ADVERTISEMENT

ನನ್ನ ಹೇಳಿಕೆ ಪೇಜಾವರರ ಭಾಷಣದಿಂದ ಉಲ್ಲೇಖಿಸಿದ್ದು: ರಕ್ಷಿತ್ ಶೆಟ್ಟಿಗೆ ಮಿಥುನ್ ರೈ

ರಕ್ಷಿತ್‌ ಶೆಟ್ಟಿ ಅವರನ್ನು ಟಾರ್ಗೆಟ್‌ ಮಾಡಬೇಡಿ ಎಂದೂ ಹೇಳಿರುವ ಮಿಥುನ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಮಾರ್ಚ್ 2023, 11:38 IST
Last Updated 12 ಮಾರ್ಚ್ 2023, 11:38 IST
ಮಿಥುನ್‌ ರೈ ಮತ್ತು ರಕ್ಷಿತ್‌ ಶೆಟ್ಟಿ
ಮಿಥುನ್‌ ರೈ ಮತ್ತು ರಕ್ಷಿತ್‌ ಶೆಟ್ಟಿ    

ಮಂಗಳೂರು: ಉಡುಪಿ ಕೃಷ್ಣ ಮಠದ ಭೂಮಿಗೆ ಸಂಬಂಧಿಸಿದ ಅಭಿಪ್ರಾಯಗಳು ಮತ್ತು ವಿವಾದದ ಕುರಿತು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿ ಮಿಥುನ್ ರೈ ಭಾನುವಾರ ಹೇಳಿಕೆ ಬಿಡುಗಡೆ ಮಾಡಿದ್ದು, ‘ನನ್ನ ಹೇಳಿಕೆಯು ‌ಪೇಜಾವರ ಶ್ರೀಗಳ ಭಾಷಣದಿಂದ ಉಲ್ಲೇಖಿಸಲ್ಪಟ್ಟಿದೆಯೇ ಹೊರತು ಯಾವುದು ನನ್ನ ವೈಯಕ್ತಿಕ ಹೇಳಿಕೆಯಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

`ಉಡುಪಿ ಕೃಷ್ಣ ಮಠಕ್ಕೆ ಜಾಗ ನೀಡಿದ್ದು ಮುಸ್ಲಿಂ ರಾಜರು' ಎಂದು ಮಿಥುನ್ ರೈ ಮೂಡುಬಿದಿರೆಯ ಪುತ್ತಿಗೆ ಮಸೀದಿಯೊಂದರ ಸಮಾರಂಭದಲ್ಲಿ ಹೇಳಿದ್ದರು. ಇದಕ್ಕೆ ಟ್ವಿಟರ್‌ನಲ್ಲಿ ಟೀಕೆ ಮಾಡಿದ್ದ ರಕ್ಷಿತ್‌ ಶೆಟ್ಟಿ, ‘ದೇವಾಲಯಗಳ ನಗರಿ ಉಡುಪಿಗೆ ಸಾವಿರಕ್ಕೂ ಹೆಚ್ಚು ವರ್ಷದ ಬರೆದಿಟ್ಟಿರುವ ಇತಿಹಾಸ ಇದೆ. ನಿಮಗೆ ಈ ಬಗ್ಗೆ ಗೊತ್ತಿರದಿದ್ದರೇ ಏಕೆ ಸಾರ್ವಜನಿಕ ಸಮಾರಂಭಗಳಲ್ಲಿ ನಿಮ್ಮ ಅಜ್ಞಾನ ಪ್ರದರ್ಶಿಸುತ್ತೀರಿ?’ ಎಂದು ಕಿಡಿಕಾರಿದ್ದರು.

ಈ ವಿಚಾರವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಟೀಕೆ ವ್ಯಕ್ತವಾಗಿತ್ತು. ಪರ ವಿರೋಧದ ಚರ್ಚೆಗಳು ನಡೆದಿದ್ದವು. ಒಂದು ಗುಂಪು ಮಿಥುನ್‌ ರೈ ಅವರನ್ನು ಟೀಕಿಸಿದರೆ, ಮತ್ತೊಂದು ಗುಂಪು ರಕ್ಷಿತ್‌ ಶೆಟ್ಟಿ ಅವರನ್ನು ಟೀಕಿಸಿತ್ತು. ವಿಚಾರವು ವಿವಾದದ ರೂಪ ಪಡೆದುಕೊಂಡ ಹಿನ್ನೆಲೆಯಲ್ಲಿ ಮಿಥುನ್‌ ರೈ ಭಾನುವಾರ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ADVERTISEMENT

ಏನಿದೇ ರೈ ಹೇಳಿಕೆಯಲ್ಲಿ?

