
ಸುವರ್ಣ ವಿಧಾನಸೌಧ (ಬೆಳಗಾವಿ): ‘ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ’ಯ ಒಂದು ಘಟಕವಾಗಿ ಆರಂಭಿಸಿರುವ ‘ಮೂಲ ಆದಿವಾಸಿ ಅಧ್ಯಯನ ಕೇಂದ್ರ’ಕ್ಕೆ ಅಗತ್ಯ ಅನುದಾನವನ್ನು ಒದಗಿಸಬೇಕು ಎಂದು ವಿಧಾನ ಪರಿಷತ್ತಿನಲ್ಲಿ ಕಾಂಗ್ರೆಸ್ ಸದಸ್ಯ ಎಸ್.ರವಿ ಒತ್ತಾಯಿಸಿದರು.
ಈ ಸಂಬಂಧ ಅವರು ಕೇಳಿದ್ದ ಚುಕ್ಕೆ ಗುರುತಿನ ಪ್ರಶ್ನೆಗೆ ಮುಖ್ಯಮಂತ್ರಿ ಅವರ ಪರವಾಗಿ ಸಭಾನಾಯಕ ಎನ್.ಎಸ್.ಬೋಸರಾಜು ಅವರು ಉತ್ತರ ನೀಡಿದರು. ‘ಈ ಘಟಕಕ್ಕೆ 2015ರಿಂದ ಈವರೆಗೆ ₹1.88 ಕೋಟಿ ವೆಚ್ಚ ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು.
ರವಿ ಅವರು, ‘ಈ ಬಾರಿ ಬಜೆಟ್‌ನಲ್ಲಿ ದೊಡ್ಡ ಮೊತ್ತದ ಅನುದಾನ ಘೋಷಿಸಿದ್ದೀರಿ. ಅದನ್ನು ಬಿಡುಗಡೆ ಮಾಡಿ, ₹3 ಕೋಟಿ ಅನುದಾನ ಒದಗಿಸಿ. ಆದಿವಾಸಿ ಸಮುದಾಯಗಳ ಜನರ ಆರೋಗ್ಯ, ಶಿಕ್ಷಣ, ಜೀವನೋಪಾಯಕ್ಕಾಗಿ ಈ ಅನುದಾನದ ಅಗತ್ಯವಿದೆ’ ಎಂದು ಪಟ್ಟು ಹಿಡಿದರು. ಬಿಜೆಪಿಯ ಶಾಂತರಾಮ ಬುಡ್ನ ಸಿದ್ದಿ ಅವರು ದನಿಗೂಡಿಸಿದರು.
ಬೋಸರಾಜು, ‘ನಿಯಮಾನುಸಾರ ಕ್ರಮ ತೆಗೆದುಕೊಳ್ಳುತ್ತೇವೆ’ ಎಂದರು. ಆದರೆ ರವಿ ಅವರು ತಮ್ಮ ಪಟ್ಟು ಬಿಡಲಿಲ್ಲ. ಆಗ ಸಭಾಪತಿ ಬಸವರಾಜ ಹೊರಟ್ಟಿ ಅವರು, ‘ಇದು ತುಂಬಾ ಗಂಭೀರವಾದ ವಿಚಾರ. ಈ ಬಗ್ಗೆ ಮುಖ್ಯಮಂತ್ರಿ ಅವರ ಜತೆಗೆ ಚರ್ಚಿಸಿ, ಅನುದಾನ ಬಿಡುಗಡೆಗೆ ಕ್ರಮ ತೆಗೆದುಕೊಳ್ಳಿ’ ಎಂದು ಸಭಾನಾಯಕ ಅವರಿಗೆ ಸೂಚಿಸಿದರು.