ADVERTISEMENT

ಮೇಕೆದಾಟು ಯೋಜನೆ: ತಮಿಳುನಾಡು ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್; ರಾಜ್ಯಕ್ಕೆ ಜಯ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2025, 0:56 IST
Last Updated 14 ನವೆಂಬರ್ 2025, 0:56 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ: ಕಾವೇರಿ ನದಿಗೆ ಅಡ್ಡಲಾಗಿ ಮೇಕೆದಾಟು ಸಮತೋಲನ ಜಲಾಶಯ ನಿರ್ಮಿಸುವ ಕರ್ನಾಟಕ ಸರ್ಕಾರದ ಯೋಜನೆ ವಿರುದ್ಧ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಗುರುವಾರ ವಜಾಗೊಳಿಸಿದೆ. ಇದರಿಂದ, ತಮಿಳುನಾಡಿಗೆ ಭಾರಿ ಹಿನ್ನಡೆಯಾಗಿದೆ. 

ಪ್ರಕರಣದ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ, ನ್ಯಾಯಮೂರ್ತಿಗಳಾದ ಕೆ. ವಿನೋದ್‌ ಚಂದ್ರನ್‌ ಹಾಗೂ ಎನ್‌.ವಿ. ಅಂಜಾರಿಯಾ ಪೀಠವು, ‘ಮೇಕೆದಾಟು ಅಣೆಕಟ್ಟೆ ನಿರ್ಮಾಣಕ್ಕೆ ವಿಸ್ತೃತ ಯೋಜನಾ ವರದಿ (ಡಿಪಿಆರ್) ತಯಾರಿಸಲು ಮಾತ್ರ ಕೇಂದ್ರ ಜಲ ಆಯೋಗ (ಸಿಡಬ್ಲ್ಯುಸಿ) ಅನುಮತಿ ನೀಡಿದೆ. ತಮಿಳುನಾಡಿನ ಆಕ್ಷೇಪಣೆಗಳನ್ನು ತಜ್ಞರು ಪರಿಶೀಲಿಸಿದ ಬಳಿಕವೇ ಈ ಪ್ರಕ್ರಿಯೆ ನಡೆದಿದೆ. ಈ ಹಂತದಲ್ಲಿ ಇದನ್ನು ಪ್ರಶ್ನಿಸಿ ತಮಿಳುನಾಡು ಅರ್ಜಿ ಸಲ್ಲಿಸಿರುವುದು ಅವಧಿಪೂರ್ವ (ಪ್ರಿಮೆಚೂರ್‌)’ ಎಂದು ಅಭಿಪ್ರಾಯಪಟ್ಟಿದೆ.

‘ತಮಿಳುನಾಡಿನ ಆಕ್ಷೇಪಣೆಗಳನ್ನು ಹಾಗೂ ತಜ್ಞ ಸಂಸ್ಥೆಗಳು, ಕಾವೇರಿ ನೀರು ನಿಯಂತ್ರಣ ಸಮಿತಿ (ಸಿಡಬ್ಲ್ಯುಆರ್‌ಸಿ) ಮತ್ತು ಕಾವೇರಿ ನೀರು ನಿರ್ವಹಣ ಪ್ರಾಧಿಕಾರಗಳ (ಸಿಡಬ್ಲ್ಯುಎಂಎ) ಅಭಿಪ್ರಾಯಗಳನ್ನು ಪರಿಗಣಿಸಿದ ನಂತರವೇ ಆಯೋಗವು ಯೋಜನೆಗೆ ಅನುಮೋದನೆ ನೀಡಲಿದೆ’ ಎಂದು ಪೀಠ ತಿಳಿಸಿದೆ. 

