
ಹಾವೇರಿ: ‘ಇಡೀ ದೇಶದ ಜಿಡಿಪಿಯಲ್ಲಿ (ಒಟ್ಟು ದೇಶೀಯ ಉತ್ಪನ್ನ) ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ) ಸಂಗ್ರಹದಲ್ಲೂ ಮುಂದಿದೆ. ಆದರೆ, ಅನುದಾನ ಹಂಚಿಕೆಯಲ್ಲಿ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಅನ್ಯಾಯವಾಗಿದೆ. ಬಿಜೆಪಿ ಸಂಸದರು, ಇದರ ಬಗ್ಗೆ ಬಾಯಿ ಬಿಡುತ್ತಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ಶುಕ್ರವಾರ ‘ರಾಜ್ಯ ಸರ್ಕಾರದ ಸಾವಿರ ದಿನಗಳ ಸಾಧನಾ ಸಮಾವೇಶ’ ಮತ್ತು ‘ಭೂ ಗ್ಯಾರಂಟಿ ಸಮರ್ಪಣಾ ಸಮಾವೇಶ’ ಉದ್ಘಾಟಿಸಿ ಮಾತನಾಡಿದ ಅವರು, ‘ರಾಜ್ಯದಿಂದ ಕೇಂದ್ರಕ್ಕೆ ₹4.50 ಲಕ್ಷ ಕೋಟಿ ತೆರಿಗೆ ಪಾವತಿಯಾಗಿದೆ. ಆದರೆ, ಕೇಂದ್ರವು ರಾಜ್ಯಕ್ಕೆ ಕೇವಲ ₹60 ಸಾವಿರ ಕೋಟಿ ಮಾತ್ರ ನೀಡಿದೆ. ₹ 100 ತೆರಿಗೆ ತುಂಬಿದರೆ, ಅದರಲ್ಲಿ ₹13ರಿಂದ ₹14 ಸಿಗುತ್ತಿದೆ’ ಎಂದರು.
‘ನಿರಂತರ ಅನ್ಯಾಯ ನಡೆಯುತ್ತಿದ್ದರೂ ಸಂಸದರಾದ ಬಸವರಾಜ ಬೊಮ್ಮಾಯಿ, ಪ್ರಲ್ಹಾದ ಜೋಶಿ, ಜಗದೀಶ್ ಶೆಟ್ಟರ್ ಕೇಂದ್ರ ಸರ್ಕಾರವನ್ನು ಪ್ರಶ್ನಿಸುತ್ತಿಲ್ಲ. ಬಾಯಿಬಿಡುತ್ತಿಲ್ಲ. ಅನ್ಯಾಯದ ನಡುವೆಯೂ ನಮ್ಮ ಸರ್ಕಾರ ಅಭಿವೃದ್ಧಿ ಮಾಡುತ್ತಿದೆ’ ಎಂದರು.
‘ನಮ್ಮ ಸರ್ಕಾರ ಬಂದು 2 ವರ್ಷ 9 ತಿಂಗಳಾಯತು. ನಿನ್ನೆಗೆ 1,000 ದಿನವಾಯಿತು. ನುಡಿದಂತೆ ನಡೆದಿದ್ದೇವೆ. ಇಲ್ಲಿಯವರೆಗೂ ಗ್ಯಾರಂಟಿಗಳಿಗೆ ₹1.18 ಲಕ್ಷ ಕೋಟಿ ಗ್ಯಾರಂಟಿ ಯೋಜನೆಗೆ ಖರ್ಚು ಆಗಿದೆ. 1,000 ದಿನಗಳ ಸಮಾವೇಶ ನಮಗೆ ಮೈಲಿಗಲ್ಲು. ಬಡವರ, ಪರಿಶಿಷ್ಟರ, ಹಿಂದುಳಿದವರ, ಅಲ್ಪಸಂಖ್ಯಾತರ, ಕಾರ್ಮಿಕರ, ರೈತರ ಕೆಲಸ ಬದ್ಧತೆಯಿಂದ ಮಾಡುತ್ತೇವೆ’ ಎಂದರು.
