
ಎ.ಐ ಚಿತ್ರ
ಬೆಂಗಳೂರು: ಪ್ರೌಢಶಾಲಾ ಹಂತದವರೆಗಿನ (16 ವರ್ಷ) ಮಕ್ಕಳು ಮೊಬೈಲ್ ಬಳಸುವುದರ ಮೇಲೆ ನಿರ್ಬಂಧ ವಿಧಿಸುವ ಕುರಿತು ಅಧ್ಯಯನ ನಡೆಸಿ ವರದಿ ನೀಡಲು ಶಿಕ್ಷಣ, ವೈದ್ಯಕೀಯ ಹಾಗೂ ತಾಂತ್ರಿಕ ತಜ್ಞರನ್ನು ಒಳಗೊಂಡ ಉನ್ನತ ಸಮಿತಿ ರಚಿಸಲು ರಾಜ್ಯ ಸರ್ಕಾರ ಮುಂದಾಗಿದೆ.
ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (ಡಿಎಸ್‌ಇಆರ್‌ಟಿ), ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್) ಅಧಿಕಾರಿಗಳು, ಶಿಕ್ಷಣ ಕ್ಷೇತ್ರದ ಪ್ರಗತಿಗೆ ಶ್ರಮಿಸುತ್ತಿರುವ ತಜ್ಞರು, ಮನೋವೈದ್ಯರು ಹಾಗೂ ತಾಂತ್ರಿಕ ತಜ್ಞರು ಸಮಿತಿಯಲ್ಲಿ ಇರಲಿದ್ದು, ಮಕ್ಕಳ ಮೊಬೈಲ್ ಗೀಳಿನ ಪ್ರಮಾಣ, ಮೊಬೈಲ್ ಬಳಕೆಯಿಂದ ಶಿಕ್ಷಣದ ಮೇಲೆ ಬೀರುತ್ತಿರುವ ಪರಿಣಾಮ, ಅನುಕೂಲ, ಆರೋಗ್ಯ ಸಮಸ್ಯೆಗಳನ್ನು ಅಧ್ಯಯನ ಮಾಡಲಿದ್ದಾರೆ. ಈ ವರದಿ ಆಧಾರದಲ್ಲಿ ಮಕ್ಕಳಿಗೆ ಅನ್ವಯವಾಗುವಂತೆ ‘ಡಿಜಿಟಲ್ ನಿಯಂತ್ರಣ ನೀತಿ’ ರೂಪಿಸಲಾಗುತ್ತದೆ.
ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸೇರಿದಂತೆ ವಿವಿಧ ಸಂಘಸಂಸ್ಥೆಗಳು, ಸಂಘಟನೆಗಳು, ಕೆಲ ಪೋಷಕರು ಈ ಕುರಿತು ಸರ್ಕಾರಕ್ಕೆ ಪತ್ರ ಬರೆದಿದ್ದರು. ಈಚೆಗೆ ನಡೆದ ಸಾರ್ವಜನಿಕ ವಿಶ್ವವಿದ್ಯಾಲಯಗಳ ಕುಲಪತಿಗಳ ಸಮಾವೇಶದಲ್ಲೂ ಈ ಕುರಿತು ಚರ್ಚಿಸಲಾಗಿತ್ತು. 16 ವರ್ಷದ ಒಳಗಿನ ಮಕ್ಕಳ ಮೊಬೈಲ್ ಬಳಕೆಗೆ ನಿರ್ಬಂಧ ವಿಧಿಸುವಂತೆ ಕುಲಪತಿಗಳು ಸಲಹೆ ನೀಡಿದ್ದರು. ಈ ಎಲ್ಲ ಬೆಳವಣಿಗೆಗಳ ನಡುವೆ ರಾಜ್ಯ ಸರ್ಕಾರ ಸಮಿತಿ ರಚಿಸಿ, ನಂತರ ಸೂಕ್ತ ನೀತಿ ಜಾರಿಗೊಳಿಸಲು ನಿರ್ಧರಿಸಿದೆ.
ಆಸ್ಟ್ರೇಲಿಯಾ ಮಾದರಿಗೆ ಸಲಹೆ:
‘ಮಕ್ಕಳ ಪಾಲಿಗೆ ಸಾಮಾಜಿಕ ಜಾಲತಾಣಗಳು ಪಿಡುಗಾಗಿವೆ. ಆದರೆ, ಯಾವುದೇ ತಂತ್ರಜ್ಞಾನವನ್ನು ನಿರ್ಬಂಧಿಸಲು ಸರ್ಕಾರಗಳಿಗೆ ಅವಕಾಶ ಇಲ್ಲ. ಮೊಬೈಲ್ ನಿರ್ಬಂಧಿಸುವ ಬದಲು ಸಾಮಾಜಿಕ ಜಾಲತಾಣಗಳ ಬಳಕೆ ನಿರ್ಬಂಧಿಸಬೇಕು. ಮಕ್ಕಳ ಬೆಳವಣಿಗೆಗೆ ಮಾರಕವಾಗದಂತೆ ಎಚ್ಚರವಹಿಸಬೇಕು. ದುಷ್ಪರಿಣಾಮಗಳನ್ನು ತಡೆಗಟ್ಟಲು ಆಸ್ಟ್ರೇಲಿಯಾ ಮಾದರಿಯನ್ನು ಅಳವಡಿಸಿಕೊಳ್ಳಬೇಕು’ ಎನ್ನುತ್ತಾರೆ ಕರ್ನಾಟಕ ಖಾಸಗಿ ಶಾಲಾ ಕಾಲೇಜು ಪೋಷಕ ಸಂಘಟನೆಗಳ ಸಮನ್ವಯ ಸಮಿತಿ ಅಧ್ಯಕ್ಷ ಬಿ.ಎನ್.ಯೋಗಾನಂದ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.