ನವದೆಹಲಿ: ‘ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ನಡೆದ ಘಟನೆ ಪೂರ್ವನಿಯೋಜಿತ ಕೃತ್ಯವಾಗಿದೆ. ಇದು ಪೊಲೀಸ್ ಇಲಾಖೆ ಹಾಗೂ ಸರ್ಕಾರದ ವೈಫಲ್ಯವಾಗಿದ್ದು, ಓಲೈಕೆ ರಾಜಕಾರಣದ ಪರಿಣಾಮ ಈ ಗಲಭೆ ನಡೆದಿದೆ. ಈ ಬಗ್ಗೆ ಮ್ಯಾಜಿಸ್ಟ್ರೇಟ್ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕು’ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.
ನವದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಮದ್ದೂರಿನಲ್ಲಿ ಗಣೇಶೋತ್ಸವ ಮೆರವಣಿಗೆ ವೇಳೆ ಕಲ್ಲುಗಳನ್ನು ಶೇಖರಣೆ ಮಾಡಿ ತೂರಾಟ ಮಾಡಿದ್ದಾರೆ. ಸೂಕ್ತ ಬಂದೊಬಸ್ತ್ ಮಾಡಿಕೊಳ್ಳುವಲ್ಲಿ ಫೊಲಿಸ್ ಇಲಾಖೆಯು ಸಂಪೂರ್ಣವಾಗಿ ವಿಫಲವಾಗಿದೆ. ಘಟನೆಯ ನಂತರ ಪೊಲೀಸರು ಸ್ಥಳಕ್ಕೆ ತೆರಳಿದ್ದಾರೆ. ಘಟನೆಯಲ್ಲಿ ಅಮಾಯಕರನ್ನು ಬಂಧಿಸಿದ್ದಾರೆ. ಇಂದು ಹಿಂದೂ ಸಂಘಟನೆಗಳು ಪ್ರತಿಭಟನೆ ಮಾಡಿದರೆ ಅವರ ಮೇಲೆ ಪೊಲಿಸರು ವಿನಾಕಾರಣ ಲಾಠಿಚಾರ್ಜ್ ಮಾಡಿದ್ದಾರೆ. ಪೊಲೀಸರು ದಮನಕಾರಿ ನೀತಿ ಅನುಸರಿಸಿದ್ದಾರೆ’ ಎಂದು ಆರೋಪಿಸಿದ್ದಾರೆ.
ಸಂವಿಧಾನದ ಬಗ್ಗೆ ಬಹಳ ಮಾತನಾಡುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂವಿಧಾನದಲ್ಲಿ ಎಲ್ಲ ಧರ್ಮಿಯರಿಗೆ ಅವರವರ ಧರ್ಮ ಆಚರಣೆಗೆ ಅವಕಾಶ ಇದೆ ಎಂಬುದನ್ನು ಮರೆತಿದ್ದಾರೆ. ಈದ್ ಮಿಲಾದ್ ಹಬ್ಬ ರಾಜ್ಯದಾದ್ಯಂತ ಶಾಂತರೀತಿಯಿಂದ ನಡೆಯುತ್ತದೆ. ಆದರೆ, ಗಣೇಶನ ಹಬ್ಬದಲ್ಲಿ ಶಾಂತಿ ಕದಡಿ ಹಿಂಸೆ ಸೃಷ್ಟಿಸಬೇಕು ಎನ್ನುವ ಹುನ್ನಾರದಿಂದ ಈ ರೀತಿ ಮಾಡಿದ್ದಾರೆ. ಗಣೇಶ ಹಬ್ಬದಲ್ಲಿ ಪೊಲೀಸರು ಪೂಜೆ, ಮೆರವಣಿಗೆ, ಸೌಂಡ್ ಸಿಸ್ಟಮ್ ಹೀಗೆ ಎಲ್ಲದಕ್ಕೂ ನಿರ್ಬಂಧ ಹೇರುತ್ತಾರೆ. ಇದು ಸಂವಿಧಾನ ವಿರೋಧಿ ಅಲ್ಲವೇ? ಪೊಲೀಸರು ಎಲ್ಲ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಆಚರಣೆಗೆ ಅವಕಾಶ ನೀಡಬಹುದು. ಶಿವಮೊಗ್ಗ, ಚಿತ್ರದುರ್ಗ, ಉತ್ತರ ಕರ್ನಾಟಕ ಎಲ್ಲ ಕಡೆ ಶಾಂತ ರೀತಿಯಲ್ಲಿ ಗಣೇಶೋತ್ಸವ ಮೆರವಣಿಗೆ ನಡೆದಿದೆ. ಮಂಡ್ಯದಲ್ಲಿ ಏಕೆ ಅದು ಸಾಧ್ಯವಾಗಲಿಲ್ಲ. ಮಂಡ್ಯದಲ್ಲಿ ಪೊಲೀಸರು ಮತ್ತು ಸರ್ಕಾರದ ವೈಫಲ್ಯ ಎದ್ದು ಕಾಣುತ್ತಿದೆ ಎಂದು ಹೇಳಿದ್ದಾರೆ.
