
ವಿಧಾನಸಭೆ ಕಲಾಪ (ಸಂಗ್ರಹ ಚಿತ್ರ)
ಸುವರ್ಣ ವಿಧಾನಸೌಧ (ಬೆಳಗಾವಿ): ದಂಡದ ಮೊತ್ತವನ್ನು ಹೆಚ್ಚಿಸಿ, ಜೈಲು ಶಿಕ್ಷೆಯನ್ನು ಕೈಬಿಡುವ ಉದ್ದೇಶದ ಕರ್ನಾಟಕ ಬಾಡಿಗೆ (ತಿದ್ದುಪಡಿ) ಮಸೂದೆಗೆ ವಿಧಾನಸಭೆ ಅಂಗೀಕಾರ ನೀಡಿತು.
ಮಸೂದೆಯ ಉದ್ದೇಶ ವಿವರಿಸಿದ ಕಂದಾಯ ಸಚಿವ ಕೃಷ್ಣಬೈರೇಗೌಡ, ‘ಕೇಂದ್ರ ಸರ್ಕಾರದ ರೂಪಿಸಿದ ಮಾದರಿ ಮಸೂದೆಗೆ ಕೆಲವು ಸರಳ ತಿದ್ದುಪಡಿ ಮಾಡಲಾಗಿದೆ. ಮೂಲ ಮಸೂದೆಯಲ್ಲಿ ಕಾನೂನು ಉಲ್ಲಂಘಿಸಿದರೆ ಜೈಲು ಶಿಕ್ಷೆ ವಿಧಿಸುವ ಅವಕಾಶವಿತ್ತು. ಅದನ್ನು ಕೈಬಿಡಲಾಗಿದೆ’ ಎಂದು ಹೇಳಿದರು.
ಮಸೂದೆಯ ಕುರಿತು ಮಾತನಾಡಿದ ಬಿಜೆಪಿಯ ಸುರೇಶ್ ಕುಮಾರ್, ಸಣ್ಣಪುಟ್ಟ ಬಾಡಿಗೆದಾರರು ಶೋಷಣೆ ಒಳಗಾಗಿದ್ದಾರೆ. ಅದನ್ನು ತಡೆಯಲು ಮಸೂದೆಯಲ್ಲಿ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಕೃಷ್ಣ ಬೈರೇಗೌಡ, ‘ಇವತ್ತಿಗೂ ಸಣ್ಣ ಪುಟ್ಟ ಬಾಡಿಗೆದಾರರಿಗೆ ಶೋಷಣೆ ಆಗುತ್ತಿದೆ ಎಂಬುದು ನಿಜ. ಅಂತಹವರನ್ನು ರಕ್ಷಿಸಲು ಕಾನೂನಿನಲ್ಲಿ ಅವಕಾಶವಿದೆ. ಆದರೆ, ನಾವು ಈ ಕಾನೂನನ್ನು ಅನುಸರಣೆ ಮಾಡುವುದನ್ನೇ ಮರೆತಿದ್ದೇವೆ. ನಾವೆಲ್ಲರೂ ಒಟ್ಟಾಗಿ ಜನರಲ್ಲಿ ಅರಿವು ಮೂಡಿಸಬೇಕು’ ಎಂದು ಅವರು ಹೇಳಿದರು.
ಅಂಗೀಕೃತಗೊಂಡ ಮಸೂದೆಗಳು
ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ (ತಿದ್ದುಪಡಿ) ಮಸೂದೆ, ಚಂದ್ರಗುತ್ತಿ ಶ್ರೀ ರೇಣುಕಾಂಬ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಮಸೂದೆ, ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಮತ್ತು ಕೆಲವು ಇತರ ಕಾನೂನು (ತಿದ್ದುಪಡಿ) ಮಸೂದೆ, ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ (ತಿದ್ದುಪಡಿ) ಮಸೂದೆ, ಕರ್ನಾಟಕ ಕಾರ್ಮಿಕ ಕಲ್ಯಾಣ ನಿಧಿ (ತಿದ್ದುಪಡಿ) ಮಸೂದೆ, ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ (ಕ್ಷೇಮಾಭಿವೃದ್ಧಿ) (ತಿದ್ದುಪಡಿ) ಮಸೂದೆ, ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ (ಎರಡನೇ ತಿದ್ದುಪಡಿ) ಮಸೂದೆ, ಕರ್ನಾಟಕ ಭೂ ಕಂದಾಯ (ಎರಡನೇ ತಿದ್ದುಪಡಿ) ಮಸೂದೆ ಅಂಗೀಕಾರವಾದವು.
ಮಲೆನಾಡು, ಬಯಲುಸೀಮೆ ಮಂಡಳಿ ಸದಸ್ಯತ್ವಕ್ಕೆ ಅವಕಾಶ
ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ವ್ಯಾಪ್ತಿಯಲ್ಲಿ ಆಯ್ಕೆಯಾದ ಮತ್ತು ಮತದಾರರಾಗಿ ನೋಂದಾಯಿಸಿರುವ ವಿಧಾನ ಪರಿಷತ್ತಿನ ಸದಸ್ಯರನ್ನು ಮಂಡಳಿಯ ಸದಸ್ಯರಾಗಿ ಸೇರಿಸುವ ಉದ್ದೇಶದಿಂದ ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ (ತಿದ್ದುಪಡಿ) ಮಸೂದೆಗೆ ಒಪ್ಪಿಗೆ ನೀಡಲಾಯಿತು.
ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ವ್ಯಾಪ್ತಿಯ ಒಳಗೆ ಚುನಾವಣಾ ಕ್ಷೇತ್ರಗಳನ್ನು ಹೊಂದಿರುವ ಸಂಸತ್ ಮತ್ತು ವಿಧಾನ ಮಂಡಲದ ಸದಸ್ಯರು, ಜಿಲ್ಲಾ ಪಂಚಾಯತ್ ಅಧ್ಯಕ್ಷರು, ರಾಜ್ಯ ಸರ್ಕಾರದಿಂದ 10 ಮಂದಿಯನ್ನು (ಈ ಪೈಕಿ ಇಬ್ಬರು ಎಸ್‌ಸಿ, ಒಬ್ಬರು ಎಸ್‌ಟಿ) ನಾಮನಿರ್ದೇಶನ ಮಾಡಲು, ಬಯಲು ಸೀಮೆಯ ಪ್ರತಿಯೊಂದು ವಿಭಾಗದ ವಿಭಾಗೀಯ ಆಯುಕ್ತರು, ಉಪ ಆಯುಕ್ತರು ಮತ್ತು ಮಂಡಳಿಯ ಕಾರ್ಯದರ್ಶಿಯನ್ನು ಬಯಲುಸೀಮೆ
ಪ್ರದೇಶಾಭಿವೃದ್ಧಿ ಮಂಡಳಿಗೆ ಸದಸ್ಯರನ್ನಾಗಿ ಮಾಡಲು ಅವಕಾಶ ಕಲ್ಪಿಸಲು ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ (ತಿದ್ದುಪಡಿ) ಮಸೂದೆಗೆ ಅನುಮೋದನೆ ನೀಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.