
ಮಂಡ್ಯ: ‘ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಕೋರಿಕೆ ಮೇರೆಗೆ ಮಂಡ್ಯ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಕೆ.ಎಸ್. ಪುಟ್ಟಣ್ಣಯ್ಯ ಹೆಸರಲ್ಲಿ ಅಧ್ಯಯನ ಕೇಂದ್ರ ಸ್ಥಾಪಿಸಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಶೇಷಾಧಿಕಾರಿಗೆ ಸೂಚಿಸಿದರು.
ತಾಲ್ಲೂಕಿನ ವಿ.ಸಿ. ಫಾರಂ ಆವರಣದಲ್ಲಿ ಮಂಡ್ಯ ಕೃಷಿ ವಿವಿ ವತಿಯಿಂದ ಶುಕ್ರವಾರ ಆಯೋಜಿಸಿದ್ದ ‘ಕೃಷಿ ಮೇಳ 2025’ ಉದ್ಘಾಟಿಸಿ ಅವರು ಮಾತನಾಡಿದರು.
ಮಂಡ್ಯ ಕೃಷಿ ವಿವಿಯಲ್ಲಿ ‘ಅಂತರರಾಷ್ಟ್ರೀಯ ಸ್ಯಾಂಡ್‌ವಿಚ್ ಸ್ನಾತಕೋತ್ತರ ಪದವಿ’ ಆರಂಭಿಸುವಂತೆ ಕೃಷಿ ವಿಜ್ಞಾನಿಗಳು ಬೇಡಿಕೆ ಇಟ್ಟಿದ್ದಾರೆ. ಈ ಬಗ್ಗೆ ಪ್ರಯತ್ನ ಪಡುತ್ತೇನೆ. ಕೃಷಿ ಕುರಿತಾಗಿ ನನಗೆ ಅಪಾರವಾದ ಕಾಳಜಿ ಇದೆ. ನನ್ನ ನೇತೃತ್ವದ ಕಾಂಗ್ರೆಸ್ ಸರ್ಕಾರ ರೈತರ ಪರವಾಗಿ ಇದೆ’ ಎಂದು ಹೇಳಿದರು.
ಮಂಡ್ಯ ಕೃಷಿ ಪ್ರಧಾನವಾದ ಜಿಲ್ಲೆ. ನಾನು ರಾಜಕೀಯಕ್ಕೆ ಬರುವ ಮೊದಲು ಕೃಷಿಕನಾಗಿದ್ದೆ. ಮೈಸೂರಿನ ರೈತ ಸಂಘದ ಮೊದಲ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದೇನೆ. ರೈತರು ಸಮಗ್ರ ಕೃಷಿ ಪದ್ಧತಿ ಅನುಸರಿಸಬೇಕು, ಯಂತ್ರೋಪಕರಣಗಳನ್ನು ಬಳಸಬೇಕು ಹಾಗೂ ಉತ್ಪನ್ನಗಳನ್ನು ಮೌಲ್ಯವರ್ಧನೆ ಮಾಡಿ ಹೆಚ್ಚಿನ ಆದಾಯ ಪಡೆಯಬಹುದು ಎಂದರು.
ಮಂಡ್ಯದಲ್ಲಿ ಕೃಷಿ ವಿವಿ ಸ್ಥಾಪಿಸಲು ನನ್ನ ಮುಂದೆ ಮೊದಲು ಬೇಡಿಕೆ ಇಟ್ಟವರು ಕೃಷಿ ಸಚಿವರು. ಮಂಡ್ಯ, ಮೈಸೂರು, ಚಾಮರಾಜನಗರ, ಕೊಡಗು ಭಾಗದ ರೈತರಿಗಾಗಿ ಕೃಷಿ ವಿವಿ ಅಗತ್ಯವಿದೆ ಎಂದು ನನಗೂ ಸಹ ತಿಳಿಯಿತು. ನಂತರ ಸದರಿ ವಿಚಾರವನ್ನು ಕ್ಯಾಬಿನೆಟ್‌ನಲ್ಲಿ ಚರ್ಚೆ ಮಾಡಿ, ವಿವಿ ಸ್ಥಾಪಿಸಲಾಯಿತು ಎಂದು ಹೇಳಿದರು.
ಕೇಂದ್ರ ಸರ್ಕಾರ ಕಬ್ಬಿಗೆ ಎಫ್.ಆರ್.ಪಿ ದರ ನಿಗದಿ ಮಾಡಿಲ್ಲ. ನಾವು ಟನ್‌ಗೆ ₹100 ಹೆಚ್ಚಿನ ದರ ನಿಗದಿ ಮಾಡಿದ್ದೇವೆ. ಮೆಕ್ಕೆಜೋಳ ದರ ಹೆಚ್ಚಳಕ್ಕೂ ತೀರ್ಮಾನ ಮಾಡಿದ್ದೇವೆ. ಮಹಾರಾಷ್ಟ್ರದ ಕಬ್ಬಿಗೂ ನಮ್ಮ ರಾಜ್ಯದ ಕಬ್ಬಿನ ಗುಣಮಟ್ಟದಲ್ಲಿ ವ್ಯತ್ಯಾಸವಿದೆ. ಮಂಡ್ಯ ಕೃಷಿ ವಿವಿ ಇದರ ಕುರಿತಾಗಿ ಸಂಶೋಧನೆ ನಡೆಸಿ ಕಬ್ಬಿನ ಗುಣಮಟ್ಟ ಹೆಚ್ಚಿಸಿ ಎಂದು ಸೂಚಿಸಿದರು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ವಿ.ಸಿ.ಫಾರಂನಲ್ಲಿ ಬೆಳೆದ ವಿವಿಧ ತಳಿಗಳನ್ನು ಮತ್ತು ಕೃಷಿ ಪರಿಕರಗಳ ಮಳಿಗೆಗಳನ್ನು ವೀಕ್ಷಿಸಿ, ಸಂತಸ ವ್ಯಕ್ತಪಡಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ಶಾಸಕರಾದ ಪಿ.ರವಿಕುಮಾರ್, ಪಿ.ಎಂ. ನರೇಂದ್ರಸ್ವಾಮಿ, ದರ್ಶನ್ ಪುಟ್ಟಣ್ಣಯ್ಯ ಮುಂತಾದವರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.