ADVERTISEMENT

ಸಂತೋಷವು ಪ್ರಯಾಣಿಸುತ್ತಿದೆ... KSRTC ‘ಪಲ್ಲಕ್ಕಿ’ ನಾಳೆಯಿಂದ ಸಂಚಾರ: ಸಿಎಂ ಚಾಲನೆ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2023, 13:04 IST
Last Updated 6 ಅಕ್ಟೋಬರ್ 2023, 13:04 IST
   

ಬೆಂಗಳೂರು: ಹವಾನಿಯಂತ್ರಿತ ಬಸ್‌ಗಳನ್ನಷ್ಟೇ ಬ್ರ್ಯಾಂಡ್‌ ಮಾಡಿಕೊಳ್ಳುತ್ತಾ ಬಂದಿದ್ದ ಕೆಎಸ್‌ಆರ್‌ಟಿಸಿ ಇದೇ ಮೊದಲ ಬಾರಿಗೆ ಹವಾನಿಯಂತ್ರರಹಿತ ಬಸ್‌ ‘ಪಲ್ಲಕ್ಕಿ’ಯನ್ನು ಕೆಎಸ್‌ಆರ್‌ಟಿಸಿ ಹೊಸ ಬ್ರ್ಯಾಂಡ್‌ ಮಾಡಿ ರಸ್ತೆಗಿಳಿಸುತ್ತಿದೆ. ಅ.7ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡುತ್ತಿದ್ದಾರೆ.

ಒಂದು ತಿಂಗಳ ಹಿಂದೆ 40 ಲೈಲೆಂಡ್‌ ಟ್ರಕ್‌ಗಳು ಬೆಂಗಳೂರಿಗೆ ಬಂದಿದ್ದವು. ಅವುಗಳಿಗೆ ಲೈಲೆಂಡ್‌ ಕಂಪನಿಯವರೇ ಬಾಡಿ ಕಟ್ಟಿದ್ದು, ಈಗ ಸಂಚಾರಕ್ಕೆ ತಯಾರಾಗಿವೆ. ಪ್ರತಿ ಬಸ್‌ಗೆ ₹ 46 ಲಕ್ಷ ವೆಚ್ಚವಾಗಿದ್ದು, ನಿಗಮವೇ ವೆಚ್ಚವನ್ನು ಭರಿಸಿದೆ.

ಮಂಗಳೂರು, ಉಡುಪಿ, ಪುತ್ತೂರು, ಶಿವಮೊಗ್ಗ, ಕಾರವಾರ, ಬೆಳಗಾವಿ, ಹುಬ್ಬಳ್ಳಿ, ಬೀದರ್‌, ಕಲಬುರಗಿ, ರಾಯಚೂರು, ಕೊಪ್ಪಳ, ಯಾದಗಿರಿ ಸಹಿತ ರಾಜ್ಯದ ಬೇರೆ ಬೇರೆ ಊರುಗಳಿಗೆ ಸಂಚರಿಸಲಿವೆ. ಜೊತೆಗೆ ಹೊರರಾಜ್ಯಗಳ ಪಾಂಡಿಚೇರಿ, ಚೆನ್ನೈ, ಕೊಯಮತ್ತೂರು, ಮಂತ್ರಾಲಯ, ಕುಂಭಕೋಣಕ್ಕೆ ಪ್ರಯಾಣಿಸುವವರಿಗೂ ‘ಪಲ್ಲಕ್ಕಿ’ ಬಸ್‌ ಸೌಲಭ್ಯ ಸಿಗಲಿದೆ.

ADVERTISEMENT

100 ಸಾರಿಗೆ ಬಸ್‌: ಈಗಿರುವ ಸಾರಿಗೆ ಬಸ್‌ಗಳಿಗಿಂತ ಉನ್ನತೀಕರಿಸಲಾಗಿರುವ 100 ಸಾರಿಗೆ ಬಸ್‌ಗಳಿಗೂ ಶನಿವಾರ ಚಾಲನೆ ದೊರೆಯಲಿದೆ. ಸೀಟುಗಳ ಸಂಖ್ಯೆ 54/56ರಿಂದ 51ಕ್ಕೆ ಇಳಿಸಲಾಗಿದೆ. ಕಿಟಕಿಗಳನ್ನು, ಎದುರಿನ ಗಾಜುಗಳನ್ನು ದೊಡ್ಡದಾಗಿ ಮಾಡಲಾಗಿದೆ. ಉತ್ತಮ ಸೀಟು ಅಳವಡಿಸಲಾಗಿದೆ. ‍ಎಲ್ಲ ಜಿಲ್ಲೆಗಳಿಗೆ ಸಾರಿಗೆ ಬಸ್‌ಗಳು ಸಂಚರಿಸಲಿವೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಉದ್ಘಾಟನೆ ಕಾರ್ಯಕ್ರಮ: ‘ಸಂತೋಷವು ಪ್ರಯಾಣಿಸುತ್ತಿದೆ...’ ಉಪಶೀರ್ಷಿಕೆಯೊಂದಿಗೆ ‘ಪಲ್ಲಕ್ಕಿ’ ಹವಾನಿಯಂತ್ರಿತ ಬಸ್‌ಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧದ ಪೂರ್ವದ್ವಾರದಲ್ಲಿ ಅ.7ರಂದು ಬೆಳಿಗ್ಗೆ 10ಕ್ಕೆ ಚಾಲನೆ ನೀಡಲಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಭಾಗವಹಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.