ADVERTISEMENT

ರಾಜ್ಯದಾದ್ಯಂತ 1ರಿಂದ 5ರವರೆಗಿನ ತರಗತಿಗಳು ಪುನರಾರಂಭ: ಶಾಲೆಗಳಲ್ಲಿ ಮಕ್ಕಳ ಕಲರವ

ಬಿಕೋ ಎನ್ನುತ್ತಿದ್ದ ವಾತಾವರಣದಲ್ಲಿ ಮತ್ತೆ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2021, 7:45 IST
Last Updated 25 ಅಕ್ಟೋಬರ್ 2021, 7:45 IST
ಕಲಬುರಗಿಯ ಶಾಲೆಯೊಂದರಲ್ಲಿ ಮಕ್ಕಳಿಗೆ ಸ್ವಾಗತ – ಪ್ರಜಾವಾಣಿ ಚಿತ್ರ
ಕಲಬುರಗಿಯ ಶಾಲೆಯೊಂದರಲ್ಲಿ ಮಕ್ಕಳಿಗೆ ಸ್ವಾಗತ – ಪ್ರಜಾವಾಣಿ ಚಿತ್ರ   

ಬೆಂಗಳೂರು: ಮಕ್ಕಳ ಕಲರವವಿಲ್ಲದೆ, ಶಿಕ್ಷಕರ ಗಂಭೀರ ಸ್ವರವಿಲ್ಲದೆ ಸ್ತಬ್ಧವಾಗಿದ್ದ ಶಾಲೆಗಳಲ್ಲಿ ಕಲಿಕೆ– ಬೋಧನಾ ಚಟುವಟಿಗೆ ಮತ್ತೆ ಗರಿಗೆದರಿದೆ. ಬಿಕೋ ಎನ್ನುತ್ತಿದ್ದ ವಾತಾವರಣದಲ್ಲಿ ಮೊದಲಿನ ಕಳೆ ಮರಳಿದೆ.

ರಾಜ್ಯದಾದ್ಯಂತ ಪ್ರಾಥಮಿಕ, ಪ್ರೌಢ ಶಾಲೆಗಳಲ್ಲಿ 1ರಿಂದ 5ರವರೆಗೆ ಭೌತಿಕ ತರಗತಿಗಳು ಸೋಮವಾರ (ಅ. 25) ಆರಂಭವಾಗಿವೆ. ಕೋವಿಡ್ ಸಾಂಕ್ರಾಮಿಕ ಕಾರಣ ಒಂದು ವರ್ಷ ಎಂಟು ತಿಂಗಳಿನಿಂದ ಮುಚ್ಚಿದ್ದ ತರಗತಿಯ ಕೊಠಡಿಗಳು ಮತ್ತೆ ತೆರೆದುಕೊಂಡಿವೆ.

ಎಲ್ಲ ಶಾಲೆಗಳಲ್ಲಿ ಶನಿವಾರ ಮತ್ತು ಭಾನುವಾರವೇ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗಿತ್ತು. ಅಂತರ ಕಾಯ್ದುಕೊಳ್ಳಲು ವೃತ್ತಾಕಾರದಲ್ಲಿ ಗುರುತುಗಳನ್ನು ಮಾಡಲಾಗಿತ್ತು. ಶಾಲೆಗಳ ದ್ವಾರಗಳನ್ನು ತಳಿರು ತೋರಣ, ಬಲೂನಿನಿಂದ ಸಿಂಗರಿಸಿ ಅಲಂಕರಿಸಲಾಗಿತ್ತು.