ADVERTISEMENT

‘ನ್ಯಾಯಾಲಯ ಮತ್ತು ಪ್ರಾಧಿಕಾರಗಳ ನಿರ್ದೇಶನಗಳನ್ನು ಅನುಸರಿಸಿ ಕರ್ನಾಟಕ ರಾಜ್ಯವು ಕಾವೇರಿ ನೀರನ್ನು ಹರಿಸಲು ಬದ್ಧವಾಗಿರಬೇಕು. ಒಂದು ವೇಳೆ, ಈ ನ್ಯಾಯಾಲಯದ ನಿರ್ದೇಶನಗಳನ್ನು ಪಾಲಿಸಲು ಕರ್ನಾಟಕ ವಿಫಲವಾದರೆ, ನ್ಯಾಯಾಂಗ ನಿಂದನೆ ಎಸಗಿದ ಅಪಾಯ ಎದುರಿಸಲಿದೆ’ ಎಂದು ಪೀಠ ಎಚ್ಚರಿಸಿದೆ. ಆದಾಗ್ಯೂ, ‘ನ್ಯಾಯಾಲಯದ ಎಲ್ಲ ನಿರ್ದೇಶನಗಳನ್ನು ಪಾಲಿಸಲಾಗಿದೆ. ತಮಿಳುನಾಡು ಎತ್ತಿರುವ ಅನೇಕ ಪ್ರಶ್ನೆಗಳು ಅತಿಯಾದುದು’ ಎಂದು ಕರ್ನಾಟಕ ವಾದಿಸಿದೆ.  

‘ಒಂದು ವೇಳೆ ಡಿಪಿಆರ್‌ಗೆ ಜಲ ಆಯೋಗ ಅನುಮೋದನೆ ನೀಡಿದರೆ, ಕಾನೂನಿನ ಚೌಕಟ್ಟಿನಲ್ಲಿ ತಮಿಳುನಾಡು ಸರ್ಕಾರವು ಪ್ರಶ್ನಿಸುವ ಸ್ವಾತಂತ್ರ್ಯ ಹೊಂದಿದೆ’ ಎಂದೂ ಪೀಠ ಹೇಳಿದೆ. 

‘ಹೆಚ್ಚುವರಿ ಕಾವೇರಿ ನೀರನ್ನು ಬೆಂಗಳೂರಿಗೆ ಹರಿಸಲು ಕರ್ನಾಟಕ ಮುಂದಾಗಿದೆ. ಇದಕ್ಕೆ ಅವಕಾಶ ನೀಡಬಾರದು’ ಎಂದು ಒತ್ತಾಯಿಸಿ ತಮಿಳುನಾಡು ಮತ್ತೊಂದು ಅರ್ಜಿ ಸಲ್ಲಿಸಿತ್ತು. ಈ ಅರ್ಜಿ ಪುರಸ್ಕರಿಸಲು ನ್ಯಾಯಪೀಠ ನಿರಾಕರಿಸಿದೆ. ‘ಕಾವೇರಿ ಜಲವಿವಾದಕ್ಕೆ ಸಂಬಂಧಿಸಿ ನ್ಯಾಯಾಲಯ 2018ರಲ್ಲೇ ತೀರ್ಪು ಕೊಟ್ಟಿದೆ. ಕಾವೇರಿ ನೀರು ಹರಿಸುವುದರ ಮೇಲ್ವಿಚಾರಣೆ ನೋಡಿಕೊಳ್ಳಲು ಕಾವೇರಿ ನೀರು ನಿರ್ವಹಣ ಪ್ರಾಧಿಕಾರವಿದೆ. ಒಂದು ವೇಳೆ, ಆದೇಶ ಅನುಷ್ಠಾನಗೊಳಿಸದಿದ್ದರೆ ಪ್ರಾಧಿಕಾರಕ್ಕೆ ದೂರು ಸಲ್ಲಿಸಬಹುದು’ ಎಂದು ಪೀಠ ಸಲಹೆ ನೀಡಿದೆ. ಇಂತಹ ವಿಷಯಗಳಲ್ಲಿ ಪ್ರಾಧಿಕಾರದ ಅಧಿಕಾರಿಗಳು ತ್ವರಿತವಾಗಿ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಸಿಜೆಐ ನಿರ್ದೇಶನ ನೀಡಿದರು. 

