ADVERTISEMENT

VIDEO | ಕೆಪಿಸಿಸಿ ಅಧ್ಯಕ್ಷರು RSS ಗೀತೆ ಹಾಡುವುದು ತಪ್ಪು: ಹರಿಪ್ರಸಾದ್‌

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2025, 14:23 IST
Last Updated 25 ಆಗಸ್ಟ್ 2025, 14:23 IST
<div class="paragraphs"><p>ಬಿ.ಕೆ.ಹರಿಪ್ರಸಾದ್‌, ವಿಧಾನ ಪರಿಷತ್‌ ಸದಸ್ಯ</p></div>

ಬಿ.ಕೆ.ಹರಿಪ್ರಸಾದ್‌, ವಿಧಾನ ಪರಿಷತ್‌ ಸದಸ್ಯ

   

ನವದೆಹಲಿ: ‘ಕೆಪಿಸಿಸಿ ಅಧ್ಯಕ್ಷರು ಆರ್‌ಎಸ್‌ಎಸ್‌ ಗೀತೆ ಹಾಡುವುದು ತಪ್ಪು. ಡಿ.ಕೆ.ಶಿವಕುಮಾರ್‌ ಅವರು ಕೆಪಿಸಿಸಿ ಅಧ್ಯಕ್ಷರಾಗಿ ಹಾಡಿದ್ದರೆ ಕ್ಷಮೆಯಾಚಿಸಬೇಕು’ ಎಂದು ಕಾಂಗ್ರೆಸ್‌ನ ಹರಿಯಾಣ ಉಸ್ತುವಾರಿ ಬಿ.ಕೆ. ಹರಿಪ್ರಸಾದ್‌ ಆಗ್ರಹಿಸಿದರು. 

ಸೋಮವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಶಿವಕುಮಾರ್‌ ಅವರು ಉಪಮುಖ್ಯಮಂತ್ರಿಯಾಗಿ ಸಂಘದ ಗೀತೆ ಹಾಡುವುದಕ್ಕೆ ನಮ್ಮ ಅಭ್ಯಂತರ ಇಲ್ಲ. ಸರ್ಕಾರ ಕಾಂಗ್ರೆಸ್‌ ಪಕ್ಷಕ್ಕೆ ಮಾತ್ರ ಸೀಮಿತ ಅಲ್ಲ. ಅದು ಏಳು ಕೋಟಿ ಜನರ ಸ್ವತ್ತು. ಅಲ್ಲಿ ಒಳ್ಳೆಯವರು ಸೇರಿದಂತೆ ಎಲ್ಲ ಬಗೆಯ ಜನರು ಇರುತ್ತಾರೆ. ಆರ್‌ಎಸ್‌ಎಸ್‌, ತಾಲಿಬಾನ್‌ಗಳು ಕೂಡ ಇರುತ್ತಾರೆ’ ಎಂದು ವ್ಯಾಖ್ಯಾನಿಸಿದರು. 

ADVERTISEMENT

‘ಮಹಾತ್ಮ ಗಾಂಧಿ ಅವರನ್ನು ಕೊಲೆ ಮಾಡಿದವರು ಆರ್‌ಎಸ್‌ಎಸ್‌ನವರು. ದೇಶದಲ್ಲಿ ಮೂರು ಸಲ ಈ ಸಂಘವನ್ನು ನಿಷೇಧಿಸಲಾಗಿತ್ತು. ಯಾರಿಗೆ ಸಂದೇಶ ನೀಡಲು ಶಿವಕುಮಾರ್‌ ಈ ಗೀತೆ ಹಾಡಿದ್ದಾರೆ ಎಂಬುದು ಗೊತ್ತಿಲ್ಲ. ಅವರಿಗೆ ಕೃಷಿಕ, ವ್ಯಾಪಾರಸ್ಥ ಹಾಗೂ ರಾಜಕಾರಣಿ ಸೇರಿದಂತೆ ಹಲವು ಮುಖಗಳಿವೆ. ಅಧ್ಯಕ್ಷರಾಗಿ ಹಾಡಿದ್ದರೆ ಕ್ಷಮೆಯಾಚಿಸುವಂತೆ ಮೊನ್ನೆಯೇ ಒತ್ತಾಯಿಸುತ್ತಿದ್ದೆ’ ಎಂದರು. 

‘ಕಾಂಗ್ರೆಸ್‌ ಪಕ್ಷವು ಬಹಳ ವರ್ಷಗಳಿಂದ ಅನೇಕ ಜನರನ್ನು ನೋಡಿದೆ. ಪಕ್ಷಕ್ಕೆ ಸಾಕಷ್ಟು ಮಂದಿ ಬಂದು ಹೋಗಿದ್ದಾರೆ. ಶಿವಕುಮಾರ್‌ ಅವರು ಬಿಜೆಪಿ ಸೇರುವ ಧೈರ್ಯ ಮಾಡುವುದಿಲ್ಲ ಎಂಬುದು ನನ್ನ ನಂಬಿಕೆ’ ಎಂದರು. 

ಸಂಘದ ಇಬ್ಬರಿಂದ ಧರ್ಮಸ್ಥಳಕ್ಕೆ ಕೆಟ್ಟ ಹೆಸರು: 

‘ಘಟ್ಟದ ಮೇಲೆ ಹಾಗೂ ಘಟ್ಟದ ಕೆಳಗೆ ಇರುವ ಆರ್‌ಎಸ್‌ಎಸ್‌ನ ಇಬ್ಬರು ನಾಯಕರಿಂದ ಧರ್ಮಸ್ಥಳಕ್ಕೆ ಕೆಟ್ಟ ಹೆಸರು ಬರುತ್ತಿದೆ’ ಎಂದು ಹರಿಪ್ರಸಾದ್‌ ಆರೋಪಿಸಿದರು. 

‘ಧರ್ಮಸ್ಥಳದ ವಿಚಾರದಲ್ಲಿ ಮಾಜಿ ಸಂಸದ ನಳಿನ್‌ ಕುಮಾರ್‌ ಕಟೀಲು ಹಾಗೂ ಶಾಸಕ ವಿ.ಸುನೀಲ್‌ ಕುಮಾರ್‌ ಈ ಹಿಂದೆ ನೀಡಿರುವ ಹೇಳಿಕೆಗಳನ್ನು ಗಮನಿಸಿದರೆ ಈ ಸತ್ಯ ಗೊತ್ತಾಗುತ್ತದೆ. ಸೌಜನ್ಯಾ ಪ್ರಕರಣದಲ್ಲಿ ತನಿಖೆ ಆಗಬೇಕೆಂದು ಉಭಯ ನಾಯಕರು ಧರ್ಮಸ್ಥಳದಲ್ಲೇ ಭಾಷಣ ಮಾಡಿದ್ದರು. ಎಸ್‌ಐಟಿ ರಚಿಸಬೇಕು ಎಂದು ಬಿಜೆಪಿಯವರೇ ಒತ್ತಾಯಿಸಿದ್ದರು’ ಎಂದು ಅವರು ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.