ರಾಜ್ಯ ಸರ್ಕಾರವು ಶೂನ್ಯ ಸಾಧನಾ ಸಮಾವೇಶ ಮಾಡಿದೆ. ಇದು ಭ್ರಷ್ಟಾಚಾರದ ಸಾಧನಾ ಸಮಾವೇಶ ಮತ್ತು ಬಡವರ ತಲೆ ಮೇಲೆ ಆರ್ಥಿಕ ಭಾರದ ಹೊಡೆತವನ್ನು ನೀಡುವ ಸಮಾವೇಶಬಸವರಾಜ ಬೊಮ್ಮಾಯಿ ಸಂಸದ
ರಾಜ್ಯ ಸರ್ಕಾರ ಸಾವಿರ ದಿನಗಳ ಸಂಭ್ರಮ ಆಚರಿಸಿದೆ. ಆಡಳಿತದ ಬಗ್ಗೆ ಜನ ಸಂತೃಪ್ತರಾಗಿದ್ದರೆ ಸರ್ಕಾರ ಸಂಭ್ರಮಿಸಬಹುದಿತ್ತು. ಆದರೆ ಜನ ಕಷ್ಟದಲ್ಲಿರುವಾಗ ಕಾಂಗ್ರೆಸ್‌ನವರು ಸಂಭ್ರಮಿಸುತ್ತಿರುವುದು ವಿಕೃತಿಸಿ.ಟಿ. ರವಿ ವಿಧಾನ ಪರಿಷತ್ ಸದಸ್ಯ
‘ರಾಜ್ಯಕ್ಕೆ 7ನೇ ಗ್ಯಾರಂಟಿ ನೀರು’
‘ಪಂಚ ಗ್ಯಾರಂಟಿ ನೀಡಿದ್ದ ನಾವು ಈಗ ಆರನೇ ಗ್ಯಾರಂಟಿಯಾಗಿ ಭೂಮಿ ಕೊಡುತ್ತಿದ್ದೇವೆ. ಮುಂದಿನ 7ನೇ ಗ್ಯಾರಂಟಿಯಾಗಿ ನೀರು ಕೊಡುತ್ತೇವೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಘೋಷಿಸಿದರು. ‘ಕೃಷ್ಣಾ ಮೇಲ್ದಂಡೆ ಯೋಜನೆ ಅನುಷ್ಠಾನಕ್ಕಾಗಿ ಭೂಮಿ ಕಳೆದುಕೊಳ್ಳುವ ರೈತರಿಗೆ ಎಕರೆಗೆ ₹35 ಲಕ್ಷದಿಂದ ₹ 40 ಲಕ್ಷ ಪರಿಹಾರ ನೀಡಲು ತೀರ್ಮಾನಿಸಿದ್ದೇವೆ. ರಾಜ್ಯದ ಕೃಷ್ಣಾ ಮೇಲ್ದಂಡೆ ಮೇಕೆದಾಟು ಮಹದಾಯಿ ಎತ್ತಿನಹೊಳೆ ನೀರಾವರಿ ಯೋಜನೆಗೆ ಕೇಂದ್ರ ಸರ್ಕಾರವು ಅನುಮತಿ ಕೊಟ್ಟರೆ ಏಳನೇ ಗ್ಯಾರಂಟಿಯಾಗಿ ನೀರನ್ನು ನೀಡುತ್ತೇವೆ’ ಎಂದು ಅವರು ಹೇಳಿದರು. ‘ಚುನಾವಣೆಯಲ್ಲಿ ನಮಗೆ 136 ಸೀಟುಗಳು ಬಂದಿದ್ದವು. ಮುಂದಿನ ಚುನಾವಣೆಯಲ್ಲಿ ನಮಗೆ 141 ಸೀಟುಗಳು ಬರಲಿವೆ. ನನ್ನ ಈ ಮಾತನ್ನು ಬರೆದಿಟ್ಟುಕೊಳ್ಳಿ. ನನಗೆ ನಮ್ಮ ಶಾಸಕರಿಗೆ ಆತ್ಮವಿಶ್ವಾಸವಿದೆ’ ಎಂದು ಶಿವಕುಮಾರ ಹೇಳಿದರು. ‘ಜನರು ನೆಮ್ಮದಿಯಿಂದ ಬದುಕುತ್ತಿರುವುದು ಮಹಿಳೆಯರು ಸಂತೋಷದಿಂದ ಬಸ್‌ನಲ್ಲಿ ಪ್ರಯಾಣಿಸುತ್ತಿರುವುದು ಗೃಹಿಣಿಯರ ಬದುಕಿನಲ್ಲಿ ಬದಲಾವಣೆ ಆಗಿರುವುದು ಯುವಕರು ಉದ್ಯೋಗ ಸೃಷ್ಟಿ ಮಾಡಿಕೊಳ್ಳುತ್ತಿರುವ ದಿನಗಳನ್ನು ನಾವು ನೋಡುತ್ತಿದ್ದೇವೆ. ಬಿಜೆಪಿಯವರು ತಮ್ಮ ಆಡಳಿತ ಅವಧಿಯಲ್ಲಿ ಇಂಥ ಒಂದು ಕೆಲಸವನ್ನೂ ಮಾಡಲಿಲ್ಲ ಅವರಿಗೆ ಮಾತನಾಡುವ ಹಕ್ಕು ಇಲ್ಲ’ ಎಂದರು.
ಸಿಎಂ ಮೂರ್ತಿ ಅನಾವರಣಗೊಳಿಸಿದ ಡಿಸಿಎಂ
ಶಿಗ್ಗಾವಿ ತಾಲ್ಲೂಕಿನ ಗೊಟಗೋಡಿಯ ಉತ್ಸವ ರಾಕ್ ಗಾರ್ಡನ್‌ನವರು ಸಿದ್ಧಪಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಿಮೆಂಟ್ ಮೂರ್ತಿಯನ್ನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಅನಾವರಣಗೊಳಿಸಿದರು. ಬೆಳಿಗ್ಗೆ ಸಿದ್ದರಾಮಯ್ಯ ಅವರು ಬರುತ್ತಿದ್ದಂತೆಯೇ ಸಮಾವೇಶ ಶುರುವಾಯಿತು. ತಡವಾಗಿ ಬಂದ ಡಿ.ಕೆ. ಶಿವಕುಮಾರ ವೇದಿಕೆಯಲ್ಲಿದ್ದ ಎಲ್ಲರನ್ನೂ ಮಾತನಾಡಿಸಿ ದರು. ಆದರೆ ಮುಖ್ಯಮಂತ್ರಿ ಅವರನ್ನು ಮಾತನಾಡಿಸದೇ ಅವರ ಪಕ್ಕವೇ ಹೋಗಿ ಕೂತರು. ಕೆಲ ನಿಮಿಷಗಳ ಬಳಿಕ ಮಾತನಾಡಿದರು. ಮೂರ್ತಿ ಅನಾವರಣ ವೇಳೆ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಇಬ್ಬರೂ ನಗುತ್ತ ಮಾತನಾಡಿದರು. ನಂತರ ಡಿ.ಕೆ. ಶಿವಕುಮಾರ ಭಾಷಣ ಮಾಡಿದರು. ಸಿದ್ದರಾಮಯ್ಯ ಅವರು ಭಾಷಣ ಮಾಡಲು ಮುಂದಾದಾಗ ಶಿವಕುಮಾರ ವೇದಿಕೆಯಿಂದ ಇಳಿದು ಹೊರಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.