ನೀರಿನ ಹಂಚಿಕೆಯ ಕುರಿತು ರೈತರ ಸಂಘಟನೆಗಳು ಅರ್ಜಿಗಳನ್ನು ಸಲ್ಲಿಸಿವೆ ಎಂದು ಸಿಜೆಐ ಒಪ್ಪಿಕೊಂಡರು. ಕಾವೇರಿ ನ್ಯಾಯಮಂಡಳಿ ಶಿಫಾರಸುಗಳನ್ನು ಸರಿಯಾಗಿ ಅನುಷ್ಠಾನಗೊಳಿಸುವಂತೆ ಕೋರಿ ಸಲ್ಲಿಸಲಾದ ಪಿಐಎಲ್ ಬಾಕಿ ಇದೆ ಎಂದು ಗಮನಿಸಿದರು. ಈ ವಿಷಯದಲ್ಲಿ ನಾವು ಯಾವುದೇ ಆದೇಶ ನೀಡುವುದಿಲ್ಲ ಎಂದೂ ಸ್ಪಷ್ಟಪಡಿಸಿದರು. ‌

ಏನಿದು ಮೇಕೆದಾಟು ಯೋಜನೆ 

  • 67 ಟಿಎಂಸಿ ಅಡಿ ಕಾವೇರಿ ನೀರು ಸಂಗ್ರಹಿಸಲು ಸಮತೋಲನ ಜಲಾಶಯ ನಿರ್ಮಾಣ 

  • ಕುಡಿಯುವ ನೀರು ಹಾಗೂ 400 ಮೆಗಾವಾಟ್ ವಿದ್ಯುತ್ ಉತ್ಪಾದನೆ ಗುರಿ

  • ಯೋಜನೆಗಾಗಿ 4,716 ಹೆಕ್ಟೇರ್ ಅರಣ್ಯ ಹಾಗೂ 280 ಹೆಕ್ಟೇರ್ ಕಂದಾಯ ಭೂಮಿ ಮುಳುಗಡೆ 

  • ಯೋಜನೆಯ ಪರಿಷ್ಕೃತ ಅಂದಾಜು ವೆಚ್ಚ: ₹14,500 ಕೋಟಿ 

ಅಡಚಣೆಗಳನ್ನು ನಿವಾರಿಸಿಕೊಂಡು ಮುನ್ನಡೆಯಲು ಸಿದ್ಧತೆ ಮಾಡಿಕೊಳ್ಳಲಾಗುವುದು. ಇದಕ್ಕಾಗಿ ಹಲವು ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ. ಅವು ಏನೆಂಬುದನ್ನು ಬಹಿರಂಗ ಪಡಿಸಲು ಸಾಧ್ಯವಿಲ್ಲ.
– ಎಚ್‌.ಕೆ. ಪಾಟೀಲ, ಕಾನೂನು ಸಚಿವ
ಈ ಯೋಜನೆಯಿಂದ ಕರ್ನಾಟಕಕ್ಕಿಂತ ತಮಿಳುನಾಡಿಗೆ ಹೆಚ್ಚು ಉಪಯೋಗ. ಕಷ್ಟ ಕಾಲದಲ್ಲಿ ತಮಿಳುನಾಡಿನ ಪಾಲಿನ ನೀರು ಬಿಡಲು ಈ ಯೋಜನೆ ನೆರವಾಗಲಿದೆ. ಹೀಗಾಗಿ ಈ ತೀರ್ಪು ತಮಿಳುನಾಡಿಗೂಸಂದ ಜಯ.
– ಡಿ.ಕೆ. ಶಿವಕುಮಾರ್, ಉಪಮುಖ್ಯಮಂತ್ರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.