‘ನಾನು ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರ ನಿಷ್ಠಾವಂತ ಅನುಯಾಯಿ ಹಾಗೂ ಅವರ ಬೋಧನೆಗಳು ಮತ್ತು ಕೋಮು ಸೌಹಾರ್ದ ಸಿದ್ಧಾಂತಗಳನ್ನು ನನ್ನ ಕೊನೆಯ ಉಸಿರು ಇರುವವರೆಗೂ ಪಾಲಿಸುತ್ತೇನೆ.

ನಾನು ಏನೇ ಮಾತನಾಡಿದರೂ ಅದು ಪೇಜಾವರ ಶ್ರೀಗಳ ಭಾಷಣದಿಂದ ಉಲ್ಲೇಖಿಸಲ್ಪಟ್ಟಿದೆಯೇ ಹೊರತು ಯಾವುದು ನನ್ನ ವೈಯಕ್ತಿಕ ಹೇಳಿಕೆಯಲ್ಲ ಏಕೆಂದರೆ ನಾನು ಇತಿಹಾಸಕಾರನಲ್ಲ.

ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿವೆ. ಇಂತಹ ವಿಷಯಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯುವುದಕ್ಕೆ, ಬಿಜೆಪಿಯವರು ಸೃಷ್ಟಿಸಿದ ಇಂತಹ ವಿವಾದಗಳು ಕೇವಲ ರಾಜಕೀಯ ಗಿಮಿಕ್ ಆಗಿದೆ ಎಂಬುವುದು ಸ್ಪಷ್ಟವಾಗಿ ಕಾಣುತ್ತಿದ್ದೆ.

ರಕ್ಷಿತ್ ಶೆಟ್ಟಿ ಅವರ ಮಾತಿನಲ್ಲಿ ಸರಿ ಇರಬಹುದು, ಆದರೆ ನನ್ನ ದೃಷ್ಟಿಕೋನದಿಂದ ನಾನು ಕೂಡ ಸರಿ. ನಮ್ಮ ಗೌರವಾನ್ವಿತ ಶ್ರೀಗಳು ನಮಗೆ ಕಲಿಸಿದ೦ತೆಯೇ ನಾನು ಕೋಮು ಸೌಹಾರ್ದತೆಯನ್ನು ಬೋಧಿಸುತ್ತೇನೆ, ಏಕೆಂದರೆ ಉಡುಪಿ ಮತ್ತು ದಕ್ಷಿಣ ಕನ್ನಡಕ್ಕೆ ಅದರ ಅವಶ್ಯಕತೆಯಿದೆ.

ನನ್ನ ಎಲ್ಲಾ ಅನುಯಾಯಿಗಳು ಈ ಗೊಂದಲ ಮತ್ತು ಸೃಷ್ಟಿಯಾದ ವಿವಾದವನ್ನು ಕೊನೆಗಾಣಿಸಬೇಕೆಂದು ನಾನು ತಮ್ಮಲ್ಲಿ ವಿನಂತಿಸುತ್ತೇನೆ. ಹಾಗೂ ನಮ್ಮ ಯುವ ಉದಯೋನ್ಮುಖ ನಟ ರಕ್ಷಿತ್ ಶೆಟ್ಟಿ ಅವರನ್ನು ಟಾರ್ಗೆಟ್ ಮಾಡಬೇಡಿ, ಅವರು ನಮ್ಮ ತುಳುನಾಡಿನ ಹೆಮ್ಮೆ.

ಏನೇ ಅಡಚಣೆ ಬಂದರು ಸಹ ತುಳುನಾಡಿನ ಶ್ರೇಯೋಭಿವೃದ್ಧಿಗಾಗಿ ಎಲ್ಲರೂ ಒಗ್ಗಟ್ಟಾಗಿ ದುಡಿಯೋಣ.

ಹೀಗೆಂದು ಮಿಥುನ್‌ ರೈ ಅವರು ತಮ್ಮ ಹೇಳಿಕೆಯಲ್ಲಿ ಬರೆದಿದ್ದಾರೆ.

ಇದನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.