ADVERTISEMENT

ಸೋಮವಾರ ಬೆಳಿಗ್ಗೆ ಶಾಲೆಯ ಪ್ರವೇಶದ್ವಾರದಲ್ಲಿ ಮಕ್ಕಳ ದೇಹದ ಉಷ್ಣತೆ ಪರೀಕ್ಷಿಸಿ ಬಳಿಕ ಒಳಗೆ ಬಿಡಲಾಯಿತು. ಕೆಲವು ಕಡೆ ಮಕ್ಕಳ ಮೇಲೆ ಶಿಕ್ಷಕರು ಪುಷ್ಪಾರ್ಚನೆ ಮಾಡಿದರೆ, ಬಾಂಡ್‌, ವಾದನದ ಮೂಲಕವೂ ಬರಮಾಡಿಕೊಂಡರು. ಮಹಿಳೆಯರು‌ ಕಲಶ ಹೊತ್ತು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ಮಕ್ಕಳಿಗೆ ಶಿಕ್ಷಕರು ಗುಲಾಬಿ ಹೂವು, ಸಿಹಿ ನೀಡಿಯೂ ಸ್ವಾಗತಿಸಿದರು.

ಈ ನಡುವೆ, ‘ಮಕ್ಕಳಿಗೂ ಲಸಿಕೆ ಹಾಕಿಸಿದ ನಂತರವೇ ಶಾಲೆ ಆರಂಭಿಸಿದ್ದರೆ ಒಳ್ಳೆಯದಿತ್ತು’ ಎಂದು ಕೆಲವು ಪೋಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ‘ಮನೆಯಲ್ಲಿ ನಾವು ಎಷ್ಟು ಹೇಳಿದರೂ ಮಕ್ಕಳು ಕೇಳುವುದಿಲ್ಲ. ಮಗ್ಗಿ ಕೂಡ ಮರೆತಿದ್ದಾರೆ. ಶಾಲೆ ಆರಂಭವಾಗಿದ್ದು ಒಳ್ಳೆಯದಾದಾಯಿತು’ ಎಂದು ಶಾಲೆ ಆರಂಭಿಸಿದ ಸರ್ಕಾರದ ತೀರ್ಮಾನವನ್ನು ಇನ್ನೂ ಕೆಲವು ಪೋಷಕರು ಸಮರ್ಥಿಸಿದ್ದಾರೆ.

‘ಶಾಲೆ ಶುರುವಾಗಿದ್ದರಿಂದ ಖುಷಿಯಾಗಿದೆ. ನಮ್ಮ ಶಿಕ್ಷಕರು, ಗೆಳೆಯರನ್ನು ಕಾಣಲು ಸಾಧ್ಯವಾಗಿದೆ. ಆನ್ ಲೈನ್ ಪಾಠ ಕೇಳಿ ಸಾಕಾಗಿತ್ತು. ಈಗ ಖುದ್ದು ಅವರಿಂದಲೇ ಪಾಠ ಕೇಳಬಹುದು. ಗೆಳೆಯರೊಂದಿಗೆ ಹರಟೆ ಹೊಡೆಯಬಹುದು. ಆಟ ಆಡಬಹುದು' ಎಂದು ವಿದ್ಯಾರ್ಥಿಗಳು ಖುಷಿ ಹಂಚಿಕೊಂಡಿದ್ದಾರೆ. ‘ಮಕ್ಕಳ ಬರುವಿಕೆಯಿಂದ ಶಾಲೆಗೆ ವಿಶೇಷ ಕಳೆ ಬಂದಿದೆ’ ಎಂದು ಕೆಲವು ಶಿಕ್ಷಕರು ಸಂತಸ ವ್ಯಕ್ತಪಡಿಸಿದ್ದಾರೆ.

ಪೋಷಕರ ಆಯ್ಕೆ: ಶಾಲೆಗೆ ಕಳುಹಿಸುವುದು, ಬಿಡುವುದು ಪೋಷಕರ ಆಯ್ಕೆ. ಮಕ್ಕಳನ್ನು ಶಾಲೆಗೆ ಕಳುಹಿಸುವುದನ್ನು ಕಡ್ಡಾಯಗೊಳಿಸಿಲ್ಲ. ಈಗಾಗಲೇ ಶಾಲೆಗಳಲ್ಲಿ ಆನ್‌ಲೈನ್ ತರಗತಿಗಳು ನಡೆಯುತ್ತಿವೆ. ಅದನ್ನೇ ಮುಂದುವರೆಸಲು ಕೂಡಾ ಅವಕಾಶ ನೀಡಲಾಗಿದೆ.

ಇನ್ನಷ್ಟು...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.