ADVERTISEMENT

ಕನ್ನಡ ಅನುವಾದದಲ್ಲಿ ಲೋಪ | ಕಳವಳ ವ್ಯಕ್ತಪಡಿಸಿದ್ದ ಸಿಎಂ, ಕ್ಷಮೆ ಕೋರಿದ ‘ಮೆಟಾ’

ಸ್ವಯಂ ಚಾಲಿತ ಅನುವಾದದ ಲೋಪದ ಬಗ್ಗೆ ಕಳವಳ ವ್ಯಕ್ತಪಡಿಸಿ ‘ಎಕ್ಸ್‌’ ಮಾಡಿದ್ದ ಸಿ.ಎಂ

​ಪ್ರಜಾವಾಣಿ ವಾರ್ತೆ
Published 18 ಜುಲೈ 2025, 0:30 IST
Last Updated 18 ಜುಲೈ 2025, 0:30 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ನವದೆಹಲಿ: ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ‘ಮೆಟಾ’ದ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಸ್ವಯಂ ಚಾಲಿತ ಕನ್ನಡ ಅನುವಾದ ವ್ಯವಸ್ಥೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಬೆನ್ನಲ್ಲೇ, ಈ ಕುರಿತು ‘ಮೆಟಾ’ ಗುರುವಾರ ಕ್ಷಮೆಯಾಚಿಸಿದೆ. ಅಲ್ಲದೆ ಸಮಸ್ಯೆ ಸರಿಪಡಿಸುವುದಾಗಿ ತಿಳಿಸಿದೆ.

‘ಕನ್ನಡ ಅನುವಾದದಲ್ಲಿನ ಲೋಪಕ್ಕೆ ಕಾರಣವಾದ ಸಮಸ್ಯೆಯನ್ನು ಸಂಕ್ಷಿಪ್ತವಾಗಿ ಸರಿಪಡಿಸಲಾಗಿದೆ’ ಎಂದು ಮೆಟಾದ ವಕ್ತಾರರು ತಿಳಿಸಿದ್ದಾರೆ. 

ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಂನಂತಹ ಮೆಟಾದ ವೇದಿಕೆಗಳಲ್ಲಿ ಕನ್ನಡದ ದೋಷಯುಕ್ತ ಅನುವಾದವು ಸತ್ಯವನ್ನು ತಿರುಚುತ್ತಿದೆ ಮತ್ತು ಬಳಕೆದಾರರ ದಾರಿತಪ್ಪಿಸುತ್ತಿದೆ ಎಂದು ಸಿದ್ದರಾಮಯ್ಯ ದೂರಿದ್ದರು.

ADVERTISEMENT

‘ಸಾಮಾಜಿಕ ಮಾಧ್ಯಮ ವೇದಿಕೆಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ಅಧಿಕೃತವಾಗಿ ಸಂವಹನ ನಡೆಸುವಾಗ, ವ್ಯವಹರಿಸುವಾಗ ಈ ವೇದಿಕೆಗಳಲ್ಲಿನ ಸ್ವಯಂ ಚಾಲಿತ ಅನುವಾದಗಳು ಹೆಚ್ಚಾಗಿ ತಪ್ಪಾಗಿರುತ್ತವೆ ಮತ್ತು ಅದು ಅತ್ಯಂತ ಅಪಾಯಕಾರಿಯಾಗಿರುತ್ತದೆ ಎಂಬುದನ್ನು ನಾಗರಿಕರು ತಿಳಿದಿರಬೇಕು’ ಎಂದು ಸಿದ್ದರಾಮಯ್ಯ ‘ಎಕ್ಸ್‌’ನಲ್ಲಿ ಎಚ್ಚರಿಸಿದ್ದಾರೆ.   

‘ಈ ಲೋಪಗಳ ಕುರಿತು ನನ್ನ ಮಾಧ್ಯಮ ಸಲಹೆಗಾರರು ಔಪಚಾರಿಕವಾಗಿ ಮೆಟಾಗೆ ಪತ್ರ ಬರೆದು ತಕ್ಷಣವೇ ಸರಿಪಡಿಸುವಂತೆ ಒತ್ತಾಯಿಸಿದ್ದಾರೆ’ ಎಂದು ಅವರು ಪೋಸ್ಟ್‌ನಲ್ಲಿ ಹೇಳಿದ್ದಾರೆ.  

‘ತಂತ್ರಜ್ಞಾನದ ದೈತ್ಯರು ಮಾಡುವ ಈ ರೀತಿಯ ನಿರ್ಲಕ್ಷ್ಯವು ಸಾರ್ವಜನಿಕ ತಿಳಿವಳಿಕೆ ಮತ್ತು ನಂಬಿಕೆಗೆ ಹಾನಿ ಮಾಡುತ್ತದೆ’ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ. 

ಮುಖ್ಯಮಂತ್ರಿ ಅವರ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್‌ ಅವರು, ಜುಲೈ 16ರಂದು ಮೆಟಾಗೆ ಇ–ಮೇಲ್‌ ಮಾಡಿದ್ದರು. ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಂನಲ್ಲಿ ಕನ್ನಡ ವಿಷಯದ ಸ್ವಯಂ ಚಾಲಿತ ಅನುವಾದದ ಬಗ್ಗೆ ಮುಖ್ಯಮಂತ್ರಿ ಪರವಾಗಿ ಕಳವಳ ವ್ಯಕ್ತಪಡಿಸಿದ್ದರು. 

ಅನುವಾದದ ನಿಖರತೆಯನ್ನು ವಿಶ್ವಾಸಾರ್ಹವಾಗಿ ಸುಧಾರಿಸುವವರೆಗೆ ಕನ್ನಡ ವಿಷಯದ ಸ್ವಯಂಚಾಲಿತ ಅನುವಾದ ವೈಶಿಷ್ಟ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ರಾಜ್ಯ ಸರ್ಕಾರ ಮೆಟಾಗೆ ತಿಳಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.