ಗೃಹಸಚಿವ ಡಾ. ಜಿ. ಪರಮೇಶ್ವರ್ ಅವರು ಘಟನೆಯನ್ನು ಬಹಳ ಹಗುರವಾಗಿ ತೆಗೆದುಕೊಂಡಿದ್ದಾರೆ. ಬೇಜವಾಬ್ದಾರಿಯಿಂದ ಮಾತನಾಡಿದ್ದಾರೆ. ಕಾನೂನು ಸುವ್ಯವಸ್ಥೆ ಕಲ್ಪಿಸುವುದು ಸರ್ಕಾರದ ಜವಾಬ್ದಾರಿ. ಅನವಶ್ಯಕವಾಗಿ ಬಿಜೆಪಿ ಮೇಲೆ ಆರೋಪ ಮಾಡುವುದನ್ನು ಬಿಟ್ಟು ನಿಷ್ಪಕ್ಷಪಾತವಾಗಿ ತಮ್ಮ ಕರ್ತವ್ಯ ನಿರ್ವಹಿಸುವುದನ್ನು ಕಲಿಯಲಿ. ಓಲೈಕೆ ರಾಜಕಾರಣ ಮಾಡುವುದರ ಪರಿಣಾಮದಿಂದಾಗಿ ಈ ಘಟನೆ ನಡೆದಿದೆ. ಸಮಾಜಘಾತುಕ ಶಕ್ತಿಗಳಿಗೆ ಏನು ಮಾಡಿದರೂ ನಡೆಯುತ್ತದೆ ಎನ್ನುವ ಭರವಸೆಯನ್ನು ಈ ಸರ್ಕಾರ ನೀಡಿದೆ. ಹೀಗಾಗಿ ಕಾನೂನು ಮತ್ತು ಪೊಲೀಸರ ಭಯ ಇಲ್ಲದೆ ಅವರು ನಿರ್ಭೀತಿಯಿಂದ ಹಿಂಸಾತ್ಮಕ ಕೃತ್ಯಗಳನ್ನು ಮಾಡುತ್ತಿದ್ದಾರೆ. ಇದು ಅತ್ಯಂತ ಖಂಡನೀಯ. ಮಂಡ್ಯದಲ್ಲಿ ಶಾಂತಿ ನೆಲೆಸಬೇಕು. ಎಲ್ಲ ಧರ್ಮಿಯರು ತಮ್ಮ ಹಬ್ಬಗಳ ಆಚರಣೆಗೆ ಅವಕಾಶ ದೊರೆಯಬೇಕು. ಈ ಬಗ್ಗೆ ಮ್ಯಾಜಿಸ್ಟ್ರೇಟ್ ತನಿಖೆಯಾಗಬೇಕು’ ಎಂದು ಆಗ್ರಹಿಸಿದರು.
‘ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಅವರು ಪ್ರತಿಪಕ್ಷಗಳ ಮೇಲೆ ಆರೋಪ ಮಾಡುವುದು ಸುಲಭ. ಅನ್ಯಾಯ ಆದವರಿಗೆ ನ್ಯಾಯ ಕೊಡಿಸಲು ಹೋರಾಡುವುದು ಪ್ರತಿಪಕ್ಷಗಳ ಕರ್ತವ್ಯ. ನಾವು ನಮ್ಮ ಕರ್ತವ್ಯ ಮಾಡುತ್ತೇವೆ. ಕಾನೂನು ಸುವ್ಯವಸ್ಥೆ ಕಾಪಾಡುವುದು ಸರ್ಕಾರದ ಕೆಲಸ. ಅವರು ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ರಾಜಕೀಯ ಪ್ರೇರಿತ ಹೇಳಿಕೆ ನೀಡುತ್ತಿದ್ದಾರೆ’ ಎಂದು ಆರೋಪಿಸಿದರು.
ಗಲಭೆ ನಡೆಸುವವರ ಮೇಲಿನ ಪ್ರಕರಣಗಳನ್ನು ವಾಪಸ್ ಪಡೆಯುವುದರಿಂದ ಈ ರೀತಿಯ ಘಟನೆಗಳು ಹೆಚ್ಚಾಗಲು ಕಾರಣವಾಗಿದೆಯಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಸಿಎಂ ಸಿದ್ದರಾಮಯ್ಯ ಅವರು ಪಿಎಫ್‌ಐ ಹಾಗೂ ಎಸ್‌ಡಿಪಿ ಮೇಲಿನ ಪ್ರಕರಣಗಳನ್ನು ಹಿಂಪಡೆದಿದ್ದರ ಪರಿಣಾಮವಾಗಿ ಮೈಸೂರಿನಲ್ಲಿ ಪೊಲಿಸ್ ಠಾಣೆ ಮೇಲೆ ದಾಳಿಯಾಯಿತು. ಡಿಜೆ ಹಳ್ಳಿ ಕೆಜಿ ಹಳ್ಳಿ ಗಲಭೆಕೋರರ ಕೇಸ್ ವಾಪಸ್ ಪಡೆಯಲು ಪ್ರಯತ್ನಿಸಿದರು. ಹುಬ್ಬಳ್ಳಿಯಲ್ಲಿ ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿದವರ ಕೇಸ್ ವಾಪಸ್ ಪಡೆದರು. ಇಂತಹ ಸಮಾಜ ಘಾತುಕ ಶಕ್ತಿಗಳು, ಶಾಂತಿ ಕದಡುವ ಶಕ್ತಿಗಳ ವಿರುದ್ದದ ಪ್ರಕರಣ ವಾಪಸ್ ಪಡೆಯುವುದು ಕೂಡ ಒಂದು ರೀತಿ ಪ್ರಚೋದನೆಯಾಗಿದೆ. ಈ ಘಟನೆಗೆ ರಾಜ್ಯ ಕಾಂಗ್ರೆಸ್ ಸರ್ಕಾರವೇ ಕಾರಣ. ರಾಜ್ಯದಲ್ಲಿ ಈಗಲೇ ಚುನಾವಣೆ ನಡೆದರೆ ಕಾಂಗ್ರೆಸ್ ಮನೆಗೆ ಹೋಗುತ್ತದೆ. ಕಾಂಗ್ರೆಸ್‌ನವರಿಗೆ ಜನರನ್ನು ಎದುರಿಸುವ ಶಕ್ತಿಯಿಲ್ಲ ಎಂದು ಬೊಮ್ಮಾಯಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.