ಹೇಗೆ?, ದೊಣ್ಣೆ, ಲಾಠಿ, ಬೂಟಿನ ಪಥಸಂಚಲನದಿಂದ ಸಮಾಜದಲ್ಲಿ ಭಯ, ದ್ವೇಷದ ವಾತಾವರಣ ಸೃಷ್ಟಿಸಲಾಗುತ್ತಿದೆ. ಪಥಸಂಚಲನದ ಉದ್ದೇಶವೇ ಭಯದ ವಾತಾವರಣದ ನಿರ್ಮಾಣ ಎನ್ನುವುದು ಸ್ಪಷ್ಟ’ ಎಂದು ವಿಧಾನ ಪರಿಷತ್‌ ಸದಸ್ಯ ಬಿ.ಕೆ. ಹರಿ‍ಪ್ರಸಾದ್ ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿದ್ದಾರೆ.

ADVERTISEMENT

‘ಆರ್‌ಎಸ್‌ಎಸ್‌ ‘ಪೇಯ್ಡ್’ ಸಂಘಟನೆಯಲ್ಲ ಎಂದಾದರೇ ದೇಶ-ವಿದೇಶಿ ಮೂಲದಿಂದಲೂ ಹರಿದು ಬರುತ್ತಿರುವ ಹಣಕ್ಕೆ ಹೊಣೆ ಯಾರು?, ಸಮಾಜ ಸೇವೆ ಮಾಡಲು ಆರ್‌ಎಸ್‌ಎಸ್‌ ಸರ್ಕಾರಿ ಸಂಸ್ಥೆಯೂ ಅಲ್ಲ, ಸರ್ಕಾರೇತರ ಸಂಸ್ಥೆಯೂ ಅಲ್ಲ, ಕನಿಷ್ಟ ನೊಂದಾವಣಿಯೂ ಆಗಿಲ್ಲ. ಹಾಗಾದರೆ ಇದೊಂದು ಭೂಗತ ಸಂಘಟನೆ ಅಲ್ಲವೇ?, ವಿದೇಶದಿಂದ ಆರ್‌ಎಸ್‌ಎಸ್‌ಗೆ ಮಾತ್ರ ಹಣ ಬರಲಿ ಎಂಬ ಕಾರಣಕ್ಕಾಗಿಯೇ ಅಲ್ಲವೇ ಎನ್‌ಜಿಓಗಳಿಗೆ ವಿದೇಶಿ ಫಂಡ್ ಬರುವುದನ್ನು ನಿಲ್ಲಿಸಿರುವುದು’ ಎಂದು ಅವರು ಪ್ರಶ್ನಿಸಿದ್ದಾರೆ.

‘ನೂರು ವರ್ಷದ ಇತಿಹಾಸದಲ್ಲಿ ದೊಣ್ಣೆ ಹಿಡಿದು ಸಾಗಿರುವ ಪಥಸಂಚಲನದಿಂದ ಸಮಾಜಕ್ಕೆ ಆಗಿರುವ ಲಾಭವೇನು?, ಹಾದಿ ಬೀದಿಯಲ್ಲಿ ದೊಣ್ಣೆ ಹಿಡಿದು ಶಾಂತಿ-ಸುವ್ಯವಸ್ಥೆಯನ್ನು ಹಾಳು ಮಾಡಿದ್ದೇ ಸಾಧನೆಯೇ?, ದೊಣ್ಣೆ ಜನರ ಕೈಗೆ ಸಿಕ್ಕಿ ಬಡಿಸಿಕೊಳ್ಳಬೇಡಿ, ಬೇಗ ಎಚ್ಚೆತ್ತುಕೊಳ್ಳದಿದ್ದರೇ ಸಂಘಕ್ಕೆ ಉಳಿಗಾಲವಿಲ್ಲ’ ಎಂದು ಹರಿ‍ಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ.

ಸರ್ಕಾರಿ ಸ್ಥಳಗಳಲ್ಲಿ ಆರ್‌ಎಸ್‌ಎಸ್‌ ನಡೆಸುವ ಎಲ್ಲ ಬಗೆಯ ಚಟುವಟಿಕೆಗಳಿಗೂ ನಿಷೇಧ ಹೇರಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ ರಾಜ್​ ಸಚಿವ ಪ್ರಿಯಾಂಕ್ ಖರ್ಗೆ ಅ. 4ರಂದು ಪತ್ರ ಬರೆದಿದ್ದರು.

ಈ ಹಿನ್ನೆಲೆಯಲ್ಲಿ ಸರ್ಕಾರಿ ಸ್ಥಳಗಳಲ್ಲಿ ಆರ್‌ಎಸ್‌ಎಸ್‌ ಚಟುವಟಿಕೆಗಳಿಗೆ ನಿಷೇಧ ಹೇರುವ ಕುರಿತಂತೆ ಪರಿಶೀಲಿಸಿ, ಕೂಡಲೇ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚನೆ ನೀಡಿದ್ದರು.

ಆರ್‌ಎಸ್‌ಎಸ್‌ ಸಂಘಟನೆಗೆ ನೂರು ವರ್ಷ ತುಂಬಿದ ಸಂಭ್ರಮಾಚರಣೆ ಸಂದರ್ಭದಲ್ಲೇ ರಾಜ್ಯದಲ್ಲಿ ಅದರ ಚಟುವಟಿಕೆಗೆ ಅಂಕುಶ ಹಾಕುವಂತೆ ಪ್ರಿಯಾಂಕ್‌ ಬರೆದ ಪತ್ರ ಮತ್ತು ಮುಖ್ಯಮಂತ್ರಿ ನೀಡಿರುವ ಸೂಚನೆ ಬಿಜೆಪಿ ನಾಯಕರನ್ನು ಕೆರಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.