ನಾಪೋಕ್ಲು ಸಮೀಪದ ಪುಲಿಕೋಟು ಗ್ರಾಮದಲ್ಲಿ ಭತ್ತದ ನಾಟಿ ಕೆಲಸ ಬಿರುಸಿನಿಂದ ಸಾಗಿತು
ಹುಬ್ಬಳ್ಳಿ: ಧಾರವಾಡ, ಗದಗ ಜಿಲ್ಲೆಯ ಕೆಲವೆಡೆ ಶನಿವಾರವೂ ಮಳೆಯಾಯಿತು. ಗದಗ ನಗರ ಸೇರಿದಂತೆ ಜಿಲ್ಲೆಯ ಲಕ್ಷ್ಮೇಶ್ವರ, ಗಜೇಂದ್ರಗಡ ಹಾಗೂ ನರೇಗಲ್ ಹೋಬಳಿಯಲ್ಲಿಯೂ ಜೋರು ಮಳೆಯಾಗಿದೆ.
ಉತ್ತರ ಕನ್ನಡ ಜಿಲ್ಲೆಯಾದ್ಯಂತ ಎಡಬಿಡದೆ ಮಳೆ ಸುರಿದಿದ್ದು, ಭಟ್ಕಳ ತಾಲ್ಲೂಕಿನ ಬೇಂಗ್ರೆ ಮತ್ತು ಕಾಯ್ಕಿಣಿ ಗ್ರಾಮಗಳಲ್ಲಿ 13 ಸೆಂ.ಮೀ.,ನಷ್ಟು ಮಳೆ ದಾಖಲಾಗಿದೆ.
ಜಿಲ್ಲೆಯ ಕರಾವಳಿ ಭಾಗ, ಮಲೆನಾಡು ಭಾಗದಲ್ಲಿ ಮಳೆ ವ್ಯಾಪಕವಾಗಿದೆ. ಮುಂದಿನ ಎರಡು ದಿನ ರೆಡ್ ಅಲರ್ಟ್ ಘೋಷಿಸಲಾಗಿದೆ. ಭಾರಿ ಮಳೆಯಿಂದಾಗಿ ದಿಢೀರ್ ಪ್ರವಾಹ ಸ್ಥಿತಿ ಎದುರಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ತಗ್ಗು ಪ್ರದೇಶದಲ್ಲಿನ ಜನರು ಸುರಕ್ಷಿತ ಜಾಗಕ್ಕೆ ಸ್ಥಳಾಂತರಗೊಳ್ಳಲು ಜಿಲ್ಲಾಡಳಿತ ಸೂಚಿಸಿದೆ.
ಮಂಗಳೂರು ವರದಿ:
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು, ಉಳ್ಳಾಲ, ಬಂಟ್ವಾಳ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಶನಿವಾರ ಉತ್ತಮ ಮಳೆ ಸುರಿಯಿತು. ಈ ತಾಲ್ಲೂಕುಗಳ ಶಾಲೆ–ಪಿಯು ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಉಡುಪಿ ಜಿಲ್ಲೆಯಾದ್ಯಂತ ದಿನವಿಡೀ ಮೋಡ ಮುಸುಕಿದ ವಾತಾವರಣವಿತ್ತು. ಸಾಧಾರಣ ಮಳೆ ಸುರಿಯಿತು.
ಚಿಕ್ಕಮಗಳೂರು ಜಿಲ್ಲೆ ಕೊಪ್ಪ, ತರೀಕೆರೆಯಲ್ಲಿ ಉತ್ತಮ ಮಳೆಯಾಗಿದೆ.
ಮಡಿಕೇರಿ ವರದಿ:
ನಗರದಲ್ಲಿ ಬಿರುಸಿನ ಮಳೆ ಶನಿವಾರವೂ ಮುಂದುವರಿದಿದೆ. ಬೆಳಿಗ್ಗೆ ಮತ್ತು ಮಧ್ಯಾಹ್ನ ಜೋರು ಮಳೆ ಸುರಿಯಿತು. ದಿನವಿಡೀ ಸಾಧಾರಣವಾಗಿತ್ತು. ಭಾಗಮಂಡಲ, ಸಂಪಾಜೆ, ನಾಪೋಕ್ಲು ವ್ಯಾಪ್ತಿಯಲ್ಲಿ ಬಿರುಸಿನಿಂದ ಕೂಡಿತ್ತು. ಮಳೆ ಮುಂದುವರಿಯಲಿದೆ ಎಂದು ಮುನ್ಸೂಚನೆ ನೀಡಿರುವ ಹವಾಮಾನ ಇಲಾಖೆ ‘ಆರೆಂಜ್ ಅಲರ್ಟ್’ ಘೋಷಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.