ADVERTISEMENT

ನಿಖಿಲ್‌ ಕುಮಾರಸ್ವಾಮಿ ಮದುವೆಯಲ್ಲಿ ನಿಯಮ ಉಲ್ಲಂಘನೆಯಾಗಿಲ್ಲ: ಬಿಎಸ್‌ವೈ 

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2020, 11:46 IST
Last Updated 18 ಏಪ್ರಿಲ್ 2020, 11:46 IST
ನಿಖಿಲ್ ಮತ್ತು ರೇವತಿ ವಿವಾಹ
ನಿಖಿಲ್ ಮತ್ತು ರೇವತಿ ವಿವಾಹ   

ಬೆಂಗಳೂರು: ಲಾಕ್‌ಡೌನ್‌ ನಡುವೆಯೇ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಪುತ್ರ ನಿಖಿಲ್‌ ಅವರ ವಿವಾಹ ಶುಕ್ರವಾರ ನೆರವೇರಿದ್ದು, ಲಾಕ್‌ಡೌನ್ ನಿಯಮ ಉಲ್ಲಂಘಿಸಲಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಚರ್ಚೆಗೆ ಮುನ್ನುಡಿ ಬರೆದಿದೆ. ಈ ಮಧ್ಯೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಯಾವುದೇ ನಿಯಮ ಉಲ್ಲಂಘಿಸಿಲ್ಲ ಎಂದು ತಿಳಿಸಿದ್ದಾರೆ.

ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಪುತ್ರ ನಿಖಿಲ್‌ ಕುಮಾರಸ್ವಾಮಿ ಅವರ ಮದುವೆ ಸಮಾರಂಭದಲ್ಲಿ ಲಾಕ್‌ಡೌನ್‌ ನಿಯಮ ಉಲ್ಲಂಘಿಸಿದ ಬಗ್ಗೆ ಪತ್ರಕರ್ತರು ಕೇಳಿದಾಗ ಪ್ರತಿಕ್ರಿಯಿಸಿದ ಯಡಿಯೂರಪ್ಪ, ‘ಅವರು ನಿಯಮ ಉಲ್ಲಂಘಿಸಿಲ್ಲ. ಎಲ್ಲ ಅನುಮತಿ ಕೊಡಲಾಗಿತ್ತು. ಸರಳವಾಗಿ ಕಾರ್ಯಕ್ರಮ ಮಾಡಿದ್ದಾರೆ. ಅದನ್ನು ಚರ್ಚೆ ಮಾಡುವ ಅಗತ್ಯ ಇಲ್ಲ. ತಮ್ಮ ಬಂಧು ಬಳಗ ದೊಡ್ಡ ಪ್ರಮಾಣದಲ್ಲಿ ಇದ್ದರೂ ಇತಿಮಿತಿಗಳಲ್ಲಿ ಮಾಡಿದ್ದಾರೆ‘ ಎಂದು ಹೇಳಿದ್ದಾರೆ.

ಇನ್ನು ನೆನ್ನೆಯಷ್ಟೇ ಟ್ವೀಟ್ ಮಾಡಿದ್ದ ಕುಮಾರಸ್ವಾಮಿ, ನನ್ನ ಪುತ್ರ ನಿಖಿಲ್ ಮತ್ತು ರೇವತಿ ಅವರ ವಿವಾಹ ಇಂದು ಅತ್ಯಂತ ಸರಳ ರೀತಿಯಲ್ಲಿ ನಡೆಯಲು ಸಹಕರಿಸಿದ ಲಕ್ಷಾಂತರ ಕಾರ್ಯಕರ್ತರು ಮತ್ತು ಕುಟುಂಬದ ಹಿತೈಷಿಗಳಿಗೆ ಹೃದಯಾಂತರಾಳದ ಕೃತಜ್ಞತೆಗಳು. ಶಾಸಕರು, ಕಾರ್ಯಕರ್ತರು, ಮುಖಂಡರು, ಕುಟುಂಬದ ಹಿತೈಷಿಗಳು ಸೇರಿದಂತೆ ನಾಡಿನ ಲಕ್ಷಾಂತರ ಜನರು ನನ್ನ ಕುಟುಂಬದ ಕುಡಿಯ ವಿವಾಹಕ್ಕೆ ಮನೆಯಿಂದಲೇ ಹರಸಿದ್ದೀರಿ. ನಾನು ಮತ್ತು ನನ್ನ ಕುಟುಂಬ ವರ್ಗ ಮಾಡಿದ ಮನವಿಗೆ ನೀವುಗಳು ಸ್ಪಂದಿಸಿದ ರೀತಿ ಅನುಕರಣೀಯ ಮತ್ತು ಮಾದರಿಯಾಗಿದೆ ಎಂದಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.