ADVERTISEMENT

ಲಾಕ್‌ಡೌನ್‌ | ಅನಾನಸ್‌ಗೆ ಸಿಗದ ಕವಡೆಕಾಸಿನ ಕಿಮ್ಮತ್ತು

ಶಿವಮೊಗ್ಗ ಜಿಲ್ಲೆಯಲ್ಲಿ 1,200 ಹೆಕ್ಟೇರ್‌ನಲ್ಲಿ ಕೃಷಿ, ಶೇ 2ರಷ್ಟೂ ಆಗದ ವಿಲೇವಾರಿ

ಚಂದ್ರಹಾಸ ಹಿರೇಮಳಲಿ
Published 1 ಮೇ 2020, 21:33 IST
Last Updated 1 ಮೇ 2020, 21:33 IST
ಅನಾನಸ್
ಅನಾನಸ್   

ಶಿವಮೊಗ್ಗ: ಜಿಲ್ಲೆಯಲ್ಲಿ ಬೆಳೆಯುವ ‘ರಾಜಾ’ ತಳಿಯ ಅನಾನಸ್‌ಗೆ ಮಾರುಕಟ್ಟೆ ದೊರಕಿಸಲು ಜನಪ್ರತಿನಿಧಿಗಳು, ಜಿಲ್ಲಾಡಳಿತ ಸತತ ಶ್ರಮವಹಿಸಿದರೂ ಶೇ 2ರಷ್ಟೂ ವಿಲೇವಾರಿ ಸಾಧ್ಯವಾಗಿಲ್ಲ.

‘ರಾಣಿ’ ತಳಿಯ ಅನಾನಸ್‌ನಲ್ಲಿ ಸಕ್ಕರೆ ಅಂಶ ಹೆಚ್ಚಿದ್ದು, ಸಿಹಿ ಜಾಸ್ತಿ. ಹಾಪ್‌ಕಾಮ್ಸ್‌ ಸೇರಿ ಸ್ಥಳೀಯ ಸಂಸ್ಥೆಗಳು ಖರೀದಿಸಿ ಜನರಿಗೆ ನೇರವಾಗಿ ಮಾರುತ್ತವೆ. ಆದರೆ, ರಾಜಾ ತಳಿಯ ಅನಾನಸ್‌ಗೆಉತ್ತರ ಭಾರತವೇ ಮಾರುಕಟ್ಟೆ. ಈ ತಳಿಯಲ್ಲಿ ಸಕ್ಕರೆ ಅಂಶ ಕಡಿಮೆ. ಹುಳಿ ಮಿಶ್ರಿತ ರಸದ ಪ್ರಮಾಣ ಹೆಚ್ಚಿದ್ದು, ತಂಪು ಪಾನೀಯಕ್ಕೆಹೆಚ್ಚು ಬಳಕೆಯಾಗಲಿದೆ.

ದೆಹಲಿ, ಪಂಜಾಬ್, ಹರಿಯಾಣ, ಮಹಾರಾಷ್ಟ್ರ ರಾಜ್ಯಗಳಿಗೆ ಈ ಅನಾನಸ್ ಸರಬರಾಜು ಆಗುತ್ತಿತ್ತು. ಕೊರೊನಾ ನಿರ್ಬಂಧದಿಂದಾಗಿ ಸಾಗಣೆಗೆ ಸಮಸ್ಯೆಯಾಗಿದ್ದು, ಜಿಲ್ಲೆಯಲ್ಲಿ ಅನಾನಸ್‌ ಬೆಳೆ ಹೊಲದಲ್ಲೇ ಕೊಳೆಯುವಂತಾಗಿದೆ.

ADVERTISEMENT

ಜಿಲ್ಲೆಯಲ್ಲಿ ಸೊರಬ, ಸಾಗರ ತಾಲ್ಲೂಕಿನಭಾಗದಲ್ಲಿ ಪ್ರಸಕ್ತ ವರ್ಷ 1,200 ಹೆಕ್ಟೇರ್‌ನಲ್ಲಿ ‘ರಾಜಾ’ ತಳಿಯ ಅನಾನಸ್ ಬೆಳೆದಿದ್ದು, 60 ಸಾವಿರ ಟನ್ ಬೆಳೆ ನಿರೀಕ್ಷಿಸಲಾಗಿದೆ. ಇದುವರೆವಿಗೂ 800 ಟನ್ ಕಟಾವು ಮಾಡಲಾಗಿದೆ.

ಸಂಸದ ಬಿ.ವೈ.ರಾಘವೇಂದ್ರ ಅವರು ಕೇಂದ್ರ ಸರ್ಕಾರದ ಜತೆ,ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಸೆಂಟ್ರಲ್ ಫುಡ್ ಟೆಕ್ನಾಲಜಿ ರಿಸರ್ಚ್ ಇನ್‌ಸ್ಟಿಟ್ಯೂಟ್ ಅಧಿಕಾರಿಗಳೊಂದಿಗೆ ನಿರಂತರ ಮಾತುಕತೆ ನಡೆಸಿದ ಪರಿಣಾಮ 250 ಟನ್ ಸಾಗಣೆಸಾಧ್ಯವಾಗಿದೆ. ಪ್ರತಿ ಟನ್‌ಗೆ ಸರಾಸರಿ 7 ಸಾವಿರ ದೊರೆತಿದೆ.

ಸ್ವಲ್ಪ ಪ್ರಮಾಣದ ಹಣ್ಣುಗಳನ್ನುರಾಯಚೂರು, ಬೆಂಗಳೂರು, ಕೊಪ್ಪಳ, ಬೀದರ್ ಜಿಲ್ಲೆ ಮಾರುಕಟ್ಟೆಗಳಿಗೆ ಕಳುಹಿಸ ಲಾಗಿದೆ. ಜೂನ್‌ವರೆಗೆ ಇಳುವರಿ ದೊರೆಯಲಿದೆ. ತುರ್ತು ಕ್ರಮ ಕೈಗೊಳ್ಳದಿದ್ದರೆ ನಷ್ಟ ಖಚಿತ ಎಂಬುದು ರೈತರ ಆತಂಕ.

*
ವಿವಿಧ ಆಹಾರ ಸಂಸ್ಕರಣಾ ತಂತ್ರಗಳನ್ನು ಬಳಸಿ ಅನಾನಸ್‌ ದಾಸ್ತಾನು ಇರಿಸುವುದೂ ಸೇರಿ ಹೊಸ ಮಾರುಕಟ್ಟೆ ದೊರಕಿಸಲು ಒತ್ತು ನೀಡಲಾಗಿದೆ.
-ಕೆ.ಬಿ. ಶಿವಕುಮಾರ್, ಜಿಲ್ಲಾಧಿಕಾರಿ

*
30 ಎಕರೆಯಲ್ಲಿಅನಾನಸ್ ಬೆಳೆದಿದ್ದೇವೆ. 18 ತಿಂಗಳ ಶ್ರಮ ವ್ಯರ್ಥವಾಗಿದೆ. ತಕ್ಷಣ ಮಾರುಕಟ್ಟೆ ದೊರೆಯದಿದ್ದರೆ ಬದುಕೇ ಮುಳುಗಲಿದೆ.
-ಬಸವರಾಜ್, ರೈತ, ಸೊರಬ ತಾಲ್ಲೂಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.